ಬೆಂಗಳೂರು
ಬೆಳಗಾವಿಯಲ್ಲಿ ಡಿ. 10 ರಂದು ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನಕ್ಕೂ ಮುನ್ನ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳ ಸಾಧ್ಯತೆಗಳು ಗೋಚರಿಸುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ವಿಶ್ರಾಂತಿ ನೆಪದಲ್ಲಿ ಕೇರಳಕ್ಕೆ ತೆರಳುತ್ತಿರುವುದು ಕುತೂಹಲ ಮೂಡಿಸಿದೆ.
ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಹಾಗೂ ಅದಕ್ಕೆ ತಯಾರಿ ನಡೆಸಲು ಯಡಿಯೂರಪ್ಪ ಕೇರಳದ ಕೋಟಕಲ್‍ನ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವಿಶ್ರಾಂತಿ ಹಾಗೂ ಪ್ರಕೃತಿ ಚಿಕಿತ್ಸೆಯನ್ನು ಪಡೆಯಲು ಇಂದು ಕೇರಳಕ್ಕೆ ತೆರಳುತ್ತಿದ್ದಾರೆ.
ರಾಜ್ಯ ರಾಜಕೀಯದಲ್ಲೇ ಬದಲಾವಣೆಗಳಾಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೇರಳಕ್ಕೆ ತೆರಳುತ್ತಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.ಕೇರಳದಲ್ಲೇ ಕುಳಿತು ಅವರು ರಾಜಕೀಯ ಚದುರಂಗದ ದಾಳ ಉರುಳಿಸುವರೇ ಎಂಬುದು ಕುತೂಹಲ ಮೂಡಿಸಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ರಾಜಕೀಯ ಚಟುವಟಿಕೆಗಳಿಗಾಗಿ ಕೇರಳಕ್ಕೆ ತೆರಳುತ್ತಿಲ್ಲ, ವಿಶ್ರಾಂತಿಗಾಗಿ ಪ್ರಕೃತಿ ಚಿಕಿತ್ಸಾ ಧಾಮಕ್ಕೆ ದಾಖಲಾಗುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆಯಾದರೂ ಯಡಿಯೂರಪ್ಪನವರ ಕೇರಳ ಭೇಟಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವುದಂತೂ ನಿಜ.ಇಂದು ಕೇರಳಕ್ಕೆ ತೆರಳಲಿರುವ ಯಡಿಯೂರಪ್ಪನವರು ಪ್ರಕೃತಿ ಚಿಕಿತ್ಸೆ ಪಡೆದು ಡಿ. 8 ರಂದು ನಗರಕ್ಕೆ ಮರಳುವರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ