ಚಿಕ್ಕನಾಯಕನಹಳ್ಳಿ
ಯಾವುದೇ ಧರ್ಮ, ಜಾತಿ, ಲಿಂಗಭೇದಗಳಿಲ್ಲದೆ ಸಮಾಜದಲ್ಲಿ ಎಲ್ಲರೂ ಸಮಾನರು ಎನ್ನುವ ಭಾವನೆ ಬಂದಾಗ ಮಾತ್ರ ಜಾತ್ಯತೀತ ಪರಿಕಲ್ಪನೆಗೆ ಅರ್ಥ ಬರುತ್ತದೆ ಎಂದು ಮಹದೇವ್ ಡಿ ಕಾಂಬಳೆ ತಿಳಿಸಿದರು.
ಅವರು ಚಿಕ್ಕನಾಯಕನಹಳ್ಳಿ ನಗರದ ತೀನಂಶ್ರೀ ಭವನದಲ್ಲಿ ಕರ್ನಾಟಕ ಸರ್ಕಾರ, ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಚಿಕ್ಕನಾಯಕನಹಳ್ಳಿ ಹಾಗೂ ಡಾ. ಃ.ಖ ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ (ರಿ) ವತಿಯಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಎರಡು ದಿನದ ಅಸ್ಪೃಶ್ಯತಾ ನಿರ್ಮೂಲನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಸಮಾಜದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಗುಲಾಮಗಿರಿತನ ತಾಂಡವವಾಡುತ್ತಿದೆ. ಈ ಗುಲಾಮಗಿರಿ ಹೋಗಬೇಕಾದರೆ ನಾಗರಿಕರು ಸುಶಿಕ್ಷಿತರಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ನಾಗಭೂಷಣ್ ಬಗ್ಗನಡು ಮಾತನಾಡಿ, ಸಮಾನತೆ ಇಲ್ಲದೆ ಸ್ವಾತಂತ್ರಕ್ಕೆ ಅರ್ಥವಿರುವುದಿಲ್ಲ. ಸಮುದಾಯಗಳ ನಡುವೆ ಸೋದರತೆ, ಸಹೋದರತ್ವ ಇರಬೇಕಾಗುತ್ತದೆ ಎಂದು ತಿಳಿಸಿ,
ತುಮಕೂರು ವಿವಿಯ ಡಾ.ಕೆ ಮಹಾಲಿಂಗ ಮಾತನಾಡಿ, ಕಾನೂನಿಗೆ ಮಾನವೀಯ ಸ್ಪರ್ಷ ಸಿಕ್ಕಿದಾಗ ಮಾತ್ರ ಜೀವ ಬರಲು ಸಾಧ್ಯ. ದುರ್ಬಲ ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ರಾಷ್ಟ್ರ್ರದ, ರಾಜ್ಯದ ಆಯವ್ಯಯದಲ್ಲಿ ಇಂತಿಷ್ಟು ಅನುದಾನ ತೆಗೆದಿಡಬೇಕಾಗುತ್ತದೆ ಎಂದು ತಿಳಿಸಿ, ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 ಹಾಗು ಪರಿಷ್ಕೃತ ನಿಯಮಗಳು 2016 ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಪ್ರಗತಿಪರ ಚಿಂತಕ ಶ್ರೀನಿವಾಸ್‍ಮೂರ್ತಿ ಮಾತನಾಡಿ, ಹುಟ್ಟುತ್ತಾ ವಿಶ್ವಮಾನವ, ಬೆಳೆಯುತ್ತಾ ಜಾತಿ, ಧರ್ಮಗಳ ಸಂಕೋಲೆಯಲ್ಲಿ ಸಿಲುಕುತ್ತಾನೆ ಎಂದು ತಿಳಿಸಿ, 1955 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ ಪುರುಷೋತಮ್ ಮಾತನಾಡಿ, ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ವಾಂಗೀಣ ಅಭಿವೃದ್ದಿ ಸಾಧ್ಯವಾಗಿಲ್ಲ.
ಅಸ್ಪೃಶ್ಯತೆ ಬಗ್ಗೆ ಅರಿವು ಉಂಟುಮಾಡಲು ಮಾಧ್ಯಮಗಳ ಅವಶ್ಯಕತೆ ಇದೆ. ಕಾಲನಿಗಳು, ದಲಿತರು, ಹರಿಜನರು ವಾಸಿಸುವ ಪ್ರದೇಶಗಳು ಅಭಿವೃದ್ದಿಯಾಗ ಬೇಕು ಎಂದು ತಿಳಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಸರ್ವತೋಮುಖ ಅಭಿವೃದ್ದಿಗೆ ಮಾಧ್ಯಮಗಳ ಹೊಣೆಗಾರಿಕೆ ಕುರಿತು ಮಾತನಾಡಿದರು. ಪಾಧ್ಯಾಪಕ ಹೊನ್ನಾಂಜಿನಯ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಸವಾಲುಗಳು ಹಾಗೂ ಪರಿಹಾರೋಪಾಯಗಳು ವಿಷಯ ಕುರಿತು ಉಪನ್ಯಾಸ ನೀಡಿದರು.
ಚಿಂತಕ ರಂಗಸ್ವಾಮಿ ಮಾತನಾಡಿ, ಸರ್ಕಾರಿ ಯೋಜನೆಗಳು ಕಾರ್ಯಕ್ರಮಗಳ ಬಗ್ಗೆ ಜನಜಾಗೃತಿ ಉಂಟುಮಾಡಬೇಕು. ಸಾಮಾಜಿಕ ಬದ್ದತೆ, ಮಾಡುವ ಕಾರ್ಯದಲ್ಲಿ ನಿಷ್ಟೆ ಅತ್ಯಗತ್ಯ ಎಂದು ತಿಳಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಶ್ರೇಯೋಭಿವೃದ್ದಿಗೆ ಸಾಂವಿಧಾನಿಕ ಅವಕಾಶಗಳು ಕುರಿತಂತೆ ವಿಷಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾದೇವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹನ ಪ್ರಾರ್ಥಿಸಿ, ಶ್ರೀನಿವಾಸ್ ಸ್ವಾಗತಿಸಿದರು. ಸಂಸ್ಥೆ ಅಧ್ಯಕ್ಷ ರಾಜಶೇಖರ್ ಕೆ. ನಿರೂಪಿಸಿದರು. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ (ರಿ) ಪದಾಧಿಕಾರಿಗಳು, ತಾಲ್ಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ