ದಾವಣಗೆರೆ:
ಪಕ್ಷದ ಬಲವರ್ಧನೆಗೆ ಶ್ರಮಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು, ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ ಕೆ.ಹೆಚ್.ಓಬಳಪ್ಪ ಕರೆ ನೀಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್‍ನ ಅಸಂಘಟಿತ ಕಾರ್ಮಿಕ ವಿಭಾಗದಿಂದ ಏರ್ಪಡಿಸಿದ್ದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ಹಾಗೂ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆಯುವುದು ಒಳ್ಳೆಯದಲ್ಲ. ಮುಂದೆಯೂ ಅಧಿಕಾರ, ಸ್ಥಾನಮಾನ ಸಿಗಲಿವೆ. ಹೀಗಾಗಿ ಕಾರ್ಯಕರ್ತರು ಸದೃಢರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಬರೀ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸಿ ಬಿಜೆಪಿಯವರು ಅಧಿಕಾರ ಹಿಡಿಯುವುದರಲ್ಲಿ ಪ್ರಬಲರಾಗುತ್ತಿದ್ದಾರೆ. ಆದರೆ, ನಾವು ನಿಜ ಹೇಳಿ ಹಿಂದುಳಿಯುತ್ತಿದ್ದೇವೆ. ಆದರೆ ಕೇವಲ ಅಧಿಕಾರಕ್ಕಾಗಿ ಸುಳ್ಳು ಹೇಳುವುದು ಬೇಡ. ಸತ್ಯದ ಮೂಲಕ ಕಾಂಗ್ರೆಸ್ ಜನರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ತಿಳಿ ಹೇಳಿ ಬಿಜೆಪಿಯನ್ನು ಎದುರಿಸೋಣ ಎಂದು ಸಲಹೆ ನೀಡಿದರು.
ಬಿಜೆಪಿ ಪಕ್ಷದಲ್ಲಿ ಜಾತೀಯತೆಯೇ ತುಂಬಿದೆ. ಆ ಪಕ್ಷದಲ್ಲಿ ಸಾಮಾನ್ಯ ಜನರಿಗೆ ಅವಕಾಶವೇ ಇಲ್ಲ. ಕಾಂಗ್ರೆಸ್‍ನಲ್ಲಿ ಎಲ್ಲಾ ಜಾತಿ, ಧರ್ಮದವರ ಸಮ್ಮಿಲನವಿದೆ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಕಾಶೀನಾಥ್, ಕಾಂಗ್ರೆಸ್ ಪರಿಶಿಷ್ಟ ವಿಭಾಗದ ರಾಜ್ಯ ಕಾರ್ಯದರ್ಶಿ ನಾಗರಾಜ ನಾಯ್ಕ, ನಜೀರ್ ಅಹಮ್ಮದ್, ಅಂಘಟಿತ ಕಾರ್ಮಿಕರ ಜಿಲ್ಲಾ ಅಧ್ಯಕ್ಷ ನಂಜಾನಾಯ್ಕ, ಮಲೆಬೆನ್ನೂರು ಬ್ಲಾಕ್ ಅಧ್ಯಕ್ಷೆ ಮಂಜುಳಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ