ಮತದಾನ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಿ

ದಾವಣಗೆರೆ :

        ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲಿಕ್ಕಾಗಿ, ಬಿಎಲ್‍ಓ, ಸೆಕ್ಟರ್ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ, ಕಡ್ಡಾಯವಾಗಿ ಮತದಾನ ಮಾಡುತ್ತೇವೆಂದು ಪ್ರತಿಜ್ಞೆ ಮಾಡಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಹೆಚ್.ಬಸವರಾಜೇಂದ್ರ ಸೂಚಿಸಿದರು.

        ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಗರ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಬಿಎಲ್‍ಓ, ಸೆಕ್ಟರ್ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

         ಮತದಾನ ಹೆಚ್ಚಾದರೆ, ಅರ್ಥಪೂರ್ಣ ಚುನಾವಣೆ ನಡೆದಂತಾಗಲಿದೆ. ಆದ್ದರಿಂದ ಅಧಿಕಾರಿಗಳು ಮನೆ-ಮನೆಗೂ ಭೇಟಿ ನೀಡಿ, ಮನೆಯಲ್ಲಿರುವ ಎಲ್ಲಾ ಮತದಾರರನ್ನು ಹೊರಗಡೆ ಕರೆಯಿಸಿ, ಕಡ್ಡಾಯವಾಗಿ ಮತದಾನ ಮಾಡುತ್ತೇನೆಂದು ಪ್ರತಜ್ಞೆ ಮಾಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಬೇಕು. ಇದು ಮತದಾನದ ದಿನದಂದು ಸಹ ನಡೆಸಬೇಕೆಂದು ಸಲಹೆ ನೀಡಿದರು.

         ಕೊಳಗೇರಿಗಳಲ್ಲಿ ಹಾಗೂ ಅನಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಡೆಗಳಲ್ಲಿ ಮತದಾನ ಜಾಗೃತಿಗಾಗಿ ಬೀದಿ ನಾಟಕ ಆಡಿಸಬೇಕು ಹಾಗೂ ಬಡಾವಣೆಗಳಂತವ ಪ್ರದೇಶಗಳಲ್ಲಿ ಡ್ಯಾನ್ಸ್ ಮೂಲಕ ಜಾಗೃತಿ ಮೂಡಿಸಿ ಈ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಿಯೇ ತೀರಬೇಕೆಂದು ತಾಕೀತು ಮಾಡಿದರು.

        ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.70 ರಷ್ಟು ಮತದಾನವಾಗಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ.40.73 ರಷ್ಟು ಮತದಾನವಾಗಿದೆ. ಸರಾಸರಿ ಶೇ.30 ರಷ್ಟು ಕಡಿಮೆಯಾಗಿದ್ದು, ಈ ಬಾರಿ ಮತದಾನ ಪ್ರಮಾಣ ಹೆಚ್ಚ¼ ಮಾಡಬೇಕೆಂಬ ಉದ್ದೇಶದಿಂದ ಜಾಗೃತಿ ಮೂಡಿಸಲಾಗುತ್ತಿದೆ.

         ಆದ್ದರಿಂದ ಯಾವ ಬೂತ್‍ಗಳಲ್ಲಿ ಮತದಾನ ಕಡಿಮೆಯಾಗಿದೆಯೋ ಅಂತಹ ಕಡೆಗಳಲ್ಲಿ ಸ್ವೀಪ್ ಸಮಿತಿಯಿಂದ ವಿಶೇಷ ಕಾರ್ಯಕ್ರಮ ರೂಪಿಸಿ ಜಾಥಾ, ಮೆರವಣಿಗೆ, ಬೀದಿನಾಟಕ ಆಯೋಜಿಸುವುದರ ಜೊತೆಗೆ ರಾಜಕೀಯೇತರ ಮುಖಂಡರನ್ನು ಮನೆಗಳಿಗೆ ಕರೆದುಕೊಂಡು ಹೋಗಿ ಅರಿವು ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದರು.

       ದಾವಣಗೆರೆ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಜಾಲಿ ನಗರ ಸೇರಿದಂತೆ ಹಲವಾರು ವಾರ್ಡ್‍ಗಳಲ್ಲಿ ಅತ್ಯಂತ ಕಡಿಮೆ ಮತದಾನವಾಗಿದ್ದು, ಇದಕ್ಕೆ ಕಾರಣ ಏನೆಂಬುದನ್ನು ತಿಳಿದು ಆ ಸಮಸ್ಯೆಯನ್ನು ಸರಿಪಡಿಸಬೇಕು. ಹೊಳೆಹೊನ್ನೂರು ತೋಟ, ಕೊಂಡಜ್ಜಿ ರಸ್ತೆ, ದುರ್ಗಾಂಬಿಕ ಟ್ರಸ್ಟ್ ಸ್ಕೂಲ್, ಚಿರಡೊಣಿ ಶಾಲೆ, ಜಾಕೀರ್‍ಹುಸೇನ್ ಪ್ರಥಮ ದರ್ಜೆ ಕಾಲೇಜು, ಎಸ್.ಎಮ್.ಶಾಲೆ ಟಿಪ್ಪು ನಗರ, ಈ ಬೂತ್‍ಗಳಲ್ಲಿ ಮತದಾನ ಪ್ರಮಾಣ ಕಡಿಮೆ ಇದ್ದು ವ್ಯಾಪಕ ಪ್ರಚಾರ ನಡೆಸಬೇಕಾಗಿದೆ ಎಂದರು.

        ಮಹಾನಗರ ಪಾಲಿಕೆಯ ಆಯುಕ್ತರಾದ ವೀರೇಂದ್ರ ಕುಂದುಗೋಳ ಮಾತನಾಡಿ, ಶಿಕ್ಷಕರು ಶಾಲಾ ಮಕ್ಕಳಿಗೆ ‘ನಾವು ನಮ್ಮ ಪೋಷಕರಿಂದ ಮತದಾನ ಮಾಡಿಸುತ್ತೇವೆ’ ಎಂದು ಪ್ರತಿಜ್ಞೆ ಮಾಡಿಸಬೇಕು. ಇದರಿಂದ ಮಕ್ಕಳು ತಮ್ಮ ಪೋಷಕರಿಗೆ ಮತದಾನ ಮಾಡುವಂತೆ ಒತ್ತಾಯಿಸುತ್ತಾರೆ ಎಂದು ತಿಳಿಸಿದರು.ಸಭೆಯಲ್ಲಿ ಜಿ.ಪಂ. ಉಪ ಕಾರ್ಯದರ್ಶಿಗಳಾದ ಭೀಮಾನಾಯ್ಕ್, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಬಾಲಕೃಷ್ಣಪ್ಪ, ಸೇರಿದಂತೆ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗಳು, ಬಿಎಲ್‍ಓ, ಸೆಕ್ಟರ್ ಅಧಿಕಾರಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ