ತುರುವೇಕೆರೆ
ದೇಶದ 44 ಕಾಂಗ್ರೆಸ್‍ನ ಹಾಲಿ ಸಂಸದರಿಗೆ ಟಿಕೆಟ್ ನೀಡಿದ್ದು ತುಮಕೂರು ಹಾಲಿ ಸಂಸದ ಎಸ್.ಪಿ.ಮುದ್ದಹನುಮೆಗೌಡರಿಗೆ ಟಿಕೆಟ್ ತಪ್ಪಿಸಲು ಕಾರಣವೇನು ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರು ಕಾಂಗ್ರೆಸ್ ಹೈಕಮಾಂಡ್‍ನ್ನು ಪ್ರಶ್ನಿಸಿದ್ದಾರೆ.
ಪಟ್ಟಣದ ಪಟೇಲ್ ಕಂಫರ್ಟ್ ಆವರಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಎಸ್.ಪಿ.ಮುದ್ದಹನುಮೆಗೌಡರು ಸಜ್ಜನ, ಪ್ರಾಮಾಣಿಕ, ಸರಳ. ಓರ್ವ ಉತ್ತಮ ಸಂಸತ್ ಪಟುವಾಗಿ ಕೆಲಸ ಮಾಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಬೆಳೆಸಲು ಕಾರಣರಾಗಿದ್ದಾರೆ. ಹಾಲಿ 44 ಸಂಸದರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ ಹೈಕಮಾಂಡ್ ತುಮಕೂರನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ. ಮುದ್ದಹನುಮೆಗೌಡರಿಗೆ ಟಿಕೆಟ್ ಯಾವ ಕಾರಣಕ್ಕೆ ತಪ್ಪಿಸಲಾಗಿದೆ ಎಂದು ಮುಖಂಡರು, ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಹೈಕಮಾಂಡ್ ಕೂಡಲೆ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಹಿರಿಯ ಮುಖಂಡ ದಾನಿಗೌಡ ಮಾತನಾಡಿ, ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲವು ಸಾಧಿಸಬಹುದಾಗಿದೆ. ಆದ್ದರಿಂದ ತುಮಕೂರು ಕ್ಷೇತ್ರವನ್ನು ಸಜ್ಜನ ರಾಜಕಾರಣಿ ಸಂಸದ ಮುದ್ದಹನುಮೇಗೌಡರಿಗೆ ಬಿಟ್ಟು ಕೊಡಬೇಕೆಂದು ಕೋರುತ್ತೇವೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅಸಮಧಾನಗೊಂಡರೆ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಹೊಡೆತ ಬೀಳಲಿದೆ ಎಂದರು.
ದೇವೆಗೌಡರು ಸ್ವಜಾತಿ ವಿರೋಧಿ:
ಹೆಚ್.ಡಿ.ದೇವೆಗೌಡರು ಸ್ವಜಾತಿ ವಿರೋಧಿಯಾಗಿದ್ದಾರೆ. ಹಲವಾರು ಒಕ್ಕಲಿಗ ಮುಖಂಡರನ್ನು ರಾಜಕೀಯದಲ್ಲಿ ತುಳಿದುಹಾಕಿದ್ದಾರೆ. ಈಗ ಸಂಸದ ಮುದ್ದಹನುಮೆಗೌಡರ ಬೆಳವಣಿಗೆಗೆ ಹೆಚ್.ಡಿ. ದೇವೆಗೌಡರೆ ಅಡ್ಡಿಯಾಗಿದ್ದಾರೆ ಎಂದು ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಎಂ.ವಿಶ್ವೇಶ್ವರಯ್ಯ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಟಿ.ಎನ್.ಶಶಿಶೇಖರ್, ಯಜಮಾನ್‍ಮಹೇಶ್, ರುದ್ರೇಶ್, ಮುಖಂಡರಾದ ಕೊಳಾಲ ನಾಗರಾಜು, ನಂಜುಂಡಪ್ಪ, ರಂಗೆಗೌಡ, ಜೋಗಿಪಾಳ್ಯ ಶಿವರಾಜು, ಕೊಳಘಟ್ಟ ಶಿವಾನಂದ್, ಬೇವಿನಹಳ್ಳಿ ಬಸವರಾಜು, ಕಾಂತರಾಜ ಅರಸ್, ನಾಗರಾಜು ಸೇರಿದಂತೆ ಇತರೆ ಮುಖಂಡರುಗಳು ಪಾಲ್ಗೊಂಡಿದ್ದರು.