ಅತಿರುದ್ರ ಮಹಾಯಜ್ಞ ನಡೆಸಿದ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು

           ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅತಿರುದ್ರ ಮಹಾಯಜ್ಞ, ಶತಚಂಡಿ ಹೋಮ ಮತ್ತು ಶಾಸ್ತ್ರ ಪ್ರೀತಿ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಅಂಗ ಪಕ್ಷ ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನ ಸಿಗದೆ ಬಂಡೆದ್ದಿರುವ ಕೆಲ ಭಿನ್ನಮತೀಯ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅತಿರುದ್ರ ಮಹಾಯಜ್ಞ ನಡೆಸಿರುವುದು ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಂತಾಗಿದೆ.

           ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಹಾಲಕ್ಷ್ಮೀಪುರಂ ವೆಸ್ಟ್ ಆಫ್ ಕಾರ್ಡ್ ರೋಡ್‍ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಲೋಕಕಲ್ಯಾಣಕ್ಕಾಗಿ ಈ ಯಜ್ಞವನ್ನು ಆಯೋಜಿಸಲಾಗಿದ್ದು, ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಅವರೇ ಪ್ರಧಾನಿಯಾಗಲೆಂಬ ಸದುದ್ದೇಶದಿಂದ ಈ ಯಾಗ ಹಮ್ಮಿಕೊಳ್ಳಲಾಗಿದೆ ಎಂಬುದು ಆಯೋಜಕರ ವಾದ. ಇತ್ತ ಕಾಂಗ್ರೆಸ್‍ನಲ್ಲಿ ಕ್ಷಣಕ್ಕೊಂದು ವಿದ್ಯಮಾನಗಳು ನಡೆಯುತ್ತಿರುವ ಬೆನ್ನಲ್ಲೇ ಬಿಎಸ್‍ವೈ ಹೋಮ, ಹವನ ನಡೆಸಿರುವುದು ಸಹಜವಾಗಿ ನಾನಾ ರಾಜಕೀಯ ವ್ಯಾಖ್ಯಾನಗಳನ್ನು ಹುಟ್ಟುಹಾಕಿದೆ.

           ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಿನ್ನೆ ಆಯೋಜಕರು ನನ್ನನ್ನು ಆಹ್ವಾನಿಸಿದ್ದರು. ಆದರೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ಇಂದು ಬಿಡುವು ಮಾಡಿಕೊಂಡು ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲೆಂಬ ಸದುದ್ದೇಶದಿಂದ ಅತಿರುದ್ರ ಮಹಾಯಜ್ಞ ಮತ್ತು ಶತಚಂಡಿ ಹೋಮ ನಡೆಸಲಾಗಿದೆ.

          ಕಳೆದ ನಾಲ್ಕೂವರೆ ವರ್ಷದಲ್ಲಿ ಮೋದಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೆ ವಿಶ್ವವೇ ಮೆಚ್ಚುವಂತಹ ಆಡಳಿತ ನಡೆಸಿದ್ದಾರೆ. ಇಂದು ಜಗತ್ತೇ ಭಾರತದ ಕಡೆ ನೋಡುವಂತಾಗಿದೆ. ಮತ್ತೊಮ್ಮೆ ಅವರು ಪ್ರಧಾನಿಯಾಗಲಿ ಎಂಬ ಕಾರಣಕ್ಕಾಗಿ ಈ ಯಾಗ ಮಾಡಲಾಗಿದೆ. ಇದಕ್ಕೆ ಯಾವುದೇ ರಾಜಕೀಯ ವಿಶ್ಲೇಷಣೆ ಬೇಡ ಎಂದು ಯಡಿಯೂರಪ್ಪ ಹೇಳಿದರು.

          ಯಜ್ಞದಲ್ಲಿ ಬೇರೆ ರಾಜ್ಯಗಳ ಸ್ವಾಮೀಜಿಗಳು ಭಾಗವಹಿಸಿದ್ದಾರೆ. ಕಲ್ಯಾಣಾರ್ಥವಾಗಿ ನಡೆಯಲಿರುವ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು. ಯಜ್ಞದಲ್ಲಿ ಪಾಲ್ಗೊಂಡ ಬಳಿಕ ಯಡಿಯೂರಪ್ಪ ನಂತರ ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ತೆರಳಿದರು. ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕತರಾದ ಸೂಲಗಿತ್ತಿ ನರಸಮ್ಮ ಅವರ ಆರೋಗ್ಯ ವಿಚಾರಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap