ತುಮಕೂರು
ತೆಲುಗಿನ ಕವಿ ವೇಮನ ಮಹಾಯೋಗಿಗಳು ರಾಷ್ಟ್ರಕಂಡ ಬಹುದೊಡ್ಡ ಯೋಗಿಗಳು ಎಂದು ನಗರದ ಚಿಕ್ಕಪೇಟೆಯಲ್ಲಿರುವ ಹಿರೇಮಠದ ಷ.ಬ್ರ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ರೆಡ್ಡಿ ಜನಸಂಘಗಳ ಸಂಯುಕ್ತಾಶ್ರಯದಲ್ಲಿಂದು ನಗರದ ಡಾ|| ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ “ಮಹಾಯೋಗಿ ವೇಮನ ಜಯಂತಿ” ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ವೇಮನ ಅವರ ಭಾವಚಿತ್ರ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಮಹಾನುಭಾವರಾದ ವೇಮನ ಮಹಾಯೋಗಿಗಳು ಯಾವುದೋ ಒಂದು ಜಾತಿಗೆ ಸೀಮಿತವಾಗದೇ ಜಾತ್ಯಾತೀತವಾಗಿ ಇದ್ದವರು. ಚೌಪದಿ ಸಾರ್ವಭೌಮ, ಮಂದಗತಿಯಿಂದ ಮಹಾಮತಿಯಾಗಿ ಬೆಳೆದು ನಿಂತವರು, ಮಹಾಭೋಗಿಯಿಂದ ಮಹಾಯೋಗಿಯಾದ ವೇಮನ ಮಹಾಯೋಗಿಗಳು ಸುಮಾರು 3000ಕ್ಕೂ ಹೆಚ್ಚು ಸಾಹಿತ್ಯ ರಚನೆ ಮಾಡಿದ್ದಾರೆ. ಇವರು ತಮ್ಮ ಸಮಗ್ರ ಬದುಕನ್ನು ಸಮಾಜ ಸುಧಾರಣೆಗೆ ಮುಡಿಪಿಟ್ಟವರು ಎಂದರು. ಹಾಗೆಯೇ ಬುದ್ದ, ಬಸವಣ್ಣ, ಕನಕದಾಸ, ಮಹಾವೀರ, ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಈ ಎಲ್ಲ ಮಹಾನುಭಾವರೂ ಕೂಡ ಸಮಾಜದ ಸುಧಾರಣೆಗೆ ಕೆಲಸ ಮಾಡಿದವರು ಎಂದು ಸ್ಮರಿಸಿದರು.
ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಕೆ. ಶ್ರೀನಿವಾಸ ರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೇಮನ ಅವರು ರೆಡ್ಡಿ ಸಮುದಾಯದವರಿಗೆ ಮಾತ್ರವಲ್ಲದೆ ಎಲ್ಲ ಸಮುದಾಯದ ಏಳ್ಗೆಗಾಗಿ ತಮ್ಮ ಸಾಹಿತ್ಯ ರಚನೆಯ ಮೂಲಕ ಮಹಾನ್ ಸಂದೇಶ ನೀಡಿದ್ದಾರೆ. ಸಾಧ್ವಿ ಹೇಮರೆಡ್ಡಿ ಮಲ್ಲಮ್ಮನವರು ಸಹ ಆದರ್ಶ ಮಹಿಳೆಯಾಗಿ ಒಂದು ಶಕ್ತಿ ರೂಪವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಈ ಇಬ್ಬರ ಜನ್ಮದಿನವನ್ನು ಹಬ್ಬವಾಗಿ ಆಚರಿಸಬೇಕೆಂದು ತಿಳಿಸಿದರು.
ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಅನುಕೂಲ ಮಾಡಿಕೊಡುವ ಸಲುವಾಗಿ ಜಿಲ್ಲಾ ರೆಡ್ಡಿ ಜನಸಂಘವು ಹಾಸ್ಟೆಲ್ ವ್ಯವಸ್ಥೆ ಮಾಡಲು ಮುಂದಾಗಿದ್ದು, ಇದರ ಪ್ರಯೋಜನ ಪಡೆಯಲು ಕರೆ ನೀಡಿದರು. ರೆಡ್ಡಿ ಸಮುದಾಯದವರು ತಮ್ಮನ್ನು ರಾಜಕೀಯವಾಗಿ ಗುರುತಿಸಿಕೊಳ್ಳಲು ಮುಂದೆ ಬರವುದರಿಂದ ಸಮುದಾಯದ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಧ್ಯಾಪಕ ಪ್ರೊ|| ವೆಂಕಟರೆಡ್ಡಿ ರಾಮರೆಡ್ಡಿ ಅವರು ವೇಮನ ಮಹಾಯೋಗಿಗಳ ಕುರಿತ ತಮ್ಮ ಉಪನ್ಯಾಸದಲ್ಲಿ ವೇಮನ ಅವರನ್ನು ಮಹಾಯೋಗಿಯನ್ನಾಗಿ ಪರಿವರ್ತಿಸುವಲ್ಲಿ ಅತ್ತಿಗೆಯಾದ ಹೇಮರೆಡ್ಡಿ ಮಲ್ಲಮ್ಮನವರ ಪಾತ್ರ ಮಹತ್ವದ್ದಾಗಿದೆ ಎಂದು ಸ್ಮರಿಸುತ್ತಾ, ಈ ಇಬ್ಬರನ್ನು ಸಾಂಸ್ಕøತಿಕ ಆರಾಧ್ಯ ನಾಯಕರೆಂದು ಸ್ವೀಕರಿಸಿರುವ ರೆಡ್ಡಿ ಸಮುದಾಯಕ್ಕೆ ವೇಮನ ಅವರ ಸಾಹಿತ್ಯ, ಹೇಮರೆಡ್ಡಿ ಮಲ್ಲಮ್ಮನವರ ಆದರ್ಶ ಬದುಕು ಮಾದರಿಯಾಗಿವೆ.
ಸಮಾರಂಭದಲ್ಲಿ ಸಮಾಜಸೇವೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ|| ಪ್ರಭಾಕರರೆಡ್ಡಿ ಹಾಗೂ ಗೋವಿಂದರೆಡ್ಡಿ, ಶಿಕ್ಷಣ ಕ್ಷೇತ್ರದಲ್ಲಿ ಜಿ. ಚಿನ್ನಪ್ಪ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ರೆಡ್ಡಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಜಿಲ್ಲಾ ರೆಡ್ಡಿ ಜನ ಸಂಘದ ಪದಾಧಿಕಾರಿಗಳು ಮತ್ತಿತರ ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








