ಸ್ಮಾರ್ಟ್‍ಸಿಟಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಿ

ತುಮಕೂರು

  ಸ್ಮಾರ್ಟ್‍ಸಿಟಿ ಯೋಜನೆಯ ಅನುಷ್ಠಾನವು ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ನಡೆಯಲಿದೆ. ಅದರಲ್ಲಿ ಬದಲಾವಣೆ ಅಸಾಧ್ಯ. ಆದ್ದರಿಂದ ನಿಮ್ಮ ನಿಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಆಗುತ್ತಿರುವ ಕಾಮಗಾರಿಗಳ ಅನುಷ್ಠಾನಕ್ಕೆ ನೀವು ಶ್ರಮಿಸಿ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ತುಮಕೂರು ಮಹಾನಗರ ಪಾಲಿಕೆ ಸದಸ್ಯರಿಗೆ ಸಲಹೆ ನೀಡಿದರು.

   ಅವರು ಶನಿವಾರ ಮಧ್ಯಾಹ್ನ ತುಮಕೂರು ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಕೆಲವು ಸದಸ್ಯರು ಎತ್ತಿದ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ದರು.

    ಈ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ 100 ಕೋಟಿಯಂತೆ 5 ವರ್ಷಗಳ ಕಾಲ ಅನುದಾನ ನೀಡಲಿದೆ. ಇದೇ ರೀತಿ ರಾಜ್ಯ ಸರ್ಕಾರವೂ ಅನುದಾನ ಕೊಡಲಿದೆ. ದೇಶದ ಪ್ರತಿ ಸ್ಮಾರ್ಟ್ ಸಿಟಿಯೂ ಒಂದೊಂದು ಘೋಷಣಾ ವಾಕ್ಯದಿಂದ (ಥೀಮ್) ಆಯ್ಕೆಗೊಂಡಿದೆ. ತುಮಕೂರು ನಗರವು “ಲೇಕ್ ಬೇಸ್ಡ್ ಸಿಟಿ” ಎಂಬ ಥೀಮ್ ಹೊಂದಿದ್ದು, ಆಯಾ ಥೀಮ್‍ಗೆ ಹೊಂದಿಕೊಂಡಂತೆಯೇ ಅಭಿವೃದ್ಧಿ ಕಾಮಗಾರಿಗಳು ಆಗಲಿವೆ. ಯೋಜನೆಗಳ ಅನುಷ್ಠಾನಕ್ಕಾಗಿಯೇ “ಸ್ಪೆಷಲ್ ಪರ್ಪಸ್ ವೆಹಿಕಲ್” (ಎಸ್.ಪಿ.ವಿ.) ಎಂಬ ಸಮಿತಿ ಇದ್ದು, ನಿಗದಿಪಡಿಸಲಾದ ಯೋಜನೆಗಳನ್ನು ಬದಲಿಸಲು ಶಾಸಕರಿಗಾಗಲಿ, ಕಾರ್ಪೋರೇಷನ್‍ಗಾಗಲಿ ಅಧಿಕಾರ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

     ಈ ಎಸ್.ಪಿ.ವಿ.ಗೆ ಪಾಲಿಕೆಯ ಮೇಯರ್, ಉಪಮೇಯರ್ ನಿಮ್ಮ ಪಾಲಿಕೆಯ ಪ್ರತಿನಿಧಿಗಳಾಗಿ ಇರುತ್ತಾರೆ. ಅಧಿಕಾರಿಗಳೂ ಈ ಸಮಿತಿಯಲ್ಲಿರುತ್ತಾರೆ. ಅಂತಿಮವಾಗಿ ವ್ಯವಸ್ಥಾಪಕ ನಿರ್ದೇಶಕರಿಗೆ (ಎಂ.ಡಿ.) ಸಂಪೂರ್ಣ ಅಧಿಕಾರ ಇರುತ್ತದೆ ಎಂದು ಅವರು ಹೇಳಿದರು.
ಈ ಸಮಿತಿಗೆ 10 ಕೋಟಿ ರೂ.ಗಳವರೆಗಿನ ಕಾಮಗಾರಿಗಳನ್ನು ನಿರ್ವಹಿಸುವ ಅಧಿಕಾರ ಇರುತ್ತದೆ. 10 ಕೋಟಿ ಮೀರಿದ ಮೊತ್ತವಾದರೆ ಅದಕ್ಕೆ ಹೈಪವರ್ ಕಮಿಟಿಯ ಅನುಮತಿ ಪಡೆಯಬೇಕಾಗುತ್ತದೆ. ಇಡೀ ತುಮಕೂರು ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ಒಂದೇ ಹಂತದಲ್ಲಿ ಸಾಧ್ಯವಾಗದು. ಅದಕ್ಕಾಗಿಯೇ ಈಗ ಸೀಮಿತ ಪ್ರದೇಶದಲ್ಲಿ ಮಾತ್ರ ಅಭಿವೃದ್ಧಿ ಆಗಲಿದೆ. ನಂತರ ಉಳಿದ ಪ್ರದೇಶಗಳತ್ತ ಗಮನಿಸಬಹುದು. ಈಗ ಇರುವ ಸ್ಥಿತಿಯಲ್ಲೇ ಅಭಿವೃದ್ಧಿ ಮಾಡಬಹುದು ಅಥವಾ ಹೊಸ ರೀತಿಯನ್ನು ಅನುಸರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

     ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಕೆಲವು ವಾರ್ಡ್‍ಗಳಲ್ಲಿ ಮಾತ್ರ ಅಭಿವೃದ್ಧಿ ಆಗುತ್ತಿದ್ದು, ಉಳಿದ ವಾರ್ಡ್‍ಗಳಲ್ಲಿ ಆಗುತ್ತಿಲ್ಲ ಎಂಬುದು ಸತ್ಯ. ಆದರೆ ರಾಜ್ಯ ಸರ್ಕಾರ ಒದಗಿಸುವ 125 ಕೋಟಿ ರೂ. ಅನುದಾನದಲ್ಲಿ ಸ್ಮಾರ್ಟ್‍ಸಿಟಿಗೆ ಒಳಪಡದ ಪ್ರದೇಶಗಳಲ್ಲಿ ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿಯಮಾನುಸಾರ ಪ್ರಯತ್ನಿಸಬಹುದು ಎಂದು ಸಚಿವ ಖಾದರ್ ಅವರು ಪಾಲಿಕೆ ಸದಸ್ಯರಿಗೆ ಸಲಹೆಯಿತ್ತರು.

       ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಅವರು ಸಮಗ್ರ ವಿವರ ನೀಡಿದರು.

     ಇದೇ ರೀತಿ ಸಚಿವ ಖಾದರ್ ಅವರು ಸಂಜೆಯವರೆಗೂ ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ, ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನೆ ನಡೆಸಿದರು.ಇದಕ್ಕೂ ಮೊದಲು ಸಚಿವರು ನಗರದ ಕುಡಿಯುವ ನೀರಿನ ಆಸರೆಯಾದ ಬುಗುಡನಹಳ್ಳಿ ಹೇಮಾವತಿ ಜಲಸಂಗ್ರಹಾಗಾರ ಒಳಗೊಂಡು ನಗರದ ವಿವಿಧ ಸ್ಥಳಗಳಿಗೆ ತೆರಳಿ ಅಭಿವೃದ್ಧಿ ಕಾಮಗಾರಿ ಗಳನ್ನು ಪರಿಶೀಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap