ಬೆಂಗಳೂರು
ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣವಾದ ಶಾಸಕರ ಪಡೆಗೆ ತಾವೇ ನಾಯಕ ಎಂದು ರಮೇಶ್ ಜಾರಕಿಹೊಳಿ ಪ್ರತಿಬಿಂಬಿಸಿ ಕೊಳ್ಳುತ್ತಿದ್ದ ರೀತಿಗೆ ಮೊದಲ ಹೊಡೆತ ಹಾಕಿರುವ ಸಚಿವ ಬಿ.ಸಿ.ಪಾಟೀಲ್:ನಮಗೆ ಯಡಿಯೂರಪ್ಪ ನಾಯಕರು.ರಮೇಶ್ ಜಾರಕಿಹೊಳಿ ಅಲ್ಲ ಎಂದಿದ್ದಾರಲ್ಲದೆ ತಮಗೆ ಗೃಹ ಖಾತೆ ಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.
ಗುರುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು ವಿಕಾಸಸೌಧದಲ್ಲಿಂದು ತಮಗೆ ಮಂಜೂರಾದ 402 ನೇ ಸಂಖ್ಯೆಯ ಕೊಠಡಿಗೆ ಭೇಟಿ ನೀಡಿದ್ದಲ್ಲದೆ ವಾಸ್ತುತಜ್ಞರನ್ನು ಕರೆಸಿ ಪರಿಶೀಲಿಸಿದರು.ತದನಂತರ ಸುದ್ದಿಗಾರರೊಂದಿಗೆ ಮಾತನಾಡಿ:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ತಮಗೆ ರಮೇಶ್ ಜಾರಕಿಹೊಳಿ ನಾಯಕರಲ್ಲ.ಅವರು ಒಳ್ಳೆಯ ಸ್ನೇಹಿತರು ಎಂದರು.
ನಮಗೆ ಏನಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಾಯಕರು.ಅವರು ನೀಡಿದ ಸೂಚನೆಯ ಪ್ರಕಾರ ನಾವು ನಡೆದುಕೊಳ್ಳುತ್ತೇವೆಯೇ ವಿನ: ಇನ್ಯಾರೋ ನಮಗೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದರು.ರಮೇಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಅತೃಪ್ತಿಯಿತ್ತು.ಹೀಗಾಗಿ ಅವರು ನಮಗಿಂತ ಮುಂಚಿತವಾಗಿ ಬಂಡಾಯವೆದ್ದಿರಬಹುದು.ನಾವು ತಡವಾಗಿ ಬಂಡಾಯವೆದ್ದಿರಬಹುದು.ಆದರೆ ನಾವೆಲ್ಲ ಬಂಡಾಯಗಾರರಾಗಿದ್ದೆವೇ ಹೊರತು ನಮಗೆ ಅವರು ನಾಯಕರಾಗಿರಲಿಲ್ಲ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿ ಹೊರಬಂದ ಹದಿನೇಳು ಮಂದಿ ಇವತ್ತು ಕೂಡಾ ಒಗ್ಗಟ್ಟಾಗಿದ್ದೇವೆ.ನಮ್ಮ ಜತೆ ಎಂ.ಟಿ.ನಾಗರಾಜ್ ಹಾಗೂ ಹೆಚ್.ವಿಶ್ವನಾಥ್ ಅವರು ಕೂಡಾ ಮಂತ್ರಿಗಳಾಗಬೇಕಿತ್ತು ಎನ್ನಿಸುತ್ತಿದೆ.ಆದರೆ ಕಾನೂನಿನ ತೊಡಕಿನಿಂದು ಅದು ಸಾಧ್ಯವಾಗಿಲ್ಲ.
ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಟ್ಟ ಮಾತಿಗೆ ತಪ್ಪುವವರಲ್ಲ ಎಂಬ ವಿಶ್ವಾಸ ನಮಗಿದೆ.ಹೀಗಾಗಿ ಜೂನ್ ತಿಂಗಳಲ್ಲಿ ಎಂ.ಟಿ.ಬಿ.ನಾಗರಾಜ್ ಹಾಗೂ ಹೆಚ್.ವಿಶ್ವನಾಥ್ ವಿಧಾನಪರಿಷತ್ತಿಗೆ ಆಯ್ಕೆಯಾಗಿ ಮಂತ್ರಿಗಳಾಗಲಿದ್ದಾರೆ ಎಂದರು.
ಮಂತ್ರಿಯಾಗಿ ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ.ಆದರೆ ಈ ಹಿಂದೆ ಪೋಲೀಸ್ ಅಧಿಕಾರಿಯಾಗಿದ್ದುದರಿಂದ ಗೃಹ ಖಾತೆ ಕೊಟ್ಟರೆ ಒಳ್ಳೆಯದು ಎಂಬ ಬಾವನೆಯಿದೆ.ಮಾಧ್ಯಮಗಳು ಕೂಡಾ ಅದನ್ನೇ ಹೇಳುತ್ತಿವೆ ಎಂದು ಅವರು ನುಡಿದರು.
ವಿಧಾನಸಭೆಯ ವಿರೋಧ ಪಕ್ಷದ ಸಿದ್ಧರಾಮಯ್ಯ ಅವರು ಮಂತ್ರಿಗಳಾದ ತಮ್ಮ ಬಗ್ಗೆ ಅನUತ್ಯವಾಗಿ ಟೀಕೆ ಮಾಡಿದ್ದಾರೆ.ಆದರೆ ನಾವು ಸರ್ವೋಚ್ಚ ನ್ಯಾಯಾಲಯ ಹೇಳಿದಂತೆ ಗೆದ್ದು ಮಂತ್ರಿಯಾಗಿದ್ದೇವೆ.ಅದರ ವಿರುದ್ಧ ಮಾತನಾಡುವುದು ಎಂದರೆ ಅವರಿಗೆ ಸುಪ್ರಿಂಕೋರ್ಟ್ ಬಗ್ಗೆಯೂ ಗೌರವವಿಲ್ಲ ಎಂದಂತೆ ಅಂತ ವಿಷಾದಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ನಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ.ಇದು ಅವರಿಗೆ ಶೋಭೆ ತರುವುದಿಲ್ಲ.ಒಂದು ವೇಳೆ ಬಿಜೆಪಿಗೆ ಬರಬೇಕು ಎಂಬ ಬಾವನೆ ಅವರಿಗಿದ್ದರೆ ಹೇಳಲಿ.ನಾನು ಪಕ್ಷದ ನಾಯಕರ ಜತೆ ಮಾತನಾಡಿ ಅವರಿಗೆ ಬಿಜೆಪಿ ಬಾಗಿಲು ತೆರೆಯುವಂತೆ ಮಾಡುತ್ತೇನೆ ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ