ಹರಿಹರ:
ದೈಹಿಕ ಆರೋಗ್ಯದಷ್ಟೆ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು ಎಂಬ ಅರಿವು ಮೂಡಿಸಲು 1992ರಿಂದ ಜಾಗತಿಕ ಮಟ್ಟದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಇಲ್ಲಿನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಅವಿನಾಶ್ ಚಿಂದು ಹೆಚ್.ಹೇಳಿದರು.
ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದಿಂದ ನಗರದ ಡಿಆರ್‍ಎಂ ಪಿಯು ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಜನರಲ್ಲಿ ಮಾನಸಿಕ ಅನಾರೋಗ್ಯದ ಪ್ರಮಾಣ ಹೆಚ್ಚಾಗಿದ್ದರಿಂದ, ಸ್ವಾಸ್ಥ ಮಾನಸಿಕತೆ ಕ್ಷೀಣಸಿದ್ದರಿಂದ ಯೋಗ್ಯ ಮಾನವ ಸಂಪನ್ಮೂಲ ಸೃಷ್ಟಿಸುವುದಕ್ಕಾಗಿ ಈ ಆಚರಣೆಯ ಮಾಡಲಾಗುತ್ತಿದೆ ಎಂದರು.
ನಮ್ಮ ಕಣ್ಣು, ಕಿವಿ, ಬಾಯಿ ಮುಂತಾಗಿ ದೇಹ ಸರಿಯಾಗಿದ್ದರೆ ಮಾತ್ರ ಸಾಲದು, ನಮ್ಮ ಆಲೋಚನೆ, ಭಾವನೆಗಳೂ ಸಹ ಸರಿಯಾಗಿರಬೇಕು. ವರ್ತನೆಗಳು ಸಹಜವಾಗಿರಬೇಕು. ಆರೋಗ್ಯ ಎನ್ನುವುದು ದೇಹ ಮತ್ತು ಮನಸ್ಸು ಎರಡಕ್ಕೂ ಸಂಬಂಧಿಸಿದ್ದು, ಇವೆರಡೂ ಸುಸ್ಥಿತಿಯಲ್ಲಿದ್ದಾಗ ಮಾತ್ರ ಆರೋಗ್ಯಯುತ ಬದುಕು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಸದೃಡ ಮಾನಸಿಕತೆ ಹೊಂದಿರಬೇಕು, ಮಾತು, ನಡೆತೆ, ವರ್ತನೆ ಎಲ್ಲವೂ ಆಯಾ ಸಂದರ್ಭಕ್ಕೆ ತಕ್ಕಂತೆ ಸುಸಂಬದ್ದವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಆಲೋಚನೆಗಳಿರಬೇಕು, ಆತ್ಮವಿಶ್ವಾಸ ತುಂಬಿರಬೇಕು, ಶಿಕ್ಷಕರು ಹೇಳುವದನ್ನು ಸರಿಯಾಗಿ ಆರ್ಥೈಸಿಕೊಂಡು, ಅಭ್ಯಾಸ ಮಾಡಿ ಉತ್ತಮ ಪಲಿತಾಂಶ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮತನಾಡಿದ ವಕೀಲರಾದ ಜಿ.ಹೆಚ್.ಭಾಗೀರಥಿ, ಮಾನಸಿಕ ವ್ಯಾದಿಗಳಿಗೆ ದೆವ್ವ-ಭೂತಗಳ ಹಣೆಪಟ್ಟಿ ಕಟ್ಟುವುದು, ಮಾನಸಿಕ ರೋಗ ವಾಸಿಯಾಗುವುದಿಲ್ಲ, ಚಿಕಿತ್ಸೆ ಫಲ ನೀಡುವುದಿಲ್ಲ ಎನ್ನುವಂತ ತಪ್ಪು ನಂಬಿಕೆ ಹೋಗಲಾಡಿಸಿ, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಸಣ್ಣಪುಟ್ಟ ಮಾನಸಿಕ ಸಮಸ್ಯೆಗಳನ್ನು ಕಡೆಗಣಿಸಿದರೆ ದೈಹಿಕ ರೋಗಗಳಿಗೆ ದಾರಿಯಾಗುತ್ತದೆ. ಮಾನಸಿಕ ಒತ್ತಡ ಹೃದಯ ಬಡಿತ ಹೆಚ್ಚಿಸುತ್ತೆ, ತಲೆನೋವು, ಪಾಶ್ವವಾಯುವಿಗೂ ಕಾರಣವಾಗುತ್ತೆ. ಮೈ ಕೈ, ಬೆನ್ನು-ಕತ್ತು ನೋವು, ಮಲಬದ್ದತೆಗಳಿಗೆ ಒತ್ತಡವೂ ಕಾರಣವಾಗಬಲ್ಲದು. ಮೆದುಳು ಮತ್ತು ಮನಸ್ಸಿನ ಮೇಲೆ ವಿಪರೀತಿ ಒತ್ತಡ ಬಿದ್ದಾಗ ಸಿಟ್ಟು, ಸೆಡವು, ಕಿರಿಕಿರಿ, ಏಕಾಗ್ರತೆ ಕೊರತೆ ಉಂಟಾಗುತ್ತದೆ ಎಂದರು.
ಚಿಗಟೇರಿ ಜಿಲ್ಲಾಸ್ಪತ್ರೆ ಮಾನಸಿಕ ತಜ್ಞ ಡಾ|ಕರಿಬಸಪ್ಪ ಮಠದ್ ವಿ. ಉಪನ್ಯಾಸ ನೀಡಿದರು. ವಕೀಲರಾದ ನಾಗರಾಜ್ ಬಿ., ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಹಲವಾಗಲು ಮಾತನಾಡಿದರು.
ಪ್ರಾಚಾರ್ಯ ಜಿ.ಬಿ.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು, ಎಜಿಪಿ ಸಿ.ಚನ್ನಪ್ಪ, ವಕೀಲರ ಸಂಘದ ಉಪಾಧ್ಯಕ್ಷೆ ಶುಭ ಕೆ.ಎಸ್., ಉಪನ್ಯಾಸಕರಾದ ಅನುಪಮಾ, ಮಂಜಪ್ಪ ದಾಸರ್, ನಾಗಭೂಷಣ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ