ದಾವಣಗೆರೆ:
ಎಫ್‍ಐಎ ಫಾರ್ಮುಲಾ-4 ಸೌತ್ ಈಸ್ಟ್ ಏಷ್ಯಾ ಮೂಲಕ ಮೇ 11 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮೋಟಾರ್‍ಸ್ಪೋಟ್ರ್ಸ್ ಕಣಕ್ಕೆ ಇಳಿಯಲು ದಾವಣಗೆರೆಯ ಯಶ್ ಆರಾಧ್ಯ ಸಿದ್ಧತೆ ನಡೆಸಿದ್ದಾರೆ.
ಮೇ 11 ಹಾಗೂ 12ರಂದು ಥಾಯ್ಲೆಂಡ್‍ನ ಬುರೀರಮ್‍ನಲ್ಲಿ ನಡೆಯಲಿರುವ ಎಫ್‍ಐಎ ಫಾರ್ಮುಲಾ-4 ಸೌತ್ ಈಸ್ಟ್ ಏಷ್ಯಾ ರೇಸ್‍ನಲ್ಲಿ ಪದಾರ್ಪಣೆ ಮಾಡಲು ರಾಷ್ಟ್ರೀಯ ಗೋ ಕಾರ್ಟಿಂಗ್ ಚಾಂಪಿಯನ್ ಆಗಿರುವ ಯಶ್ ಆರಾಧ್ಯ ಅಣಿಯಾಗಿದ್ದಾರೆ. ಇದರೊಂದಿಗೆ ತನ್ನ ಅಂತಾರಾಷ್ಟ್ರೀಯ ಮೋಟಾರ್‍ಸ್ಪೋಟ್ರ್ಸ್ ಕ್ರೀಡಾ ಜೀವನದಲ್ಲೂ ಯಶ್ ದೊಡ್ಡ ಹೆಜ್ಜೆ ಇಡಲಿದ್ದಾರೆ.
ಎಫ್‍ಐಎ ಫಾರ್ಮುಲಾ-4 ಸೌತ್ ಈಸ್ಟ್ ಏಷ್ಯಾದಲ್ಲಿ ಆಗ್ನೇಯ ಏಷ್ಯಾದ ಪ್ರತಿಭೆಗಳು ಸ್ಪರ್ಧೆ ಮಾಡಲಿದ್ದು, ಪ್ರತಿ ಸುತ್ತಿನಲ್ಲಿ ನಾಲ್ಕು ರೇಸ್‍ಗಳು ಇರುವಂಥ 10 ಸುತ್ತುಗಳ 40 ರೇಸ್‍ಗಳು ಮಲೇಷ್ಯಾ, ಥಾಯ್ಲೆಂಡ್, ಭಾರತ ಹಾಗೂ ಫಿಲಿಪ್ಪಿನ್ಸ್‍ನಲ್ಲಿ ನಡೆಯುತ್ತವೆ. ಪರೀಕ್ಷೆಗಳು ಹಾಗೂ ಟೂರ್ನಿಯ ಯೋಜನೆಗೆ ಸಿದ್ಧತೆಯ ಕಾರಣದಿಂದಾಗಿ ಮೊದಲ ಎರಡು ಸುತ್ತುಗಳನ್ನು ತಪ್ಪಿಸಿಕೊಂಡಿರುವ ಯಶ್ ಆರಾಧ್ಯಗೆ 10 ಸುತ್ತುಗಳ ಚಾಂಪಿಯನ್‍ಷಿಪ್‍ನಲ್ಲಿ 8 ಸುತ್ತುಗಳಲ್ಲಿ ಗಳಿಸಿರುವ ಅಂಕಗಳು ಮಾತ್ರವೇ ಚಾಂಪಿಯನ್‍ಷಿಪ್‍ನ ಪಟ್ಟಿಗೆ ಸೇರಿವೆ.
“ಈ ಎಲ್ಲ ದೇಶಗಳಲ್ಲಿ ನಾನು ಇದೇ ಮೊದಲ ಬಾರಿಗೆ ರೇಸ್‍ನಲ್ಲಿ ಪಾಲ್ಗೊಳ್ಳುತ್ತಿದ್ದು, ಬಹಳ ಉತ್ಸುಕನಾಗಿದ್ದೇನೆ. ರೇಸ್‍ನತ್ತ ಗಮನ ನೀಡುವುದರೊಂದಿಗೆ ಸಾಧ್ಯವಾದಷ್ಟು ಬೇಗ ಟ್ರ್ಯಾಕ್‍ಗಳು ಹಾಗೂ ಕಾರ್‍ಗಳಿಗೆ ನಾನು ಹೊಂದಿಕೊಳ್ಳಬೇಕಿದೆ. ಈಗಾಗಲೇ ಎರಡು ಸುತ್ತುಗಳ ರೇಸ್‍ಗಳನ್ನು ತಪ್ಪಿಸಿಕೊಂಡಿರುವುದರಿಂದ ಮುಂದಿನ ಎಲ್ಲ ಸುತ್ತುಗಳ ರೇಸ್‍ನಲ್ಲಿ ನನ್ನ ಶ್ರೇಷ್ಠ ನಿರ್ವಹಣೆ ತೋರಿಸಬೇಕಾಗಿದೆ. ದೇಶಕ್ಕೆ ಹೆಮ್ಮೆ ತರುವಂಥ ನಿರ್ವಹಣೆ ತೋರುವ ವಿಶ್ವಾಸ ನನ್ನದಾಗಿದೆ ಎನ್ನುತ್ತಾರೆ ಯಶ್ ಆರಾಧ್ಯ.
ಅಕ್ವಾಗಾರ್ಡ್, ಸೈಕಲ್ ಪ್ಯೂರ್, ಭಾರತ್ ಫಾರ್ಜ್ ಮತ್ತು ಲಕ್ಷ್ಯ ಬ್ರ್ಯಾಂಡ್‍ಗಳು ಯಶ್‍ಗೆ ಪ್ರಾಯೋಜಕರಾಗಿ ನಿಂತಿವೆ. ಸೌತ್ ಈಸ್ಟ್ ಏಷ್ಯಾದಲ್ಲಿ ಗಮನಾರ್ಹ ನಿರ್ವಹಣೆ ತೋರಿ ದೇಶದ ಕೀರ್ತಿ ಪತಾಕೆ ಹಾರಿಸುವ ವಿಶ್ವಾಸದಲ್ಲಿ ಯಶ್ ಇದ್ದಾರೆ.
ಗೋ ಕಾರ್ಟಿಂಗ್‍ನಲ್ಲಿ ಆರಂಭದ ದಿನಗಳಿಂದ ಫಾರ್ಮುಲಾ-4ನ ಅಂತಾರಾಷ್ಟ್ರೀಯ ಪದಾರ್ಪಣೆಯವರೆಗೆ ಯಶ್‍ರ ಹಂತ ಹಂತದ ಪ್ರಗತಿಯಲ್ಲಿ ನಿಖರವಾದ ಗುರಿ ಕಾಣುತ್ತಿದ್ದೇವೆ. ಲೀಗ್‍ನಲ್ಲಿ ಅಗ್ರಪಟ್ಟಕ್ಕೆ ಏರಬೇಕು ಎನ್ನುವ ತುಡಿತ ಅವರಲ್ಲಿದೆ. ಈ ಹಂತಕ್ಕೆ ಏರಬಲ್ಲ ಎಲ್ಲ ಸಾಮಥ್ರ್ಯ ಯಶ್‍ನಲಿದೆ ಎಂಬ ವಿಶ್ವಾಸ ನಮ್ಮಲ್ಲಿದೆ. ಆರೋಗ್ಯ ಮತ್ತು ಸಂತೃಪ್ತಿ ಜೀವನದ ಏಳಿಗೆಗೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಯುರೇಕಾ ಫೋಬ್ರ್ಸ್ ನಂಬಿದೆ ಎಂದು ಯುರೇಕಾ ಫೋಬ್ರ್ಸ್‍ನ ಮುಖ್ಯ ಟ್ರಾನ್ಸ್‍ಫಾರ್ಮೇಷನ್ ಅಧಿಕಾರಿ ಶಶಾಂಕ್ ಸಿನ್ಹಾ ತಿಳಿಸಿದ್ದಾರೆ.
ಜೆಕೆ ಟೈರ್ಸ್ ಸಹಯೋಗದಲ್ಲಿ, ಅಕ್ಬರ್ ಇಬ್ರಾಹಿಂ ಮಾರ್ಗದರ್ಶನದಲ್ಲಿ ತನ್ನ 9ನೇ ವರ್ಷಕ್ಕೆ ಜೆಕೆ ಟೈರ್ ಎಂಎಂಎಸ್ ರೋಟಾಕ್ಸ್ ಮ್ಯಾಕ್ಸ್ ಕಾರ್ಟಿಂಗ್ ಚಾಂಪಿಯನ್‍ಷಿಪ್ ಇಂಡಿಯಾದಲ್ಲಿ ಭಾಗವಹಿಸುವ ಮೂಲಕ ಯಶ್‍ರ ಮೋಟಾರ್ ಸ್ಪೋಟ್ರ್ಸ್ ಜೀವನ ಆರಂಭವಾಗಿತ್ತು. ಆ ಟೂರ್ನಿಯ ಮೈಕ್ರೋ ವಿಭಾಗದಲ್ಲಿ ವೈಸ್ ಚಾಂಪಿಯನ್ ರೂಕಿ ಪ್ರಶಸ್ತಿ ಗೆದ್ದಿದ್ದ ಯಶ್, ಆ ಬಳಿಕ ಹಲವು ಬಾರಿ ಈ ಚಾಂಪಿಯನ್‍ಷಿಪ್ ಅನ್ನು ಜಯಿಸಿದರು. ತನ್ನ 7 ವರ್ಷದ ಮೋಟಾರ್‍ಸ್ಪೋಟ್ರ್ಸ್ ಜೀವನದಲ್ಲಿ ಯಶ್ 59 ಬಾರಿ ರೇಸ್‍ನ ಪದಕ ವೇದಿಕೆ ಏರಿದ್ದಲ್ಲದೆ, 16ನೇ ವರ್ಷದ ವೇಳೆಗೆ 13 ಬಾರಿ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡಿದ್ದಾರೆ.