ದಾವಣಗೆರೆ
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಲಿಂಗಾಯತ-ವೀರಶೈವ ಸಮಾಜದ ಅವಹೇಳನ ಮಾಡಿರುವುದನ್ನು ಖಂಡಿಸಿ, ವೀರಶೈವ-ಲಿಂಗಾಯತ ಸಮಾನ ಮನಸ್ಕರ ವೇದಿಕೆಯ ನೇತೃತ್ವದಲ್ಲಿ ಲಿಂಗಾಯತರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟ, ಲಿಂಗಾಯತ-ವೀರಶೈವ ಸಮಾಜ ಬಾಂಧವರು, ವೈ.ರಾಮಪ್ಪರ ಭಾವಚಿತ್ರಕ್ಕೆ ಇಂಟು ಮಾರ್ಕ್ ಹಾಕಿ, ಚಪ್ಪಲಿಯಿಂದ ಒಡೆದು, ಅವರ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಣಕಾರ್ ಕುರಡಿ, ಜಿ.ಪಂ. ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪನವರು ಲಿಂಗಾಯತ ಸಮುದಾಯದ ಬಗ್ಗೆ ಅವಹೇಳನ ಮಾಡಿರುವುದು ಅತ್ಯಂತ ಅಕ್ಷಮ್ಯವಾಗಿದೆ. ಯಾರೇಯಾದರೂ ನಮ್ಮ ಜಾತಿಯ ಬಗ್ಗೆ ಮಾತನಾಡಿದರೆ, ನಮ್ಮ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿ, ರಾಮಪ್ಪ ತಕ್ಷಣವೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಇನ್ನೋರ್ವ ಮುಖಂಡ ಸುರೇಶ್ ಕಾಶೀಪುರ ಮಾತನಾಡಿ, ವೈ.ರಾಮಪ್ಪನವರ ದಬ್ಬಾಳಿಕೆ ಹೆಚ್ಚಾಗಿದ್ದು, ಅಟ್ರಾಸಿಟಿ ಕಾಯ್ದೆಯನ್ನು ದುರುಪಯೋಗ ಪಡೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅವರ ವಿರುದ್ಧ ಏನಾದರೂ ಮಾತನಾಡಿದರೆ, ಜಾತಿ ನಿಂದನೆ ಪ್ರಕರಣ ದಾಖಲಿಸುತ್ತಾರೆ. ಲಿಂಗಾಯತ ಸಮುದಾಯವನ್ನು ಅವಹೇಳನ ಮಾಡಿರುವ ರಾಮಪ್ಪ ಬಹಿರಂಗವಾಗಿ ಕ್ಷಮೆ ಕೇಳುವ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಮತ್ತೋರ್ವ ಮುಖಂಡ ಜಯಣ್ಣ ಶ್ಯಾಗಲೆ ಮಾತನಾಡಿ, ವೀರಶೈವ-ಲಿಂಗಾಯತ ಸಮುದಾಯವನ್ನು ಅಪಮಾನ ಮಾಡಿರುವುದರ ವಿರುದ್ಧ ನಾವು ಪಕ್ಷತೀತವಾಗಿ ಹೋರಾಟ ನಡೆಸುತ್ತಿದ್ದೇವೆಯೇ ಹೊರತು, ಯಾವುದೇ ಕೋಮಿನ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿದರು.
ರಾಮಪ್ಪ ಮಾತನಾಡುವ ಭರದಲ್ಲಿ ಈಶ್ವರ ಬಂದು ನಿಮ್ಮ ಕಾಲು-ಕೈಗೆ ಲಿಂಗ ಕಟ್ಟಿದ್ದಾರೆಯೇ? ನೀವು ರಸ್ತೆಗೆ ಬಂದರೆ, ರಕ್ತಪಾತವೇ ಆಗಲಿದೆ ಎಂದಿದ್ದಾರೆ. ಆದ್ದರಿಂದ ರಾಮಪ್ಪ ನಮ್ಮ ಸಮಾಜದ ಗುರುಗಳ ಮುಂದೆ ಸಮಾಜದ ಮುಖಂಡರನ್ನು ಸೇರಿಸಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ ಅವರು, ನಾವು ಯಾವುದೇ ಜಾತಿಯ ನಿಂದನೆ, ವೈಕ್ತಿಕ ಟೀಕೆ ಮಾಡದೇ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಹೆದ್ನೆ ಮುರುಗೇಶಪ್ಪ ಮಾತನಾಡಿ, ಎಲ್ಲ ಜಾತಿ-ಸಮುದಾಯಗಳನ್ನು ಮುನ್ನಡೆಸಿಕೊಂಡು ಹೋಗುವ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿರುವುದು ಸರಿಯಲ್ಲ. ನಾವು ಸಹ ಅವರನ್ನು ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರನ್ನಾಗಿ ಗೆಲ್ಲಿಸಿದ್ದೇವೆ. ಅಲ್ಲದೇ, ಬೇರೆ, ಬೇರೆ ಜಾತಿ ಸಮುದಾಯವರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ. ಆದರೂ ರಾಮಪ್ಪ ನಮ್ಮ ಸಮುದಾಯದ ಬಗ್ಗೆ ಅವಹೇಳನ ಮಾಡಿರುವುದು ಸಮಾಜ ಬಾಂಧವರಿಗೆ ತೀವ್ರ ನೋವುಂಟು ಮಾಡಿದೆ ಎಂದು ಅ¸ಮಾಧಾನ ವ್ಯಕ್ತಪಡಿಸಿದರು.
ವೀರಶೈವ ಸಮಾಜದ ಮುಖಂಡ ದೇವರಮನಿ ಶಿವಕುಮಾರ್ ಮಾತನಾಡಿ, ನಮ್ಮ ಸಮುದಾಯದ ಬೆಂಬಲ ಪಡೆದು, ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿರುವ ವೈ.ರಾಮಪ್ಪ ಎಲ್ಲರೊಂದಿಗೂ ಶಾಂತಿಯುತವಾಗಿ ನಡೆದುಕೊಳ್ಳುವ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿರುವುದು ಅತ್ಯಂಥ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಲಿಂಗಾಯತ-ವೀರಶೈವ ಸಮಾಜದ ಮುಖಂಡರಾದ ಜಿ.ಶಿವಯೋಗಪ್ಪ, ಲೋಕಿಕರೆ ನಾಗರಾಜ್, ಶಿವಗಂಗಾ ಬಸವರಾಜ್, ಹೆಮ್ಮನಬೇತೂರು ಶಶಿಧರ್, ದನಂಜಯ ಕಡ್ಲೇಬಾಳು, ಬಿ.ಜಿ.ರಮೇಶ್, ದಾಕ್ಷಾಯಣಮ್ಮ, ರಾಜೇಶ್ವರಿ ಟಿ.ಎಂ, ಮಳ್ಳೆಕಟ್ಟೆ ಚಿದಾನಂದಪ್ಪ, ದೇವರಮನಿ ಯೋಗೇಶ್, ಗಂಗಾಧರ್, ಹೆಚ್.ಎನ್.ಶಿವಕುಮಾರ್, ಬೆಲ್ಲದ ಶಂಕರ್, ಎನ್.ರಾಜಶೇಖರ್, ಅಣಬೇರು ಜೀವನಮೂರ್ತಿ, ಕರಿಬಸಪ್ಪ, ಶಿವನಗೌಡ ಪಾಟೀಲ್, ಸೋಗಿ ಶಾಂತಕುಮಾರ್ ಸೇರಿದಂತೆ ಹಲವರು ವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು.