ಶಿರಾ:
ಬಿ.ಜೆ.ಪಿ. ಪಕ್ಷದ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನಾಮಕಾವಸ್ಥೆ ಮುಖ್ಯಮಂತ್ರಿಯಾಗಿದ್ದಾರೆ. ಆ ಪಕ್ಷದ ಭೀಷ್ಮಾಚಾರ್ಯ ಅನ್ನಿಸಿಕೊಂಡ ಅವರನ್ನು ಅದೇ ಪಕ್ಷದ ದುರೀಣರೆಲ್ಲರೂ ಸೇರಿಕೊಂಡು ಅವರನ್ನು ಶರಶಯ್ಯೆಯಲ್ಲಿ ಮಲಗಲು ಕಳಿಸುವುದು ಖಚಿತ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಯಡಿಯೂರಪ್ಪನವರ ಸ್ಥಿಯನ್ನು ಕುರಿತು ಅಣಕವಾಡಿದರು.
ಶಿರಾ ನಗರದ ಕೆ.ಪಿ.ಸಿ.ಸಿ. ಮಾಧ್ಯಮ ಸಂವಹನ ಕಛೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿರಾ ಹಾಗೂ ಆರ್.ಆರ್.ನಗರ ಉಪ ಚುನಾವಣೆಯನ್ನು ಗೆಲ್ಲಲೇಬೇಕೆಂದು ವಾಮ ಮಾರ್ಗದಿಂದ ಬಿ.ಜೆ.ಪಿ. ನಡೆಸಿರುವುದು ತಂತ್ರಗಾರಿಕೆ ಅಲ್ಲಾ ಅದು ಕುತಂತ್ರಗಾರಿಕೆ. ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಮಳೆ ಬಂದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲಿನ ಜನರಿಗೆ ಈಗ ನೆರವುಬೇಕಿದೆ. ನೆರವಾಗುವುದಕ್ಕೆ ಸರ್ಕಾರದಲ್ಲಿ ಹಣವಿಲ್ಲವೆನ್ನುವ ಬಿ.ಜೆ.ಪಿ. ಸರ್ಕಾರ ಉಪ ಚುನಾವಣೆಗಳಲ್ಲಿ ಭ್ರಷ್ಠಾಚಾರದ ಹಣವನ್ನು ಬಳಸುತ್ತಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಛೇಡಿಸಿದರು.
ಕಾಂಗ್ರೆಸ್‍ನಿಂದ ಐದು ಮಂದಿ ಬಿ.ಜೆ.ಪಿ. ಪಕ್ಷಕ್ಕೆ ಪಕ್ಷಾಂತರಗೊಳ್ಳುವುದಾಗಿ ಲಕ್ಷ್ಮಣ ಸವದಿ ಹೇಳಿ ಹೋಗಿದ್ದಾರೆ. ಉಪ ಚುನಾವಣೆಯ ನಂತರ ಬಿ.ಜೆ.ಪಿ. ಪಕ್ಷದ 30 ಮಂದಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆಂಬ ವಿಷಯ ಅವರಿಗೆ ತಿಳಿದಿರಲಿಕ್ಕಿಲ್ಲ ಎಂದು ಹರಿಪ್ರಸಾದ್ ಸವಾಲು ಎಸೆದರು.ದೇಶದಲ್ಲಿ ಕಾಂಗ್ರೆಸ್ ಪಕ್ಷ ವ್ಯಾಪಾರೋಕ್ಕೋಸ್ಕರ ಬಂದಿಲ್ಲ. ನಮ್ಮ ಪಕ್ಷ ನೋಟನ್ನು ಎಣಿಸಿಕೊಳ್ಳಲು ಮನೆಯಲ್ಲಿ ಯಂತ್ರಗಳನ್ನು ಇಟ್ಟುಕೊಂಡಿಲ್ಲ. ಭ್ರಷ್ಠಾಚಾರದ ನೋಟುಗಳನ್ನು ಎಣಿಸುತ್ತಾ ಕೂರುವುದು. ಕಾಂಗ್ರೆಸ್ ಕೆಲಸವಲ್ಲ. ನೋಟು ಎಣಿಸುವ ಯಂತ್ರಗಳನ್ನು ಮನೆಯಲ್ಲಿಟ್ಟುಕೊಳ್ಳುವ ಬಿ.ಜೆ.ಪಿ. ಪಕ್ಷದ ದುರೀಣರು ಮೊದಲು ಕುತಂತ್ರದ ರಾಜಕಾರಣ ಬಿಡಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಹರಿಪ್ರಸಾದ್ ಪರೋಕ್ಷವಾಗಿ ಲೇವಡಿ ಮಾಡಿದರು
ಶಿರಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಪಕ್ಷಕ್ಕೆ ನೇರ ಸ್ಪರ್ಧೆ ಏರ್ಪಟ್ಟಿದೆ. ದೇಶದ ಜನತೆಯ ಸಂಕಷ್ಟಕ್ಕೆ, ರೈತರ ಸಂಕಷ್ಟಕ್ಕೆ ಸ್ಪಂಧಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚುನಾವಣೆಗೆ ಭ್ರಷ್ಠಾಚಾರದ ಹಣ ಬಳಸುತ್ತಿವೆ ಎಂದ ಹರಿಪ್ರಸಾದ್ ಟೀ ಮಾರುತ್ತಿದ ವ್ಯಕ್ತಿ ಈಗ ದೇಶವನ್ನೇ ಮಾರಿದರೂ ಅಚ್ಚರಿ ಇಲ್ಲ ಎಂದು ಟೀಕಿಸಿದರು.
ಎ.ಐ.ಸಿ.ಸಿ. ವಕ್ತಾರ ಬ್ರಿಜೇಶ್ ಕಾಳಪ್ಪ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾ. ಅಧ್ಯಕ್ಷ ನಟರಾಜ್ ಬರಗೂರು, ಎಸ್.ಎನ್.ಕೃಷ್ಣಯ್ಯ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಶಶಿಧರಗೌಡ, ಹಲಗುಂಡೇಗೌಡ, ಡಿ.ಸಿ.ಅಶೋಕ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ