ದಾವಣಗೆರೆ:
ಅನಕ್ಷರತೆ ಮತ್ತು ಬಡತನವೇ ಜನಸಂಖ್ಯಾ ಸ್ಪೋಟಕ್ಕೆ ಕಾರಣವಾಗಿದ್ದು, ಹೀಗಾಗಿ ಇವುಗಳನ್ನು ನಿರ್ಮೂಲನೆ ಮಾಡುವ ಮೂಲಕ ಜನಸಂಖ್ಯಾ ಸಮತೋಲನ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಪ್ರತಿಪಾದಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ದೇಶದ ಪ್ರಗತಿಯಲ್ಲಿ ಜನಸಂಖ್ಯೆಯೂ ಮಹತ್ವ ಸಂಪನ್ಮೂಲವಾಗಿದೆ. ಹೀಗಾಗಿ ಅನಕ್ಷರತೆ ಮತ್ತು ಬಡತನವನ್ನು ನಿರ್ಮೂಲನೆ ಮಾಡುವ ಮೂಲಕ ಜನಸಂಖ್ಯಾ ಸಮತೋಲನ ಕಾಪಾಡಬೇಕಾಗಿದೆ ಎಂದು ಹೇಳಿದರು.
ಪ್ರಸ್ತುತ ಬಡವರು ಸಹ ಎಲ್ಲರಂತೆ ಘನತೆಯಿಂದ ಬದುಕಬೇಕೆಂಬ ಮನೋಭಾವ ಹೊಂದಿದ್ದಾರೆ. ಹೀಗಾಗಿ ತಮ್ಮ ಮಕ್ಕಳಿಗೆ ಕಾನ್ವೆಂಟ್‍ಗಳ ಮೂಲಕ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಆದರೆ, ಕಾನ್ವೆಂಟ್‍ಗಳಲ್ಲಿ ದುಬಾರಿ ಡೊನೇಷನ್, ಫೀ ನೋಡಿ ಹೆಚ್ಚು ಮಕ್ಕಳಾದರೆ, ಉತ್ತಮ ಶಾಲೆಗಳಲ್ಲಿ ಶಿಕ್ಷಣ ಕೊಡಿಸಲಾಗದು ಎಂಬ ಕಡಿಮೆ ಮಕ್ಕಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ ಕಾನ್ವೆಂಟ್ ಶಿಕ್ಷಣ ಕೂಡ ಜನಸಂಖ್ಯಾ ನಿಯಂತ್ರಣಕ್ಕೆ ಪರೋಕ್ಷವಾಗಿ ಕಾರಣವಾಗಿದೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲದಿದ್ದರೂ, ಜನಸಂಖ್ಯೆ ನಿಯಂತ್ರಣದಲ್ಲಿ ತನ್ನ ಪಾತ್ರ ವಹಿಸಿದೆ ಎಂದು ನುಡಿದರು.
ಗುಣಾತ್ಮಕತೆಯಿಂದ ಕೂಡಿದ ಜನಸಂಖ್ಯೆ ಕೆಟ್ಟದ್ದಲ್ಲ. ಆದರೆ, ನಮ್ಮಲ್ಲಿನ ಮಾನವ ಸಂಪನ್ಮೂಲ ಸರಿಯಾದ ರೀತಿಯಲ್ಲಿ ಬಳಕೆ ಆಗಬೇಕು. ಜನಸಂಖ್ಯಾ ಸಮತೋಲನ ಕಾಪಾಡಿಕೊಳ್ಳಬೇಕಿದೆ. ನಮ್ಮ ದೇಶ ಇಡೀ ಜಗತ್ತಿಗೇ ಜನಸಂಖ್ಯೆಯನ್ನು ರಫ್ತು ಮಾಡುತ್ತಿದೆ. ಉತ್ತಮ ಇಂಜಿನಿಯರುಗಳು, ವೈದ್ಯರು, ಕುಶಲಕರ್ಮಿಗಳನ್ನು ನಾವು ವಿವಿಧ ದೇಶಗಳಿಗೆ ರಫ್ತು ಮಾಡುವ ಮೂಲಕ ಗುಣಮಟ್ಟದ ಸಂಪನ್ಮೂಲ ನೀಡುತ್ತಿದ್ದೇವೆ.
ಆದ್ದರಿಂದಲೇ ನಮ್ಮ ನಗರ ಹಾಗೂ ಬೆಂಗಳೂರಿನಂತಹ ನಗರಗಳಲ್ಲಿ ಕೇವಲ ತಂದೆ-ತಾಯಿಗಳು ಮನೆಯಲ್ಲಿರುತ್ತಾರೆ. ಮಕ್ಕಳೆಲ್ಲಿ ಎಂದು ಕೇಳಿದರೆ, ಅಮೇರಿಕಾ, ಇಂಗ್ಲೆಂಡ್ ಹೋಗಿದ್ದಾರೆಂದು ಹೇಳುತ್ತಾರೆ. ಇದೇ ಪರಿಸ್ಥಿತಿ ಮುಂದುವರೆಯುತ್ತಾ ಹೋದರೆ ಮುಂದೊಂದು ದಿನ ಭಾರತ ದೇಶ ವೃದ್ಧಾಶ್ರಮ ಆಗುವುದರಲ್ಲಿ ಸಂಶಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ತು.ಕ.ಶಂಕರಯ್ಯ ಮಾತನಾಡಿ, 1930ರಲ್ಲಿ ಸಾಹಿತಿ ದ.ರಾ.ಬೇಂದ್ರೆಯವರು ಮಕ್ಕಳಿರಲವ್ವ 33 ಕೋಟಿ ಎನ್ನುತ್ತಿದ್ದರು. ಆದರೆ ಇದೀಗ ಈ ಸಂಖ್ಯೆ ಮಿತಿ ಮೀರಿದೆ. ಮಿತಿಯಿಲ್ಲದ ಜನಸಂಖ್ಯೆಯಿಂದ ಅಭಿವೃದ್ದಿ ಕುಂಠಿತವಾಗುತ್ತಿದೆ. ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಆದ್ದರಿಂದ ಎಲ್ಲರಲ್ಲೂ ಜನಸಂಖ್ಯಾ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಜೆಜೆಎಂ ವೈದ್ಯಕೀಯ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಶುಭಾ ಮಾತನಾಡಿ, ಪ್ರಸ್ತುತ ವಿಶ್ವದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೊದಲನೇ ದೇಶ ಚೀನಾ 142 ಕೋಟಿ, ಎರಡನೇ ಸ್ಥಾನದಲ್ಲಿ ಭಾರತ 136 ಕೋಟಿ, ಮೂರನೇ ಸ್ಥಾನದಲ್ಲಿ ಅಮೇರಿಕಾ 33 ಕೋಟಿ ಜನಸಂಖ್ಯೆ ಹೊಂದಿದೆ. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಚೀನಾ ಮತ್ತು ಅಮೇರಿಕಾ ದೇಶದಲ್ಲಿ ಪ್ರಾದೇಶಿಕ ವಿಸ್ತಾರ 9 ಮಿಲಿಯನ್ ಚದರ ಕಿ.ಮೀ ಇದ್ದರೆ ಭಾರತದಲ್ಲಿ ಕೇವಲ 3 ಮಿಲಿಯನ್ ಚದರ ಕಿ.ಮೀ ಇದೆ. ಹಾಗೂ ಜನಸಾಂದ್ರತೆಯೂ ನಮ್ಮ ದೇಶದಲ್ಲಿ ಅತಿ ಹೆಚ್ಚಿದ್ದು, ಜನಸಂಖ್ಯೆ ಬೆಳೆಯುತ್ತಿರುವ ಪ್ರಮಾಣ ಕೂಡ ಹೆಚ್ಚಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಪ್ರಸ್ತುತ ವಿಶ್ವದ ಜನಸಂಖ್ಯೆ 7.5 ಶತಕೋಟಿ ಇದ್ದು, ಇದರಲ್ಲಿ ಶೇ.17.5 ರಷ್ಟು ಭಾರತದ ಜನಸಂಖ್ಯೆ ಇದೆ. 2070ರ ಹೊತ್ತಿಗೆ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲನೇ ಸ್ಥಾನಕ್ಕೆ ಬರಬಹುದು. ಹಿಂದೆ ಮರಣಸಂಖ್ಯೆ ಪ್ರಮಾಣ ಹೆಚ್ಚಿತ್ತು. ಇದೀಗ ಉತ್ತಮ ಆರೋಗ್ಯ ಸುಧಾರಣಾ ಕ್ರಮಗಳಿಂದ ಮರಣ ಸಂಖ್ಯೆ ಪ್ರಮಾಣ ಕಡಿತವಾಗಿದ್ದು, ಜನನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಭ ಮಾತನಾಡಿ, ಜನಸಂಖ್ಯೆ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಪಾತ್ರ ಮುಖ್ಯವಾಗಿದ್ದು, ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಒದಗಿಸಲಾಗುತ್ತಿರುವ ಜನನ ನಿಯಂತ್ರಣ ಮಾರ್ಗಗಳನ್ನು ಅನುಸರಿಸುವ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಸಹರಿಸಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಕಾರಾಧ್ಯ ಪ್ರಾಸ್ತಾವಿಕವಾಗಿ ಮಾತನಾಡಿ, 1987 ರ ಜು.11 ರಂದು ವಿಶ್ವದ ಜನಸಂಖ್ಯೆಯು 500 ಕೋಟಿಯನ್ನು ತಲುಪಿದ ಪರಿಣಾಮವಾಗಿ, ಡಬ್ಲ್ಯುಹೆಚ್‍ಓ ವಿಶ್ವದ ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಅಂದಿನಿಂದ ಆ ದಿನವನ್ನು ವಿಶ್ವಜನಸಂಖ್ಯಾ ದಿನಚಾರಣೆಯನ್ನಾಗಿ ಆಚರಿಸಲಾಗುತ್ತಿದೆ. ಭಾರತ ದೇಶದ ಜನಸಂಖ್ಯೆಯು 1951 ರಲ್ಲಿ 36 ಕೋಟಿ ಇತ್ತು. 2011 ರ ಜನಗಣತಿ ಪ್ರಕಾರ 121 ಕೋಟಿ ಆಗಿದೆ.
ಪ್ರತಿ ವರ್ಷ 1 ಕೋಟಿ 81 ಲಕ್ಷಕ್ಕೂ ಅಧಿಕ ಜನ ಹೆಚ್ಚಾಗುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದಿನ 40 ವರ್ಷಗಳಲ್ಲಿ ನಮ್ಮ ಜನಸಂಖ್ಯೆಯು 240 ಕೋಟಿ ತಲುಪುವ ಸಾಧ್ಯತೆ ಇದೆ. ಪ್ರಸ್ತುತ ಭಾರತದ ಜನಸಂಖ್ಯೆಯು ಜು.01 2019 ರ ವೇಳೆಗೆ 1,368,658,662 ಕೋಟಿಗೆ ತಲುಪಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿದ್ದೇಶಿ, ಆರ್‍ಸಿಹೆಚ್‍ಓ ಡಾ.ಶಿವಕುಮಾರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಮುರಳೀಧರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಗಂಗಾಧರ ಹಿರೇಮಠ ನಿರೂಪಿಸಿದರು. ಆರೋಗ್ಯ ಮೇಲ್ವಿಚಾರಕ ರಾಚಪ್ಪ ಕುಪ್ಪಸ್ತ ಸ್ವಾಗತಿಸಿದರು. ಆರೋಗ್ಯ ಸಹಾಯಕ ಆನಂದಮೂರ್ತಿ ವಂದಿಸಿದರು.