ಚಿತ್ರದುರ್ಗ:
ರೋಗಗಳ ನಿವಾರಣೆಗೆ ಮುಂಜಾಗ್ರತೆಯೇ ಮದ್ದು ಎಂದು ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಜಿಲ್ಲಾಡಳಿತ, ಜಿ.ಪಂ, ಉಪನಿರ್ದೇಶಕರ ಕಚೇರಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಸಹಯೋಗದೊಂದಿಗೆ ಎ.ಪಿ.ಎಂ.ಸಿ.ಯಲ್ಲಿರುವ ಐ.ಎ.ಟಿ.ಸಭಾಂಗಣದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಬುಧವಾರ ನಡೆದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರೈತರಿಗೆ ಮುಟ್ಟಿಸಿ ಜಾನುವಾರುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಪಶುವೈದ್ಯಾಧಿಕಾರಿಗಳಾಗಿರುವ ನಿಮ್ಮ ಮೇಲಿದೆ. ಅನಾಹುತಗಳು ಎದುರಾಗುವ ಮುನ್ನವೇ ಮುನ್ನೆಚ್ಚರಿಕೆಯಿಂದ ಇರುವುದು ರೋಗಗಳ ನಿಯಂತ್ರಣಕ್ಕೆ ಮದ್ದು. ಪ್ರತಿ ವರ್ಷವೂ ಪಶುಪಾಲನಾ ಇಲಾಖೆಯಿಂದ ವಿಶ್ವ ರೇಬಿಸ್ ದಿನಾಚರಣೆ ಆಚರಿಸುತ್ತಿದ್ದು, ಸಾಕು ನಾಯಿಗಳನ್ನು ಉಳ್ಳವರು ಚುಚ್ಚುಮದ್ದು, ಲಸಿಕೆಯನ್ನು ತಪ್ಪದೆ ಹಾಕಿಸಿಕೊಳ್ಳುವಂತೆ ತಿಳಿಸಿದರು.
ಪಶುವೈದ್ಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಇಲಾಖೆಯ ಆಯುಕ್ತರ ಜೊತೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ.ಟಿ.ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡುತ್ತ ಜಾನುವಾರುಗಳಿಗೆ ರೋಗ ನಿಯಂತ್ರಣೆ, ಔಷಧೋಪಚಾರ, ಲಸಿಕೆ, ಮೂಲಕ ಸಂರಕ್ಷಣೆ ಮಾಡಿ ರೈತರಿಗೆ ಉತ್ಪನ್ನಗಳನ್ನು ಹೆಚ್ಚಿಸುವುದು ನಮ್ಮ ಮೂಲ ಉದ್ದೇಶ. ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ನೂರಾರು ರೋಗಗಳಿವೆ.
ಅದಕ್ಕಾಗಿ ಪ್ರಾಣಿಜನ್ಯ ರೋಗ ಹರಡದಂತೆ ತಡೆಗಟ್ಟಿ ಸಾಮೂಹಿಕವಾಗಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿದ್ದೇವೆ. ಇದರಿಂದ ಒಂದು ವೇಳೆ ಮನುಷ್ಯನಿಗೆ ನಾಯಿ ಕಚ್ಚಿದರೂ ಅಪಾಯದಿಂದ ಪಾರಾಗಬಹುದು. ಜಿಲ್ಲೆಯಲ್ಲಿ ಐದುನೂರು ಹಳ್ಳಿಗಳನ್ನು ಆಯ್ಕೆ ಮಾಡಿದ್ದು, ಮೈತ್ರಿ ಕಾರ್ಯಕರ್ತರು ಪ್ರತಿ ರೈತನ ಮನೆ ಬಾಗಿಲಿಗೆ ಹೋಗಿ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಸಂರಕ್ಷಿಸಬೇಕಿದೆ. ಅದಕ್ಕಾಗಿ ಮೈತ್ರಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮೂರು ಲಕ್ಷ ಮೂವತ್ತೊಂಬತ್ತು ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸಿಬ್ಬಂದಿಗಳ ಕೊರತೆ ನಡುವೆಯೇ ಸಾಧ್ಯವಾದಷ್ಟು ಜಾನುವಾರುಗಳಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸುತ್ತಿದ್ದೇವೆಂದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಬೆಂಗಳೂರಿನ ಅಪರ ನಿರ್ದೇಶಕ ಡಾ.ಹೆಚ್.ಎಸ್.ಜಯಣ್ಣ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮಾನ್ಯವಾಗಿ ಸಾಕು ನಾಯಿಗಳನ್ನು ಜೋಪಾನ ಮಾಡಿದಂತೆ ಬೀದಿ ನಾಯಿಗಳನ್ನು ಯಾರು ಜೋಪಾನ ಮಾಡುವುದಿಲ್ಲ.
ರೇಬಿಸ್ ಕೆಟ್ಟ ಕಾಯಿಲೆ. ನಾಯಿ ಕಡಿದರೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದೆಂದರೆ ಲಸಿಕೆ ಮತ್ತು ಚುಚ್ಚುಮದ್ದೊಂದೆ ಮಾರ್ಗ. ಕೇಂದ್ರ ಸರ್ಕಾರ ಕಳೆದ ವರ್ಷ ಹದಿಮೂರು ಸಾವಿರದ ಐದು ನೂರು ಕೋಟಿ ರೂ.ಇಲಾಖೆಗೆ ಅನುದಾನ ನಿಗಧಿಪಡಿಸಿದೆ. ಸಿಬ್ಬಂದಿಗಳ ಕೊರತೆ ಕೇವಲ ಚಿತ್ರದುರ್ಗದಲ್ಲಷ್ಟೆ ಅಲ್ಲ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿನ ಪಶುಇಲಾಖೆಯಲ್ಲಿಯೂ ಸಿಬ್ಬಂದಿಗಳ ಕೊರತೆಯಿದೆ ಎಂದರು. ಆರ್ಥಿಕ ಮಿತವ್ಯಯ, ಕೋವಿಡ್-19 ರ ಪರಿಣಾಮವಾಗಿ ಇನ್ನು ಎರಡು ವರ್ಷಗಳ ಕಾಲ ಹೊಸದಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು ಕಷ್ಟ. ಆದ್ದರಿಂದ ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಜಾನುವಾರುಗಳ ಪೋಷಣೆ ಮಾಡುವಂತೆ ತಿಳಿಸಿದರು.
ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಬಿ.ಪ್ರಸನ್ನಕುಮಾರ್ ವೇದಿಕೆಯಲ್ಲಿದ್ದರು. ಸಂಪನ್ಮೂಲ ವ್ಯಕ್ತಿ ಮುಖ್ಯ ಪಶುವೈದ್ಯಾಧಿಕಾರಿ ಡಾ.ಕೆ.ಎಂ.ಸುನೀಲ್‍ಕುಮಾರ್ ವಿಶ್ವ ರೇಬಿಸ್ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.ಡಾ.ಮಣಿಮಾಲ ಪ್ರಾರ್ಥಿಸಿದರು. ಹಿರಿಯ ಪಶುವೈದ್ಯಾಧಿಕಾರಿ ಡಾ.ಎಂ.ಬಿ.ರಂಗಸ್ವಾಮಿ ವಂದಿಸಿದರು. ಡಾ.ಸಿ.ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳ ಕ್ಷೇತ್ರ ಪಶುವೈದ್ಯಾಧಿಕಾರಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ