ಬೆಂಗಳೂರು
ತಂತ್ರಜ್ಞಾನ ಬೆಳವಣಿಗೆಯಲ್ಲಿ ಬರವಣಿಗೆ ನಶಿಸುತ್ತಿದ್ದು ತಂತ್ರಾಂಶದ ಮೂಲಕ ಮೆದುಳಿನಲ್ಲಿರುವ ನಮ್ಮ ವಿಚಾರವನ್ನು ನೇರವಾಗಿ ಬರವಣಿಗೆ ಇಳಿಸುವ ಕಾಲ ದೂರವಿಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರು ತಿಳಿಸಿದ್ದಾರೆ.
ತಂತ್ರಜ್ಞಾನ ಬೆಳವಣಿಗೆಯಲ್ಲಿ ಬರವಣಿಗೆ ನಶಿಸುತ್ತಿರುವುದರಿಂದ ಕನ್ನಡ ಕಲಿಸುವ ಸ್ಫೂರ್ತಿ ಕಡಿಮೆಯಾಗುತ್ತಿದೆ ಇದನ್ನು ನಿವಾರಿಸಲು ಕನ್ನಡ ಪ್ರಕಾಶಕರೊಂದಿಗೆ ಕನ್ನಡ ಭಾಷೆ ಭೋದಿಸುವ ಶಿಕ್ಷಕರಿಗೂ ಸನ್ಮಾನ ಮಾಡಿ ಕನ್ನಡ ಕಲಿಸುವ ಸ್ಫೂರ್ತಿಯನ್ನು ತುಂಬಬೇಕಿದೆ ಎಂದರು.
ಸಾಹಿತ್ಯ ಅಕಾಡೆಮಿ ಕರ್ನಾಟಕ ಪ್ರಕಾಶಕರ ಸಂಘದ ಸಹಯೋಗದಲ್ಲಿ ನಗರದ ಸೆಂಟ್ರಲ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಬರವಣಿಗೆಯ ಸ್ಫೂರ್ತಿಯನ್ನು ತುಂಬಬೇಕಿದೆ ಎಂದು ತಿಳಿಸಿದರು.
ಸೆಸ್ ಪಾವತಿಗೆ ಆಗ್ರಹ
ಇತ್ತೀಚಿನ ರ್ಕಾರ ಬಾಕಿ ಉಳಿಸಿಕೊಂಡಿರುವ 400 ಕೋಟಿ ರೂ. ಗ್ರಂಥಾಲಯ ಸೆಸ್‍ನ್ನು ಕೂಡಲೇ ಪಾವತಿಸುವ ಮೂಲಕ ಗ್ರಂಥಾಲಯಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕೆಂದು ಹಿರಿಯ ಕವಿ ಹಾಗೂ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿಯ ಸಂಚಾಲಕ ಡಾ.ಸಿದ್ದಲಿಂಗಯ್ಯ ಒತ್ತಾಯಿಸಿದ್ದಾರೆ..
ಓದುಗರ ಸಂಖ್ಯೆ ಹೆಚ್ಚಳಕ್ಕೆ ಗ್ರಂಥಾಲಯಗಳು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳಿಗೆ ಹೊಸ ಹೊಸ ಪುಸ್ತಕ ಮತ್ತು ಗ್ರಂಥಾಲಯ ಸಂಖ್ಯೆ ಹೆಚ್ಚಳಗೊಳಿಸುವ ಅಗತ್ಯವಿದೆ. ಗ್ರಂಥಾಲಯ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರ ಬಾಕಿ ಉಳಿಸಿಕೊಂಡಿರುವ 400 ಕೋಟಿ ರೂ. ಸೆಸ್ ಗಳನ್ನು ತಕ್ಷಣ ಪಾವತಿಸಬೇಕೆಂದು ಹೇಳಿದರು.
ಇಂದು ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗಿದೆ. ಆದರೆ ಪುಸ್ತಕ ಬರೆಯುವವರ ಸಂಖ್ಯೆ ಕಡಿಮೆ ಆಗಿಲ್ಲ. ಓದುಗರ ಸಂಖ್ಯೆ ಹೆಚ್ಚಳಕ್ಕೆ ಏನು ಮಾಡಬೇಕು ಎನ್ನುವುದನ್ನು ಕಂಡುಕೊಳ್ಳಬೇಕಿದೆ ಎಂದರು.
ಕಚೇರಿ ಆರಂಭ
ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಪ್ರಾದೇಶಿಕ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ಜ್ಞಾನಭಾರತಿ ವ್ಯಾಪ್ತಿಯಲ್ಲಿ ಒಂದು ಎಕರೆ ಭೂಮಿ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ 20 ಕೋಟಿ ರೂ.ಗಳ ಅನುದಾನ ಸಹ ದೊರೆತಿದೆ. ದಕ್ಷಿಣ ಭಾಗದ 6 ರಾಜ್ಯಗಳ ಸಾಹಿತ್ಯ ಚಟುವಟಿಕೆಗಳು ಈ ಪ್ರಾದೇಶಿಕ ಕೇಂದ್ರದಲ್ಲಿ ನಡೆಯಲಿವೆ. ಶೀಘ್ರ ಬೆಂಗಳೂರಿನಲ್ಲಿ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ ಆರಂಭವಾಗಲಿದೆ ಎಂದರು.
ಕೆಲವು ಭಾಷೆಗಳಲ್ಲಿ ಇದೂವರೆವಿಗೂ ಪುಸ್ತಕಗಳು ಪ್ರಕಟಗೊಂಡಿಲ್ಲ. ಪುಸ್ತಕಗಳ ಪ್ರಕಟಣೆ ಮೂಲಕ ಭಾಷೆಗೆ ಭವಿಷ್ಯ ಕಂಡುಕೊಳ್ಳಬಹುದಾಗಿದೆ. ರಾಜಕಾರಣಿಗಳು, ಜನ ನಾಯಕರುಗಳು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು ಎಂದ ಅವರು ಕನ್ನಡ ಭಾಷೆ ಹಾಗೂ ದೇಶಿಯ ಭಾಷೆಗಳು ಉಳಿದರೇ ಭಾರತೀಯ ಭಾಷೆಗಳ ಉಳಿಗಾಲ ಸಾಧ್ಯ ಎಂದರು.
ಕಾರ್ಯಕ್ರಮದ ಅಂಗವಾಗಿ ಪುಸ್ತಕ ಪ್ರಕಾಶಕರಾದ ಕೆ.ರಾಜ್‍ಕುಮಾರ್, ಹಾಗೂ ಶಾಂಭವಿ ಪ್ರಭು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಹಳ್ಳಿ, ನವ ಕರ್ನಾಟಕದ ರಮೇಶ್ ಉಡುಪ, ಪ್ರಕಾಶಕರ ಸಂಘದ ಕಾರ್ಯದರ್ಶಿ ರವಿಕುಮಾರ್, ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕೇಂದ್ರದ ಕಾರ್ಯದರ್ಶಿ ಎಸ್.ಪಿ.ಮಹಾಲಿಂಗೇಶ್ವರ, ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
