ದಾವಣಗೆರೆ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಭಯೋತ್ಪಾದಕ ದಾಳಿಯನ್ನು ಖಂಡಿ, ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಶ್ರೀರಾಮ ಸೇನೆ ಮುಖಂಡರು, ಕಾರ್ಯಕರ್ತರು ಶತೃರಾಷ್ಟ್ರ ಪಾಕಿಸ್ಥಾನದ ವಿರುದ್ಧ ಘೋಷಣೆ ಕೂಗಿ, ಪಾಕಿಸ್ಥಾನದ ಧ್ವಜವನ್ನು ಚಪ್ಪಲಿಗಾಲಿನಲ್ಲಿ ತುಳಿದು, ಸುಟ್ಟು ಆಕ್ರೋಶ ವ್ಯಕ್ತಪಡಿಸಿ, ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ದೇಶದಲ್ಲಿ ಭಯೋತ್ಪಾದಕರ ಹುಟ್ಟಡಗಿಸುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವಿದ್ದರೂ ಸಹ ಭಯೋತ್ಪಾದಕರ ಕಾಟ ತಪ್ಪಿಲ್ಲ. ಶತೃರಾಷ್ಟ್ರ ಪಾಕಿಸ್ಥಾನವು ಭಾರತದ ಸಹನೆ ಪರೀಕ್ಷಿಸುವ ಕೆಲಸ ಮಾಡುತ್ತಿದೆ. ಶಾಂತಿ ಬಯಸುವ ಭಾರತದ ಮೇಲೆ ಪದೇಪದೇ ಉಗ್ರರನ್ನು ಛೂಬಿಟ್ಟು ದೇಶ ಒಡೆಯುವ ಕೆಲಸಕ್ಕೆ ಕೈ ಹಾಕಿದೆ ಎಂದು ಕಿಡಿಕಾರಿದರು.
ಸುಮಾರು 350 ಕೆಜಿ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದರೂ, ಈ ಬಗ್ಗೆ ಮಾಹಿತಿ ಇಲ್ಲದಿರುವುದು ಭದ್ರತಾ ವೈಫಲ್ಯವಾಗಿದೆ. ದೇಶದ ಗುಪ್ತಚರ ಇಲಾಖೆ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿರುವುದು ಕಂಡುಬರುತ್ತದೆ. ಸ್ಥಳೀಯರ ಬೆಂಬಲವಿಲ್ಲದೆ ಇಂತಹ ಭಯಾನಕ ದಾಳಿ ನಡೆಸಲು ಸಾಧ್ಯವಿಲ್ಲ. ಭಯೋತ್ಪಾದಕ ದಾಳಿ ಹಿಂದೆ ಯಾರದ್ದೇ ಕೈವಾಡವಿದ್ದರೂ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ದೇಶದ ಗಡಿಭಾಗದಲ್ಲಿ ಆಗಾಗ ಇಂತಹ ಕೃತ್ಯಗಳು ನಡೆಯುತ್ತಿದ್ದರೂ ಸಹ ಕೇಂದ್ರ ಸರ್ಕಾರ ಮೃದುಧೋರಣೆ ತಾಳಿರುವುದು ಸರಿಯಲ್ಲ. ಉಗ್ರರ ಅಟ್ಟಹಾಸಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು? ರಜೆ ಮುಗಿಸಿ ಕರ್ತವ್ಯಕ್ಕೆ ವಾಪಸ್ಸಾಗುತ್ತಿದ್ದ ಸಿಆರ್ಪಿಎಫ್ ಯೋಧರನ್ನೇ ಭಯೋತ್ಪಾದಕರು ಹತ್ಯೆ ಮಾಡಬಹುದಾದರೆ, ಈ ದೇಶದ ಸಾಮಾನ್ಯ ಪ್ರಜೆಯ ಗತಿಯೇನು? ಎಂದು ಪ್ರಶ್ನಿಸಿದ ಅವರು, ಮಾನವತೆಗೆ ವಿರುದ್ಧವಾಗಿರುವ ಉಗ್ರಗಾಮಿಗಳನ್ನು ಕಂಡಲ್ಲಿ ಗುಂಡಿಟ್ಟು ತಕ್ಕ ಪಾಠ ಕಲಿಸಬೇಕೆಂದು ಆಗ್ರಹಿಸಿದರು.
ಶ್ರೀರಾಮ ಸೇನೆಯ ಜಿಲ್ಲಾ ಪ್ರಮುಖ್ ಶ್ರೀಧರ ಪಟೇಲ್, ಮಾಧ್ಯಮ ಪ್ರಮುಖ್ ವಿನೋದ್, ಸಂಪರ್ಕ ಪ್ರಮುಖ್ ಕುಮಾರ್ ಮತ್ತಿ, ವಿದ್ಯಾರ್ಥಿ ಸೇನಾ ಪ್ರಮುಖ್ ನೂತನ್ ಆಚಾರ್ಯ ಸೇರಿದಂತೆ ಸಂಘಟನೆಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
