ಕುಣಿಗಲ್
ವಿದ್ಯಾರ್ಥಿಗಳು ಛಲ ಬಿಡದೆ ಕಠಿಣ ಪರಿಶ್ರಮದಿಂದ ಅಭ್ಯಸಿಸಿದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದರಾದ ಡಿ.ಕೆ.ಸುರೇಶ್ ತಿಳಿಸಿದರು.
ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ ಹೇಮಗಿರಿದೇವಸ್ಥಾನದ ತಪ್ಪಲಿನಲ್ಲಿ ಸುಮಾರು 15 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಮುರಾರ್ಜಿದೇಸಾಯಿ ವಸತಿ ಶಾಲಾಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಸರ್ಕಾರ ಹಾಗೂ ಅಧಿಕಾರಿಗಳು ಕೆಲ ಬದಲಾವಣೆ ಮಾಡಿಕೊಂಡರೆ ಮಾತ್ರ ಶಿಕ್ಷಣ ಕ್ಷೇತ್ರವನ್ನು ಬಲಿಷ್ಠವಾಗಿ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಸರ್ಕಾರ ಹಳ್ಳಿಗಾಡಿನ ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಮುಂದಾಗಿದ್ದು, ವಿದ್ಯಾರ್ಥಿಗಳು ಕಠಿಣ ಶ್ರಮದಿಂದ ವಿದ್ಯಾಭ್ಯಾಸ ಮಾಡಿದೇಶಕ್ಕೆ , ಪೋಷಕರಿಗೆ ಹೆಸರುತರುವಂತಹ ವಿದ್ಯಾರ್ಥಿಗಳಾಗಬೇಕೆಂದು ಕಿವಿ ಮಾತು ಹೇಳಿದರು.
ತಾಲ್ಲೂಕಿನ ಜನತೆಗೆ ಹೇಮಾವತಿ ನೀರು ಹರಿಸುವಲ್ಲಿ ಬಿಜೆಪಿ ಮುಖಂಡರಾದ ಮಾಜಿ ಸಂಸದ ಜಿ.ಎಸ್.ಬಸವರಾಜು ನ್ಯಾಯ ಒದಗಿಸಿಕೊಟ್ಟಿದ್ದಾರಾ? ಈ ಕ್ಷೇತ್ರದ ಮೂರು ಬಾರಿ ಲೋಕಸಭಾ ಸದಸ್ಯರಾಗಿ ಈ ತಾಲ್ಲೂಕಿಗೆ ನೀಡಿದ ಕೊಡುಗೆ ಏನೆಂಬುದನ್ನ ಅರಿತುಕೊಳ್ಳಬೇಕಾಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ಹರಿಯಬೇಕಾಗಿದ್ದ ಹೇಮಾವತಿ ನೀರನ್ನ ತಮ್ಮ ಅಧಿಕಾರದ ಅವಧಿಯಲ್ಲಿ ಕೃಷ್ಣ ನೀರಾವರಿ ಪ್ರದೇಶಕ್ಕೆ ಹರಿಸಿಕೊಳ್ಳುವಾಗ ಮಾಜಿ ಸಂಸದ ಜಿ.ಎಸ್.ಬಸವರಾಜುರವರ ಪೌರುಷ ಎಲ್ಲಿ ಹೋಗಿತ್ತು ಎಂದು ಗೇಲಿ ಮಾಡಿದರು.
ನನ್ನ ಕನಕಪುರ ಹಾಗೂ ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಆಸೆ ಇಲ್ಲ, 50 ವರ್ಷಗಳ ನಂತರ ಯತೇಚ್ಛವಾಗಿ ಹೇಮಾವತಿ ನೀರು 200 ಟಿಎಂಸಿಯಷ್ಟು ತಮಿಳುನಾಡು ಪಾಲಾಗಿದೆ ಎಂದರು. ತಾಲ್ಲೂಕಿನ ಕೊನೆಯ ಭಾಗವಾದ ಕುಣಿಗಲ್ ತಾಲ್ಲೂಕಿಗೆ ಕಳೆದ 20 ವರ್ಷಗಳಿಂದಲೂ ನಿಮ್ಮ ದಬ್ಬಾಳಿಕೆ ದೌರ್ಜನ್ಯದಿಂದ ಈ ಭಾಗಕ್ಕೆ ತಾಂತ್ರಿಕದೋಷದ ನೆಪ ಹೇಳಿ ನೀರು ಹರಿಸುವಲ್ಲಿ ವಿಫಲಗೊಂಡು ಅನ್ಯಾಯ ಮಾಡಿದ್ದೀರಿ. ಈಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರನ್ನ ದಿಕ್ಕು ತಪ್ಪಿಸಲು ಹೊರಟು ವಿನಾಕಾರಣ ಟೀಕೆ ಮಾಡುವುದನ್ನ ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿ 9 ಕೆರೆಗಳಿಗೆ 33 ಕೋಟಿ ವೆಚ್ಚದಲ್ಲಿ ಮುತ್ತುರಾಯನಕೆರೆ, ದೀಪಾಂಬುದಿ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಂತೇಮಾವತ್ತೂರು ಪ್ರದೇಶದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನ ಆರಂಭಿಸಲಾಗುವುದು ಎಂದರು.
ಶಾಸಕ ಡಾ.ರಂಗನಾಥ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕನಕಪುರದವರು ಕ್ಷೇತ್ರದ ಶಾಸಕರಾದರೆ ಬಂಡೆಗಳನ್ನ ಕರಗಿಸುತ್ತಾರೆ ಎಂದು ವ್ಯಂಗ್ಯವಾಡುತ್ತಿದ್ದ ವಿರೋಧ ಪಕ್ಷದವರನ್ನ ಟೀಕಿಸಿ, ಬಂಡೆಯ ಮೇಲೆ ಸುಂದರವಾದ ವಸತಿ ಶಾಲೆ ನಿರ್ಮಿಸಲಾಗಿದೆ ಎಂದರು. ಈಗಾಗಲೇ ಕ್ಷೇತ್ರದ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಹೂಡಿ ಜನರ ಕಷ್ಟವನ್ನ ಪರಿಹರಿಸುವುದರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದು, ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಶುದ್ದ ನೀರು, ಕುಣಿಗಲ್ ಹಾಗೂ ಹುಲಿಯೂರುದುರ್ಗದಲ್ಲಿ ರಸ್ತೆಅಭಿವೃದ್ದಿ, ಹುತ್ರಿದುರ್ಗ ಹೋಬಳಿಗೆ ಶ್ರೀರಂಗ ಏತನೀರಾವರಿ 300 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ಮಾಣ, ಬಂಡಿಹಳ್ಳಿ ಏತನೀರಾವರಿ, ಮಾರ್ಕೋನಹಳ್ಳಿ ದೊಡ್ಡಕೆರೆಗೆ ತುಂಬಿಸಲು ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್‍ರವರ ವಿಶೇಷ ಪ್ರಯತ್ನ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನ ಈಗಾಗಲೇ ಕೈಗೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮೊರಾರ್ಜಿ ವಸತಿ ಶಾಲೆ ಕಟ್ಟಡಕ್ಕೆ ಶ್ರಮಿಸಿದ ಹಿರಿಯರಾದ ಹೊನ್ನೇಗೌಡ, ಹುಲ್ಲೂರಯ್ಯ, ಬೋಜಯ್ಯ, ರುದ್ರಪ್ಪ , ಅನುಸೂಯಮ್ಮ ವೈ.ಕೆ.ಆರ್ ಸೇರಿದಂತೆ ಅನೇಕರನ್ನ ಸನ್ಮಾನಿಸಲಾಯಿತು. ಜಿ.ಪಂ.ಸದಸ್ಯೆ ಅನುಸೂಯಮ್ಮ, ತಾ.ಪಂ.ಸದಸ್ಯ ಅಲ್ಲಾಬಕಾಷ್,ಪುರಸಭಾಉಪಾಧ್ಯಕ್ಷ ಅರುಣ್‍ಕುಮಾರ್, ಇಓ ಶಿವರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
