ಬೆಂಗಳೂರು
ಆಪರೇಷನ್ ಕಮಲ ಕಾರ್ಯಾಚರಣೆ ಕುರಿತು ವಿಶೇಷ ತನಿಖಾ ದಳ [ಎಸ್.ಐ.ಟಿ] ದಿಂದ ಸಮಗ್ರ ತನಿಖೆ ನಡೆಸಲು ತೀರ್ಮಾನಿಸಿರುವ ಬೆಳವಣಿಗೆಯಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಆಪರೇಷನ್ ಕಮಲ ಕಾರ್ಯಾಚರಣೆ ಭೀತಿಯಿಂದ ಹೊರ ಬಂದಂತಾಗಿದೆ. ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ರಾಜ್ಯಭಾರದ ಕನಸು ಕಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರ ಕನಸಿಗೆ ಈ ಬೆಳವಣಿಗೆಯಿಂದ ಭಾರಿ ಹೊಡೆತ ಬಿದ್ದಂತಾಗಿದೆ.
ಒಂದೆಡೆ ವಿಧಾನಮಂಡಲ, ಮತ್ತೊಂದೆಡೆ ಸಂಸತ್ತಿನಲ್ಲಿ ಈ ವಿಚಾರ ಪ್ರತಿಧ್ವನಿಸಿ ಭಾರಿ ಚರ್ಚೆ ನಡೆದ ಬೆನ್ನಲ್ಲೇ ಇದೀಗ ಆಪರೇಷನ್ ಕಮಲ ಕಾರ್ಯಾಚರಣೆಯಿಂದ ದೂರ ಇರುವುದು ಕ್ಷೇಮ ಎನ್ನುವ ನಿಲುವಿನಲ್ಲಿ ಬಹುತೇಕ ಬಿಜೆಪಿ ನಾಯಕರಿದ್ದಾರೆ.ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿಫಲವಾಗಿರುವುದು, ದೋಸ್ತಿ ಸರ್ಕಾರದ ಖೆಡ್ಡಾಗೆ ಧ್ವನಿ ಸುರಳಿಯಲ್ಲಿ ನೇರವಾಗಿ ಬಿದ್ದಿರುವುದು ಸಹ ಬಿಜೆಪಿಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
ಇನ್ನು ಹೊಸದಾಗಿ ಆಪರೇಷನ್‍ಗೆ ಒಳಗಾಗುವ ಶಾಸಕರು ಸಹ ಹತ್ತಾರು ಬಾರಿ ಯೋಚಿಸುವ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕವಾಗಿ ತೀವ್ರ ಮುಜುಗರಕ್ಕೆ ಒಳಗಾಗಿರುವುದರಿಂದ ಆಪರೇಷನ್ ಕಮಲ ಕಾರ್ಯಾಚರಣೆಯ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎನ್ನುವ ನಿರೀಕ್ಷೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳೆಯದಲ್ಲಿ ಮೂಡಿದೆ.
ಇನ್ನು ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಸದನದಲ್ಲಿ ಸಮರ್ಥಿಸಿಕೊಳ್ಳಲು ಬಿಜೆಪಿ ನಾಯಕರು ಅಷ್ಟಾಗಿ ಆಸಕ್ತಿ ತೋರದೇ ಇರುವುದನ್ನು ನೋಡಿದರೆ, ಬಿಜೆಪಿ ಶಾಸಕರು ಸಹ ಆಪರೇಷನ್ ಕಮಲ ವಿರುದ್ಧವಾಗಿರುವುದು ಸ್ಪಷ್ಟವಾಗಿದೆ.ಇಡೀ ರಾಜ್ಯದಲ್ಲಿ ಯಾವುದೇ ಮುಖ್ಯಮಂತ್ರಿ ಎದುರಿಸಲಾಗದಷ್ಟು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಯಡಿಯೂರಪ್ಪ ಅವರಿಗೆ ಈಗ ಎಸಿಬಿಯಲ್ಲಿ ಎರಡು ಪ್ರಕರಣಗಳು, ಜತೆಗೆ ವಿಶೇಷ ತನಿಖಾ ದಳದ ತನಿಖೆ ಸಹ ಎದುರಿಸಬೇಕಾಗಿರುವುದು ಭಾರಿ ಹಿನ್ನಡೆ ಎಂದೇ ಭಾವಿಸಲಾಗಿದೆ. ಈ ಬೆಳವಣಿಗೆ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸಿಗೂ ಸಹ ಪೆಟ್ಟು ಬಿದ್ದಂತಾಗಿದೆ.
ಭಾರಿ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಈ ಬೆಳವಣಿಗೆ ಸ್ವಲ್ಪ ಮಟ್ಟಿಗೆ ಹುಮ್ಮಸ್ಸು ಮೂಡಿಸಿದಂತಾಗಿದೆ. ಬರುವ ದಿನಗಳಲ್ಲಿ ಕಾಂಗ್ರೆಸ್‍ನ ಕಿರಿಕಿರಿಯೂ ಕಡಿಮೆಯಾಗುವ ಆಶಾಭಾವನೆ ಮೂಡಿಸಿದೆ.