ದಾವಣಗೆರೆ
ನಗರವನ್ನು ತಂಬಾಕು ಮುಕ್ತಗೊಳಿಸಲು ಹಾಗೂ ದಾವಣಗೆರೆಯನ್ನು ಕೋಟ್ಪಾ ಉನ್ನತ ಅನುಷ್ಟಾನ ಜಿಲ್ಲೆಯನ್ನಾಗಿಸಲು ಸಂಬಂಧಿಸಿದ ಎಲ್ಲ ಇಲಾಖೆಗಳು ಶ್ರಮ ವಹಿಸಿ ಕೆಲಸ ಮಾಡುವ ಮೂಲಕ ಜನರನ್ನು ತಂಬಾಕಿನ ಅಪಾಯಕಾರಿ ಪರಿಣಾಮದಿಂದ ರಕ್ಷಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಡಿಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ(ಡಿಎಲ್‍ಸಿಸಿ)ಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿನ ತಂಬಾಕು ನಿಯಂತ್ರಣ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಕೋಟ್ಪಾ ಕಾಯ್ದೆ 2003 ರ ಪರಿಣಾಮಕಾರಿ ಅನುಷ್ಟಾನ, ತಂಬಾಕು ದುಷ್ಪರಿಣಾಮಗಳ ಅರಿವು, ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ತಂಬಾಕು ದಾಳಿ ಮಾಡುವ ಮೂಲಕ ತಂಬಾಕು ಮುಕ್ತ ನಗರ(ಟಿಎಫ್‍ಸಿ)ವನ್ನಾಗಿಸಬೇಕು ಹಾಗೂ ಕೋಟ್ಪಾ ಉನ್ನತ ಅನುಷ್ಟಾನ ಜಿಲ್ಲೆಯನ್ನಾಗಿಸುವಲ್ಲಿ ಕಾರ್ಯವೆಸಗಬೇಕು ಎಂದು ಸೂಚನೆ ನೀಡಿದರು.
ದಿನವೂ ಒಂದೇ ರೀತಿಯ ಆಹಾರ ತಿನ್ನುತ್ತಿದ್ದರೆ ಬೇಸರ ಬರುತ್ತದೆ ಅಲ್ಲವೇ, ಅದೇ ರೀತಿಯಲ್ಲಿ ದಿನವೂ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೆ ಬೇಸರ ಸಾಮಾನ್ಯ. ಆದ್ದರಿಂದ ಅಧಿಕಾರಿಗಳು ತಮ್ಮ ದೈನಂದಿನ ಕೆಲಸದೊಂದಿಗೆ ವಿಭಿನ್ನವಾದ ಕೆಲಸಗಳನ್ನು ಖುಷಿಯಿಂದ ಮಾಡಬೇಕು. ನಾನೂ ಸಹ ಹಾಗೇ ಮಾಡುತ್ತೇನೆ. ಆದ್ದರಿಂದ ವಿವಿಧ ಇಲಾಖೆಗಳ ಅಧಿಕಾರಿಗಳು ಆರೋಗ್ಯ ಇಲಾಖೆಯೊಂದಿಗೆ ತಂಬಾಕು ದಾಳಿಯಲ್ಲಿ ಹಾಗೂ ಅರಿವು ಮೂಡಿಸುವ ಕಾರ್ಯದಲ್ಲಿ ಪಾಲ್ಗೊಂಡು ಜಿಲ್ಲೆ ಮತ್ತು ನಗರವನ್ನು ತಂಬಾಕು ಮುಕ್ತಗೊಳಿಸಲು ಸಹಕರಿಸಬೇಕು. ನಾನೂ ಸಹ ಮುಂದಿನ ದಿನಗಳಲ್ಲಿ ತಂಬಾಕು ದಾಳಿಯಲ್ಲಿ ಪಾಲ್ಗೊಳ್ಳುತ್ತೇನೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಈ ಬಾರಿ ಹೊನ್ನಾಳಿ ತಾಲ್ಲೂಕನ್ನು ಉನ್ನತ ಕೋಟ್ಪಾ ಅನುಷ್ಟಾನ ತಾಲ್ಲೂಕನ್ನಾಗಿ ಘೋಷಿಸಲು ಆಯ್ಕೆ ಮಾಡಿ ಈಗಾಗಲೇ ಕೋಟ್ಪಾ ಕಾಯ್ದೆಯ ಮುಖ್ಯ ಕಲಂಗಳಾದ 4, 5, 6, 7 ಗಳನ್ನು ಶೇ.85 ರಷ್ಟು ಅನುಷ್ಟಾನಗೊಳಿಸಲಾಗಿದೆ. ತಾಲ್ಲೂಕನ್ನು ಅಧಿಕೃತವಾಗಿ ಉನ್ನತ ಕೋಟ್ಪಾ ಅನುಷ್ಟಾನ ತಾಲ್ಲೂಕು ಎಂದು ಘೋಷಿಸುವುದು ಮಾತ್ರ ಬಾಕಿ ಇದೆ. ಹೊನ್ನಾಳಿ ತಂಬಾಕು ಬೆಳೆಗಾರರ ಕಾರ್ಯಾಗಾರ ನಡೆಸಿ ಪೂರಕ ಬೆಳೆ ಬೆಳೆಯುವಂತೆ ತಿಳಿಸಲಾಗಿದೆ. ಎನ್‍ಟಿಸಿಪಿ ಕಾರ್ಯಕ್ರಮದಡಿ ತಂಬಾಕು ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ 100 ಶಾಲೆಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
ಮುಖ್ಯವಾಗಿ ಸೆಕ್ಷನ್ 6ಬಿ ರನ್ವಯ ಶಿಕ್ಷಣ ಸಂಸ್ಥೆಗಳ 100 ಗಜದೊಳಗೆ ತಂಬಾಕು ಮಾರಾಟ ಮಾಡದಂತೆ ಮನವೊಲಿಸಲು ವಿನೂತನವಾಗಿ ಅಂಗಡಿಯವರಿಗೆ ಗುಲಾಬಿ ನೀಡುವ ಮೂಲಕ ಗುಲಾಬಿ ಆಂದೋಲನ ಮಾಡಲಾಗಿದೆ ಎಂದರು.
ಎಫ್.ಸಿ.ಟಿ.ಸಿ 5.3 ಆರ್ಟಿಕಲ್ ಪ್ರಕಾರ ತಂಬಾಕು ಉತ್ಪನ್ನ ಕಂಪನಿಗಳ ಪ್ರತಿನಿಧಿಗಳು/ಅದರ ಅಂಗ ಸಂಸ್ಥೆಗಳು/ದಲ್ಲಾಳಿಗಳು ಯಾವುದೇ ಅಧಿಕಾರಿಗಳ ಜೊತೆಗೆ ಭೇಟಿ/ವ್ಯವಹರಿಸುವ ಮೊದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತಾಲಯದ ಅನುಮತಿ ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ 2018-19 ನೇ ಸಾಲಿನಲ್ಲಿ 24 ತಂಬಾಕು ದಾಳಿಗೆ ಗುರಿಗೆ 55 ತಂಬಾಕು ನಡೆಸಲಾಗಿತ್ತು. ಈ ಬಾರಿ 48 ಗುರಿ ಇದ್ದು 44 ತಂಬಾಕು ದಾಳಿ ನಡೆಸಲಾಗಿದೆ ಎಂದರು.ಮಾಯಾ ಸಂಸ್ಥೆಯ ವ್ಯವಸ್ಥಾಪಕ ಜತಿನ್‍ಚಂದ್ ಪಿಪಿಟಿ ಪ್ರದರ್ಶನ ನೀಡಿ ಮಾತನಾಡಿ, ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಜನರನ್ನು ತಂಬಾಕಿನ ಅಪಾಯಕಾರಿ ಪರಿಣಾಮದಿಂದ ರಕ್ಷಿಸಲು ಜಿಲ್ಲಾಡಳಿತ ಹಾಗೂ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ತಂಬಾಕು ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಾರಂಭಗೊಳಿಸಿ ಸೆಕ್ಷನ್ 4 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಸೆಕ್ಷನ್ 5 ತಂಬಾಕು ಮತ್ತು ಇತರೆ ತಂಬಾಕು ಉತ್ಪನ್ನ ಜಾಹಿರಾತು ನಿಷೇಧ, ಸೆಕ್ಷನ್ 6 ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳಜು ಸಿಗದಂತೆ ನಿಷೇಧ, 6ಬಿ ಶಿಕ್ಷಣ ಸಂಸ್ಥೆಗಳ 100 ಗಜದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ಶಿಕ್ಷಾರ್ಹ ಅಪರಾಧ, ಸೆಕ್ಷನ್ 7 ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ಮೇಲೆ ನಿರ್ದಿಷ್ಟ ಆರೋಗ್ಯ ಎಚ್ಚರಿಕೆ ಸಂದೇಶವಿಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಸೇರಿದಂತೆ ಕೋಟ್ಪಾ ಕಾಯ್ದೆಯನ್ನು ಶೇ.85 ರಷ್ಟು ಯಶಸ್ವಿಯಾಗಿ ಅನುಷ್ಟಾನಗೊಳಿಸಿದ್ದು ತಂಬಾಕು ಮುಕ್ತ ನಗರ ಎಂದು ಘೋಷಿಸುವುದು ಮಾತ್ರ ಬಾಕಿಇದೆ ಎಂದರು.