ವಿಶ್ವ ತಾಯಂದಿರ ದಿನದ ಕಾರ್ಯಕ್ರಮ

ತುರುವೇಕೆರೆ:

      ಸನಾತನ ಕಾಲದ ಋಷಿಮುನಿಗಳಿಂದ ಹಿಡಿದು ಇಂದಿನ ತಂತ್ರಜ್ಞಾನ ಯುಗದ ತನಕವೂ ‘ತಾಯಿ’ ಯ ಬಗೆಗಿನ ಮನೋಧರ್ಮ, ಪರಿಕಲ್ಪನೆ ಮತ್ತು ದೃಷ್ಟಿಕೋನಗಳು ಹೆಚ್ಚು ಮೌಲ್ವಿಕತೆಯನ್ನು ಪಡೆದುಕೊಂಡಿದೆ ಎಂದು ತುಮಕೂರಿನ ರಾಮಕೃಷ್ಣಾಶ್ರಮದ ಸ್ವಾಮಿ ವಿರೇಶಾನಂದ ಸರಸ್ವತಿ ತಿಳಿಸಿದರು.

       ಪಟ್ಟಣದ ಚಿದಂಬರೇಶ್ವರ ಉಚಿತ ಗ್ರಂಥಾಲಯದ ವತಿಯಿಂದ ಇಲ್ಲಿನ ಗಾಯಿತ್ರಿ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಿಂಗಳಿಗೊಂದು ಪುಸ್ತಕ ಪರಿಚಯ ಹಾಗು ವಿಶ್ವ ತಾಯಂದಿರ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಾವುದೇ ಕಾಲಮಾನದ ಸನ್ಯಾಸಿಯಾಗಲಿ, ಚಿಂತಕನಾಗಲಿ, ಸಿರಿವಂತನಾಗಲಿ ತಾಯಿಗೆ ತನ್ನದೇ ಭಾವನಾತ್ಮಕ ಹಾಗು ಭಕ್ತಿಯುತ ಬದ್ದತೆಯನ್ನು ತೋರ್ಪಡಿಸುತ್ತಾನೆ.

       ಕಾವ್ಯ, ಪುರಾಣ, ಚರಿತ್ರೆ, ಮಹಾಕಾವ್ಯಗಳಲ್ಲಿ ತಾಯಿ ಬಗ್ಗೆ ಅಪಾರ ಜೀವನ ಪ್ರೀತಿ ವ್ಯಕ್ತಪಡಿಸಿರುವುದನ್ನು ಅಧ್ಯಯನಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ. ಯಾವುದೇ ಸ್ತ್ರೀಯ ಜೀವನ ಸಾರ್ಥಕತೆಗೊಳ್ಳುವುದು ಆಕೆಯ ಮಾತೃಪೂರ್ಣದೊಂದಿಗೆ ಮಾತ್ರ ಸಾದ್ಯ ಎಂಬುದನ್ನು ಬಲ್ಲವರು ಹೇಳುತ್ತಾರೆ.

       ಪ್ರಪಂಚದ ಎಲ್ಲಾ ದೇಶಗಳಿಗಿಂತಲೂ ಭಾರತದಲ್ಲಿ ಹೆಣ್ಣಿಗೆ ಪವಿತ್ರವಾದ ಸ್ಥಾನಮಾನ ನೀಡಲಾಗಿದೆ. ಇಂದು ಮನುಷ್ಯ ತಮ್ಮ ಜೀವನದಲ್ಲಿ ಸಹಜತೆಯನ್ನು ಕಳೆದುಕೊಂಡು ಶುಷ್ಕನಾಗಿ ಮಾರ್ಪಾಡಾಗುತ್ತಿದ್ದಾನೆ. ನಿಜವಾದ ಜ್ಞಾನಿ ಕೇವಲ ಹೆಚ್ಚು ಓದಿಕೊಂಡವನಲ್ಲ ಬದಲಾಗಿ ತನ್ನನ್ನು ಹಾಗು ನೆರೆಹೊರೆಯವರನ್ನೂ ತನ್ನಂತೆ ಕಂಡು ಸಹಜೀವನದೆಡೆ ಹೋಗುವವನೆ ಸಕಲ ಜ್ಞಾನಿ.

      ದೇಶವನ್ನು ನಾಶ ಮಾಡಲು ಬಾಂಬ್, ಬಂದೂಕುಗಳೇನೂ ಬೇಕಿಲ್ಲ. ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ದುರ್ಭಲಗೊಳಿಸಿದರೆ ಸಾಕು. ಹಾಗಾಗಿಯೇ ಭಾರತದ ಶೈಕ್ಷಣಿಕ ವ್ಯವಸ್ಥೆಯೇ ಪರಿಣಾಮಕಾರಿ ಎಂಬುದು ಇಡೀ ಜಗತ್ತಿಗೆ ಅರಿವಿದೆ. ಪುಸ್ತಕಗಳು, ಗ್ರಂಥಗಳು ನಮ್ಮ ವಿಚಾರ ಲಹರಿಯನ್ನೇ ಪೂರ್ಣ ಪ್ರಮಾಣದಲ್ಲಿ ಬದಲಿಸಿ ಬದುಕಿನ ಸಾರ್ಥಕತೆಗೆ ದಾರಿಯಾಗಬಲ್ಲವು.

       ವಿವೇಕಾನಂದರು ತಮ್ಮ ಅಪಾರ ಬುದ್ದಿಮತ್ತೆಯಿಂದ ಪಾಶ್ಚಾತ್ಯರನ್ನು ಒಂದು ಮುಷ್ಟಿಯಲ್ಲಿ ಹಿಡಿದು ಆಧ್ಯಾತ್ಮಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ತಿದ್ದಿದವರು. ತಾಯಿ ಅಥವಾ ಹೆಣ್ಣಿನಲ್ಲಿ ಆದರ್ಶ, ಶಿಸ್ತು, ಹೊಂದಾಣಿಕೆ, ಚಾರಿತ್ರಿಕ ಮೌಲ್ಯಗಳು ಇಡೀ ಕುಟುಂಬವನ್ನು ಏಕತೆಯ ನೆಲೆಗಟ್ಟಿನಲ್ಲಿ ನಿಲ್ಲಿಸಬಲ್ಲದು. ಹಿಂದಿನ ದೊಡ್ಡ ವ್ಯಕ್ತಿಗಳನ್ನು ಹೊಸ ತಲೆಮಾರಿನ ಸಮಾಜ ಪ್ರಶ್ನಾತೀತ ಮನೋಭಾವನೆಯಲ್ಲಿ ನೋಡುತ್ತಿರುವುದು ನಿಜಕ್ಕೂ ಗಮನಾರ್ಹ.

       ನೆಹರೂ ಅವರ ಬಾಯಿಯಲ್ಲಿ ಎಂದಿಗೂ ‘ರಾಮ’ ಅನ್ನು ಶಬ್ದವೇ ಬರಲಿಲ್ಲ; ಜೊತೆಗೆ ಅವರು ಒಂದು ಕಡೆ ‘ನಾನು ಆಕಸ್ಮಿಕ ಹಿಂದು’ ಎಂದು ಹೇಳಿಕೊಂಡಿರುವುದು ಖಂಡಿತವಾಗಿಯೂ ವಿಪರ್ಯಾಸದ ಸಂಗತಿ. ಬ್ರಾಹ್ಮಣ್ಯ ಎನ್ನುವುದು ಜಾತಿ ಸೂಚಕವಲ್ಲ ಅದೊಂದು ಜೀವನ ಪ್ರೀತಿ ಎಂದು ಅಭಿಪ್ರಾಯಪಟ್ಟರು.

       ಇದೇ ಸಂಧರ್ಭದಲ್ಲಿ ಶಾರದಾದೇವಿ ಅವರ ಮಾತೃತ್ವ ಅನನ್ಯತೆಯ ಬಗ್ಗೆ ಸಹ ಸೋದಾಹರಣವಾಗಿ ವಿವರಿಸಿದರು. ಚಿದಂಬರೇಶ್ವರ ಗ್ರಂಥಾಲಯದ ವತಿಯಿಂದ ವಿವಿಧ ವರ್ಗದ ಸಾಧಕರಾದ ಇಂದ್ರಮ್ಮ, ಪುಷ್ಪಾವತಿ ಸೇರಿದಂತೆ ಐದು ಮಂದಿಯನ್ನು ಗೌರವಿಸಿ ಸನ್ಮಾನಿಸಲಾಯಿತು. ಪತ್ರಿಕೆ ವಿತರಿಸುವ ಬಡ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

        ಸಾಮಾಜಿಕ ಕಳಕಳಿಯುಳ್ಳ ಶ್ರೀ ಚಿದಂಬರೇಶ್ವರ ಗ್ರಂಥಾಲಯದ ಶ್ರೀಮತಿ ಲಲಿತ ರಾಮಚಂದ್ರು ದಂಪತಿಗಳನ್ನು ಸ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ.ಸಾ.ಪ ತಾಲ್ಲೂಕು ಗೌರವಾಧ್ಯಕ್ಷ ಪ್ರೊ.ಪುಟ್ಟರಂಗಪ್ಪ, ಅಧ್ಯಕ್ಷ ನಂ.ರಾಜು, ಲಯನ್ಸ್ ಕ್ಲಬ್ ನ ಟಿ.ಎ.ವಿ.ಗುಪ್ತಾ, ರೋಟರಿ ಕ್ಲಬ್ ನ ಪ್ರಕಾಶ್ ಗುಪ್ತಾ, ಬ್ರಾಹ್ಮಣ ಸಂಘದ ರಂಗನಾಥ್, ವಕೀಲರುಗಳಾದ ಪಿ.ಹೆಚ್. ಧನಪಾಲ್, ಡಿ.ಟಿ. ರಾಜಶೇಖರ್, ಐಪಿಎಸ್ ಶಾಲೆಯ ಆಡಳಿತಾಧಿಕಾರಿ ಡಾ.ರುದ್ರಯ್ಯಹಿರೇಮಠ್, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್, ಪ.ಯೋ.ಶಿ.ಸಮಿತಿ ಅಧ್ಯಕ್ಷ ಆನಂದ್‍ರಾಜು, ಕೃಷ್ಣಚೈತನ್ಯ, ನರಸಿಂಹಮೂರ್ತಿ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link