ಸೊಳ್ಳೆ ನಿಯಂತ್ರಣದಿಂದ ಮಲೇರಿಯ ಹತೋಟಿ ಸಾಧ್ಯ

ತುಮಕೂರು

        ನೈರ್ಮಲ್ಯ ಕಾಪಾಡಿ, ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಿ ಮಲೇರಿಯ ರೋಗ ಹರಡುವುದನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕು. ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು, ಮಲೇರಿಯ ದೃಢಪಟ್ಟಲ್ಲಿ ರೋಗಕ್ಕೆ ನಿರ್ಧಿಷ್ಟ ಚಿಕಿತ್ಸೆ ನೀಡಲಾಗುತ್ತದೆ. ಈ ಸೇವೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ ಆರ್ ಚಂದ್ರಕಲಾ ಹೇಳಿದರು.

       ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೂನ್ಯ ಮಲೇರಿಯ ನನ್ನಿಂದ ಪ್ರಾರಂಭ ಎಂಬ ಘೋಷಣೆಯೊಂದಿಗೆ ಏಪ್ರಿಲ್ 25ರಂದು ವಿಶ್ವ ಮಲೇರಿಯ ದಿನ ಆಚರಿಸಲಾಗುತ್ತಿದೆ. ಸಮುದಾಯದಲ್ಲಿ ಅರಿವು ಮೂಡಿಸುವ ಮೂಲಕ ಮಲೇರಿಯ ರೋಗದ ಸಂಪೂರ್ಣ ನಿಯಂತ್ರಣ ಸಾಧ್ಯ ಎಂದರು.

        ತುಮಕೂರು ಜಿಲ್ಲೆಯಲ್ಲಿ ಮಲೇರಿಯ ನಿಯಂತ್ರಣದಲ್ಲಿದೆ. ಆದರೆ, ವಲಸಿಗರಿಂದ ಈ ರೋಗ ಆಗಾಗ ಕಾಣಿಸಿಕೊಳ್ಳುತ್ತಿದೆ. ಪಾವಗಡ ತಾಲ್ಲೂಕಿನಲ್ಲಿ ಕಳೆದ ವರ್ಷ ಹೆಚ್ಚಿನ ಮಲೇರಿಯ ಪ್ರಕರಣ ಪತ್ತೆಯಾದವು, ಜಿಲ್ಲೆಯ ಒಟ್ಟು 103 ಪ್ರಕರಣಗಳಲ್ಲಿ ಪಾವಗಡ ತಾಲ್ಲೂಕಿನಲ್ಲಿ 48 ಪ್ರಕರಣಗಳು ವರದಿಯಾಗಿವೆ. ಅಲ್ಲಿ ಸೋಲಾರ್ ಪಾರ್ಕ್ ಆರಂಭವಾದ ನಂತರ ಉತ್ತರ ಭಾರತದಿಂದ ಬಂದಿರುವ ಕಾರ್ಮಿಕರಿಂದಾಗಿ ಮಲೇರಿಯ ಕಂಡುಬಂದಿದೆ. ಉತ್ತರ ಭಾರತದಲ್ಲಿ ಮಲೇರಿಯ ಪ್ರಕರಣ ಜಾಸ್ತಿ ಇವೆ. ಆರಂಭದಲ್ಲೇ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ ಎಂದು ಹೇಳಿದರು.

        ಜಿಲ್ಲೆಯಲ್ಲಿ ಈ ವರ್ಷದ ಮಾರ್ಚ್ ಅಂತ್ಯಕ್ಕೆ 14 ಪ್ರಕರಣ ವರದಿಯಾಗಿವೆ. ರಾಜ್ಯದಲ್ಲಿ ಮಲೇರಿಯ ರೋಗವನ್ನು 2025ಕ್ಕೆ ನಿವಾರಣೆ ಮಾಡುವ ಗುರಿ ಹೊಂದಲಾಗಿದ್ದು, ಈ ಗುರಿಯನ್ನು ಹಂತಹಂತವಾಗಿ ಸಾಧಿಸಲು ಯೋಜಿಸಲಾಗಿದೆ. ಜಿಲ್ಲೆಯಲ್ಲಿ 2020ಕ್ಕೆ ಮಲೇರಿಯ ರೋಗ ನಿವಾರಣೆ ಮಾಡಬೇಕಾಗಿದೆ ಎಂದು ಡಿಹೆಚ್‍ಓ ಡಾ. ಚಂದ್ರಕಲಾ ಹೇಳಿದರು.

         ಮನೆ ಸುತ್ತಮುತ್ತ ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕು, ಮನೆಯಲ್ಲಿ ಸಂಗ್ರಹಿಸುವ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಸ್ವಚ್ಚಗೊಳಿಸಬೇಕು, ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸಬಹುದು ಎಂದರು.

         ಜಿಲ್ಲಾ ರೋಗವಾಹಕ ಆಶ್ರಿತಾ ರೋಗಗಳ ನಿಯಂತ್ರಣಾಧಿಕಾರಿ ಡಾ. ಟಿ ಎನ್ ಪುರುಷೋತ್ತಮ್ ಮಾತನಾಡಿ, ಸೊಳ್ಳೆಗಳ ಉತ್ಪತ್ತಿಗೆ ಪೂರಕವಾದ ವಾತಾವರಣ ಹಾಗೂ ನೈರ್ಮಲ್ಯಕ್ಕೆ ಒತ್ತು ನೀಡದಿರುವುದು ಮಲೇರಿಯ ಹರಡಲು ಕಾರಣವಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯುವ ಮೂಲಕ ಈ ರೋಗವನ್ನು ಹತೋಟಿಗೆ ತರಬಹುದು ಎಂದು ಹೇಳಿದರು.

        ಮಲೇರಿಯ ರೋಗಾಣು ಬರಿ ಕಣ್ಣಿಗೆ ಕಾಣದ ಅತಿ ಸಣ್ಣ ಕ್ರಿಮಿ. ಅನಾಫಿಲೀಸ್ ಜಾತಿಯ ಹೆಣ್ಣು ಸೊಳ್ಳೆ ಮಲೇರಿಯವನ್ನು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಚಳಿ ನಂತರ ವಿಪರೀತ ಜ್ವರ, ಸ್ವಲ್ಪ ಹೊತ್ತಿನ ನಂತರ ಮೈ ಬೆವರುವುದು, ಮೈಕೈ ನೋವು, ಹಲವರಿಗೆ ವಾಂತಿ, ನಂತರ ನಿಶ್ಯಕ್ತಿ ಇವು ಮಲೇರಿಯ ಲಕ್ಷಣ. ಯಾವುದೇ ಜ್ವರವಿರಲಿ, ರೋಗಿಯ ರಕ್ತ ಪರೀಕ್ಷೆಯ ನಂತರ ಮಲೇರಿಯ ಎಂದು ದೃಢಪಡಿಸಲು ಸಾಧ್ಯ.

        ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ವಯಂ ಸೇವಕರಿಂದ ನಡೆಸಲಾಗುತ್ತಿರುವ ಜ್ವರ ಚಿಕಿತ್ಸಾ ಕೇಂದ್ರಗಳು ಹಾಗೂ ಮನೆಮನೆಗೆ ಭೇಟಿ ನೀಡುವ ಆರೋಗ್ಯ ಸಹಾಯಕರಲ್ಲಿ ರಕ್ತ ಲೇಪನ ನೀಡಬಹುದು ಎಂದು ಡಾ. ಪುರುಷೋತ್ತಮ್ ಹೇಳಿದರು.
ಮಲೇರಿಯ ರೋಗವನ್ನು ರಾಜ್ಯದಲ್ಲಿ ಅಧಿಸೂಚಿತ ರೋಗ ಎಂದು ಸರ್ಕಾರದಿಂದ ಘೋಷಿಸಲಾಗಿದೆ.

         ಮಲೇರಿಯಾ ನಿಯಂತ್ರಣಾ ಹಂತದಲ್ಲಿ ಪ್ರತಿಯೊಂದು ಮಲೇರಿಯ ಪ್ರಕರಣವನ್ನು ವರದಿ ಮತ್ತು ತನಿಖೆ ಮಾಡುವುದು ಕಡ್ಡಾಯವಾಗಿರುವುದರಿಂದ ಖಾಸಗಿ ವಲಯವು ಮಲೇರಿಯ ರೋಗ ಪತ್ತೆ ಮಾಡಿದಲ್ಲಿ ಸರ್ಕಾರಿ ವಲಯಕ್ಕೆ ತಿಳಿಸಬೇಕು ಇದರಿಂದ ಇಲಾಖೆ ಮಲೇರಿಯ ರೋಗಿಯ ಗ್ರಾಮ ಅಥವಾ ಪ್ರದೇಶದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಕೀಟ ಶಾಸ್ತ್ರಜ್ಞರಾದ ಉಷಾ ಹಾಗೂ ಇಲಾಖೆ ಸಿಬ್ಬಂದಿ ಸುದ್ದಿಗೋಷ್ಠಿಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap