ಯಶಸ್ವಿನಿ ಯೋಜನೆ ಮರು ಜಾರಿಗೆ ಕೆಎನ್ ರಾಜಣ್ಣ ಒತ್ತಾಯ..!

ತುಮಕೂರು

    ರೈತರ ಆರೋಗ್ಯ ಸಮಸ್ಯೆಗಳಿಗೆ ಸಹಕಾರಿಯಾಗಿದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಪುನರ್ ಆರಂಭಿಸುವಂತೆ ಮತ್ತು ತುಮಕೂರು ಜಿಲ್ಲೆಯಲ್ಲಿ ಒಂದು ಮೆಗಾ ಹಾಲಿನ ಡೈರಿ ಸ್ಥಾಪನೆಗೆ ಸಹಕರಿಸುವಂತೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ. ಎನ್. ರಾಜಣ್ಣನವರು ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದಾರೆ.

     ನಗರದ ಡಿಸಿಸಿ ಬ್ಯಾಂಕಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 14 ರಂದು ನಗರದಲ್ಲಿ ನಡೆಯುವ 66ನೇ ಸಹಕಾರಿ ಸಪ್ತಾಹದ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಜಿಲ್ಲೆಯ ರೈತರ ಪರವಾಗಿ ಈ ಸಂಬಂಧ ಮನವಿ ಮಾಡಲಾಗುವುದು ಎಂದು ಹೇಳಿದರು.

     ಈ ಹಿಂದೆ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆ ರೈತರು ಆರೋಗ್ಯ ಸೇವೆ ಪಡೆಯಲು, ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೆ ಅತ್ಯಂತ ಸಹಕಾರಿಯಾಗಿತ್ತು, ಆದರೆ ಬೇರೊಂದು ಆರೋಗ್ಯ ಯೋಜನೆ ಜಾರಿಗೆ ತರುವ ಹೆಸರಿನಲ್ಲಿ ಅದನ್ನು ರದ್ದು ಮಾಡಿದ್ದು, ಹೊಸ ಯೋಜನೆ ಅನುಷ್ಠಾನಕ್ಕೆ ಬರಲಿಲ್ಲ, ಅದು ರೈತರಿಗೆ ಅಷ್ಟೊಂದು ಸಹಕಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಯಶಸ್ವಿನಿಯನ್ನು ಪುನರ್ ಆರಂಭಿಸುವಂತೆ ತಾವು ಹಾಗೂ ರಾಜ್ಯದ ಎಲ್ಲಾ ಸಹಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಒತ್ತಾಯಿಸಿದ್ದು, ಅದಕ್ಕೆ ಅವರು ಒಪ್ಪಿದ್ದು ಸಹಕಾರ ಸಪ್ತಾಹದ ಸಂದರ್ಭದಲ್ಲಿ ಅದನ್ನು ಘೋಷಿಸುವ ನಿರೀಕ್ಷೆಯಿದೆ ಎಂದರು..

      ತುಮಕೂರು ಜಿಲ್ಲೆಯಲ್ಲಿ ಅತಿಹೆಚ್ಚಿನ ಸಂಖ್ಯೆಯ ರೈತರು ಕೃಷಿಯ ಜೊತೆಗೆ ತಮ್ಮ ಆರ್ಥಿಕ ಚಟುವಟಿಕೆಗೆ ಹೈನೋದ್ಯಮ ಅವಲಂಬಿಸಿದ್ದಾರೆ. ಮುಂದೆ ಇನ್ನೂ ಹೆಚ್ಚು ಜನ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದ್ದು ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಹಾಲು ಒಕ್ಕೂಟದ ಆವರಣದಲ್ಲಿ ಒಂದು ಮೆಗಾ ಡೈರಿ ಸ್ಥಾಪಿಸುವಂತೆ ಹಾಲು ಒಕ್ಕೂಟದ ಆಡಳಿತ ಮಂಡಲಿ ಸೇರಿದಂತೆ ಎಲ್ಲಾ ಸಹಕಾರಿಗಳೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೂ ಅದನ್ನೂ ಸಹ ಸಪ್ತಾಹದ ದಿನ ಘೋಷಿಸುವ ನಿರೀಕ್ಷೆಯಿದೆ ಎಂದು ಕೆ. ಎನ್. ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.

      ಕರ್ನಾಟಕ ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ ಎನ್. ಗಂಗಣ್ಣ, ದೇವರಾಜು, ಡಿಸಿಸಿ ಬ್ಯಾಂಕಿನ ನಿರ್ದೇಶಕ ಆರ್. ರಾಜೇಂದ್ರ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವೆಂಕಟೇಗೌಡ, ಮುಖಂಡರಾದ ನಂಜಪ್ಪ, ರಾಮಚಂದ್ರಯ್ಯ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap