ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆಯಲಿ

ದಾವಣಗೆರೆ :

       ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಗುರುಮಠಕಲ್‍ನ ಜೆಡಿಎಸ್ ಶಾಸಕ ನಾಗನಗೌಡರ ಪುತ್ರ ಶರಣ್‍ಗೌಡರ ಜೊತೆಯಲ್ಲಿ ಸಂಭಾಷಣೆ ನಡೆಸಿರುವುದು ನಾನೆ, ಧ್ವನಿ ಮುದ್ರಿಕೆಯಲ್ಲಿರುವುದು ತಮ್ಮದೇ ಧ್ವನಿ ಎಂಬುದಾಗಿ ತಪ್ಪೊಪ್ಪಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮೊದಲು ಘೋಷಿಸಿರುವಂತೆ ರಾಜಕೀಯ ನಿವೃತ್ತಿ ಪಡೆಯಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆಗ್ರಹಿಸಿದರು.

       ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಯಡಿಯೂರಪ್ಪನವರು ಆ ಆಡಿಯೋಯಲ್ಲಿರುವುದು ನನ್ನ ಧ್ವನಿಯಲ್ಲ. ಕುಮಾರಸ್ವಾಮಿ ನಕಲಿ ಆಡಿಯೋ ಬಿಡುಗಡೆ ಮಾಡಿ ತಮ್ಮ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆಂಬುದಾಗಿ ಹೇಳಿದ್ದಲ್ಲದೇ, ಆ ಆಡಿಯೋದಲ್ಲಿ ಇರುವುದು ತಮ್ಮ ಧ್ವನಿ ಎಂಬುದು ಸಾಬೀತು ಪಡಿಸಿದರೆ, ತಕ್ಷಣವೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು.

       ಆದರೆ, ಅದೇ ಯಡಿಯೂರಪ್ಪ ನಿನ್ನೆ ಶರಣಗೌಡನ ಜತೆಯಲ್ಲಿ ಸಂಭಾಷಣೆ ನಡೆಸಿರುವುದು ನಾನೆ, ಆ ಆಡಿಯೋಯಲ್ಲಿರುವ ಧ್ವನಿ ನನ್ನದೇ ಎಂಬುದಾಗಿ ತಪ್ಪೊಪ್ಪಿಕೊಂಡಿರುವ ಯಡಿಯೂರಪ್ಪ ತಕ್ಷಣವೇ ರಾಜಕೀಯ ನಿವೃತ್ತಿಪಡೆಯಬೇಕೆಂದು ಒತ್ತಾಯಿಸಿದರು.

        ಕುರಿ, ಕೋಳಿಯನ್ನು ಹಣ ಕೊಟ್ಟು ಖರೀದಿಸುವಂತೆ ಜನರಿಂದ ಆಯ್ಕೆಯಾಗಿರುವ ಶಾಸಕರನ್ನು ಕೋಟ್ಯಾಂತರ ರೂ. ನೀಡಿ ಖರೀದಿ ಮಾಡುವ ಕೆಟ್ಟ ಸಂಪ್ರದಾಯಕ್ಕೆ ಚಾಲನೆ ನೀಡಿರುವುದೇ ಬಿಜೆಪಿ. ಈಗ ಈ ಆಪರೇಷನ್ ಕಮಲ ಎಂಬ ಪ್ರಕ್ರಿಯೆ ಈಗಲೂ ಮುಂದುವರೆದಿದೆ. ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ಕಿಂಚಿತ್ತು ಬೆಲೆಯೇ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

         ಈ ಆಪರೇಷನ್ ಕಮಲ ಎನ್ನುವ ಷಡ್ಯಂತ್ರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಅವರುಗಳ ಕೈವಾಡವಿದೆ. ಪ್ರಜಾಪ್ರಭುತ್ವಕ್ಕೆ ಆಪರೇಷನ್ ಕಮಲಕ್ಕೆ ಇವರಿಬ್ಬರೂ ಫೈನಾನ್ಸ್ ಮಾಡುತ್ತಿದ್ದು, ರಫೇಲ್ ಹಗರಣದಲ್ಲಿ ಅಕ್ರಮವಾಗಿ ಸಂಪಾದಿಸಿರುವ ನೂರಾರು ಕೋಟಿ ರೂ. ಹಣವನ್ನು ಆಪರೇಷನ್ ಕಮಲಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಮೈತ್ರಿ ಸರ್ಕಾರವನ್ನು ಬುಡಮೇಲು ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‍ಷಾ ಮಾಸ್ಟರ್ ಮೈಂಡ್‍ಗಳಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಇಬ್ಬರ ವಿರುದ್ಧವೂ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

         ಯಡಿಯೂರಪ್ಪನವರು ಮಾತನಾಡಿರುವ ಸಂಭಾಷಣೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ನಮ್ಮ ವರಿಷ್ಠರು ಬುಕ್ ಮಾಡಿದ್ದಾರೆ. ಅಲ್ಲದೆ, ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಸಹ 50 ಕೋಟಿ ಕೊಟ್ಟು ಬುಕ್ ಮಾಡಿದ್ದೇವೆ ಎಂಬುದಾಗಿ ಪ್ರಸ್ತಾಪಿಸಿದ್ದು, ನ್ಯಾಯಾಧೀಶರ ಹಾಗೂ ಸಭಾಪತಿ ಸ್ಥಾನಕ್ಕೆ ಚ್ಯುತಿ ತಂದಿದ್ದು, ನ್ಯಾಯಾಂಗ ವ್ಯವಸ್ಥೆಯೇ ತೆಲೆತಗ್ಗಿಸಿದಂತಾಗಿದೆ. ಆದ್ದರಿಂದ ನ್ಯಾಯಾಲಯವು ಆಡಿಯೋ ಅನ್ನು ಆಧಾರವನ್ನಾಗಿಟ್ಟುಕೊಂಡು ಸುಪ್ರೀಂ ಕೋರ್ಟ್, ಐಟಿ, ಇಡಿ ಹಾಗೂ ಸಿಬಿಐ ಸುಮೋಟೊ ಪ್ರಕರಣ ದಾಖಲಿಸಿಕೊಂಡು ನ್ಯಾಯಯುತವಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

        ದುರಹಂಕಾರಿ ನರೇಂದ್ರ ಮೋದಿ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು, ಯಡಿಯೂರಪ್ಪ ಹಾಗೂ ಜನಾರ್ಧನರೆಡ್ಡಿ ಅವರನ್ನು ರಕ್ಷಿಸಿದ್ದಾರೆ. ಆ ಕಾರಣಕ್ಕಾಗಿಯೇ ಕೆಲ ತಿಂಗಳ ಹಿಂದೆ ಸುಪ್ರೀಂ ಕೋರ್ಟ್‍ನ ನಾಲ್ವರು ನ್ಯಾಯಾಧೀಶರು ಮಾಧ್ಯಮಗಳ ಮುಂದೆ ಬಂದು, ದೇಶ, ಸಂವಿಧಾನ ಅಪಾಯದಲ್ಲಿದೆ ಎಂದಿದ್ದರು. ಕೇಂದ್ರ ಸರ್ಕಾರ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬುದಕ್ಕೆ ಯಡಿಯೂರಪ್ಪನವರು ಧ್ವನಿ ಮುದ್ರಿಕೆಯಲ್ಲಿ ನಮ್ಮ ವರಿಷ್ಠರು ಜಡ್ಜ್‍ಗಳನ್ನು ಬುಕ್ ಮಾಡಿದ್ದಾರೆಂಬುದೇ ನಿದರ್ಶನ ಎಂದರು.

          ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲ್ಲಾವಲ್ಲಿ ಘಾಜಿಖಾನ್, ಅಶ್ರಫ್ ಅಲಿ, ಲಿಯಾಕತ್ ಅಲಿ, ಅಬ್ದುಲ್ ಜಬ್ಬಾರ್, ಹರೀಶ್, ಡಿ.ಶಿವಕುಮಾರ್, ರಮೇಶ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link