ತುಮಕೂರು
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮಹಿಳೆಯರು ಸಾಲ ಪಡೆಯುವುದರ ಜೊತೆಗೆ ಮತ್ತೊಬ್ಬರಿಗೆ ಸಾಲ ನೀಡುವಂತರಾಗಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿಂದು ನಗರದ ಜಿಲ್ಲಾ ಬಾಲಭವನದಲ್ಲಿ ಏರ್ಪಡಿಸಿದ್ದ “ಸ್ತ್ರೀಶಕ್ತಿ ಸಮಾವೇಶ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಮಾತ್ರ ಅವರಲ್ಲಿ ಹೆಚ್ಚಿನ ಚೈತನ್ಯ ಹಾಗೂ ಪ್ರಗತಿ ಕಾಣಲು ಸಾಧ್ಯ. ಸ್ತ್ರೀಯರು ಸ್ವ-ಸಹಾಯ ಸಂಘಗಳ ಮೂಲಕ ಪಡೆದ ಹಣವನ್ನು ಇಮ್ಮಡಿಗೊಳಿಸುವ ಮೂಲಕ ಸ್ವಾವಲಂಬಿ ಬದುಕು ಸಾಗಿಸಲು ಮುಂದಾಗಬೇಕು. ಮಹಿಳೆಯರು ತಮ್ಮೊಳಗೆ ಭಿನ್ನಾಭಿಪ್ರಾಯವಿಲ್ಲದೇ ಸಂಘಟಿತರಾಗಿ ಕೆಲಸ ಮಾಡಬೇಕು ಎಂದರು.
ಮಹಿಳೆಯರು ತಮ್ಮ ಬದುಕಿನ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಮೊದಲು ಸಾಲದಿಂದ ಮುಕ್ತರಾಗಬೇಕು. ಮಹಿಳೆಯರು ತಮ್ಮ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸಬೇಕು. ಶಿಕ್ಷಣ ಒದಗಿಸಲು ಸಾಧ್ಯವಾಗುವುದಿಲ್ಲವೆಂದು ಹೆಣ್ಣು ಮಕ್ಕಳನ್ನು ಬೇಗ ವಿವಾಹ ಬಂಧನಕ್ಕೆ ದೂಡುವುದು ಸರಿಯಲ್ಲ. ಆಕೆಗೆ ಉತ್ತಮ ಶಿಕ್ಷಣ ಕೊಡಿಸಿ ಸರಿಯಾದ ಸ್ಥಾನಮಾನಕ್ಕೇರಿಸಿದರೆ ಪುರುಷರಿಗಿಂತ ಮಿಗಿಲಾದ ಸಾಧನೆ ಮಾಡುತ್ತಾಳೆ ಎಂದರು.
ಮಹಿಳೆಯರು ಯಾವುದೇ ಯೋಜನೆಗೆ ಬಂಡವಾಳ ಹೂಡಬೇಕಾದರೆ ಯೋಚಿಸಿ ಅರ್ಥಮಾಡಿಕೊಂಡು ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು. ತಮ್ಮ ಬಳಿ ಇರುವ ಹಣ, ತಮಗೆ ಹಣ ನೀಡುವ ಮಟ್ಟಕ್ಕೆ ಮಹಿಳೆಯರು ಆರ್ಥಿಕವಾಗಿ ಬೆಳೆಯಬೇಕು ಎಂದರಲ್ಲದೇ ಮಹಿಳೆಯರಲ್ಲಿ ಇಂದಿಗೂ ಸಹ ಅರಿವಿನ ಕೊರತೆಯಿದೆ ಎಂದು ಅವರು ತಿಳಿಸಿದರು.
ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸ್ವ-ಸಹಾಯ ಸಂಘವು ಆಸರೆಯಾಗಿದೆ. ಇದರ ಫಲವಾಗಿ ರಾಜ್ಯದ ಸಾವಿರಾರು ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಮಹಿಳೆಯೆಂದರೆ ಶಕ್ತಿ ಸ್ವರೂಪಿಣಿ ಆಕೆ ಮನಸ್ಸು ಮಾಡಿದರೆ ಮಾಡದ ಸಾಧನೆಗಳಿಲ್ಲ ಎಂದರಲ್ಲದೇ ಮಹಿಳೆಯರು ಫ್ಯಾಶನ್ ಮೋಹಕ್ಕೆ ಒಳಗಾಗದೇ ಸರಳ ಜೀವನವನ್ನು ನಡೆಸಬೇಕು ಎಂದರು.
ಶಾಸಕ ಜಿ.ಬಿ ಜ್ಯೋತಿಗಣೇಶ್ ಮಾತನಾಡಿ ಇಂದಿನ ಜಾಗತಿಕ ಮಟ್ಟದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲೀಕರಣರಾಗಬೇಕು. ಗುಡಿ ಕೈಗಾರಿಕೆ ಮೂಲಕ ಮನೆಯಲ್ಲಿಯೇ ಆಹಾರ ಪದಾರ್ಥ, ಮನೆಯ ಅಲಂಕಾರ ವಸ್ತುಗಳನ್ನು ತಯಾರು ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ರಾಜ್ಯ ಸರ್ಕಾರದಿಂದ ಬ್ರಾಂಡ್ ನೀಡುವ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಹಿಳೆಯರು ಉತ್ಪಾದಿಸುವ ಪದಾರ್ಥಗಳಿಗೆ ಉತ್ತಮ ಮಾರ್ಕೆಂಟಿಗ್ ಮಾಡಲು ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಮಾತನಾಡಿ ಸ್ತ್ರೀ ಶಕ್ತಿ ಸಂಘಟನೆಯ ಜೊತೆಗೆ ಪ್ರತಿಯೊಂದು ಕುಟುಂಬ ಮಹಿಳೆಯು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರ ಈಗಾಗಲೇ ಸಹಾಯಧನ ನೀಡುವ ಯೋಜನೆ ರೂಪಿಸಿದೆ. ಸ್ತ್ರೀಶಕ್ತಿ ಸಂಘದ ಮಹಿಳೆಯರು ತಯಾರಿಸುತ್ತಿರುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸಿಗುವಂತೆ ಸರ್ಕಾರದ ಜೊತೆ ಚರ್ಚಿಸಬೇಕು ಎಂದು ಸಚಿವರಿಗೆ ಆಗ್ರಹಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾದರಾ ನರಸಿಂಹಮೂರ್ತಿ, ಮಾಜಿ ಅಧ್ಯಕ್ಷರಾದ ಹುಚ್ಚಯ್ಯ, ಮೇಯರ್ ಲಲಿತ ರವೀಶ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಜಿಲ್ಲಾ ಸ್ತೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶಾಂತಕುಮಾರಿ ಸೇರಿದಂತೆ ಮತ್ತಿತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
