ದಾವಣಗೆರೆ:
ಸರ್ಕಾರ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಚದುರಂಗ (ಚೆಸ್) ಹಾಗೂ ಯೋಗ ಕಡ್ಡಾಯಗೊಳಿಸಬೇಕೆಂದು ಪಾಲಿಕೆ ಸದಸ್ಯ, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಒತ್ತಾಯಿಸಿದರು.
ನಗರದ ಶ್ರೀಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ಸಪ್ತರ್ಷಿ ಸೆಂಟರ್ ಫಾರ್ ಯೋಗಾ ಅಂಡ್ ಸ್ಪರಿಚ್ಯುಯಲ್ ಅವೇರ್‍ನೆಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ ಹಾಗೂ ಹರಿಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವುಗಳ ಸಹಯೋಗದಲ್ಲಿ ಏರ್ಪಡಿಸಿದ್ದ 2ನೇ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಎಲ್ಲಾ ರಂಗಗಳಲ್ಲೂ ಚಂಚಲತೆ ಇದ್ದು, ಮನಸ್ಸು ಏಕಾಗ್ರತೆಯಿಂದ ಇಲ್ಲದ ಕಾರಣ ಸಾಧನೆಗೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಏಕಾಗ್ರತೆ ಸಾಧಿಸಲು ಸಹಕಾರಿಯಾಗಿರುವ ಚೆಸ್ ಹಾಗೂ ಯೋಗವನ್ನು ಶಾಲಾ-ಕಾಲೇಜು ಹಂತದಿಂದಲ್ಲೇ ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಸಾಧನೆಗೆ ಪ್ರೇರಣೆ ನೀಡಬೇಕಾದ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಈ ಎರಡೂ ಕ್ರೀಡೆಗಳನ್ನು ಶಾಲಾ-ಕಾಲೇಜು ಹಂತಗಳಲ್ಲಿ ಕಡ್ಡಾಯಗೊಳಿಸುವತ್ತ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಮನುಷ್ಯ ದೈಹಿಕ ಹಾಗೂ ಮಾನಸಿಕ ಸದೃಢತೆ ಹೊಂದಲು ಯೋಗ ಸಹಕಾರಿಯಾಗಿದೆ. ಪ್ರಸ್ತುತ ಕ್ರೀಡೆ, ರಾಜಕೀಯ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲಾ ರಂಗಗಳಲ್ಲೂ ಸ್ಪರ್ಧೆ ಇದೆ. ಹಿಂದೆ ಕಡಿಮೆ ಅಂಕಗಳನ್ನು ಪಡೆದು ತೇರ್ಗಡೆಯಾಗುವುದು ಹೆಮ್ಮೆ ಅನಿಸುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಕೆಗೂ ಪೈಪೋಟಿ, ಸ್ಪರ್ಧೆ ಏರ್ಪಟ್ಟಿದೆ. ಆದ್ದರಿಂದ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರಿಣಾಮಕಾರಿ ಪೈಪೋಟಿ ನೀಡಬೇಕಾದರೆ, ಮನಸ್ಸು ಹತೋಟಿಯಲ್ಲಿ ಇರುವುದು ಅತ್ಯವಶ್ಯವಾಗಿದ್ದು, ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಡಲು ಯೋಗ ಅತ್ಯಗತ್ಯವಾಗಿದೆ ಎಂದರು.
ಬೇರೆ ಜಿಲ್ಲೆ, ರಾಜ್ಯಗಳಲ್ಲಿ ಉದ್ಯಮಿಗಳು, ಕಂಪನಿಗಳು ಕ್ರೀಡಾಪಟುಗಳಿಗೆ ನೌಕರಿ ನೀಡಿ, ಪೋಷಣೆ ಮಾಡುತ್ತಿರುವ ಮಾದರಿಯಲ್ಲಿ ನಮ್ಮ ಜಿಲ್ಲೆಯ ಕ್ರೀಡಾಪಟುಗಳಿಗೂ ಕೆಲಸ ನೀಡಿ, ಪೋಷಿಸಿ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಪ್ತರ್ಷಿ ಯೋಗ ಕೇಂದ್ರದ ಅಧ್ಯಕ್ಷ ಶಂಕರ್ ಖಟಾವಕರ್ ಮಾತನಾಡಿ, ಈ ಸ್ಪರ್ಧೆಯಲ್ಲಿ ಯೋಗ ಪಟುಗಳು ವಿವಿಧ ಭಂಗಗಳಲ್ಲಿ ಯೋಗಾಸನ ಪ್ರದರ್ಶನ ನೀಡುವ ಮೂಲಕ ದಾವಣಗೆರೆಯ ಜನತೆಗೆ ರಸದೌತಣ ನೀಡಿದಂತಾಗಿದ್ದು, ಪ್ರಸ್ತುತ ಎಲ್ಲರಿಗೂ ಯೋಗದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಯೋಗ ಒಂದು ಪ್ರಾಚೀನ ಕಲೆಯಾಗಿದ್ದು, ನಮ್ಮ ಋಷಿಮುನಿಗಳು ಮನಸ್ಸಿನ ಏಕಾಗ್ರತೆ ಸಾಧಿಸಿ, ದಿಟ್ಟ ಹೆಜ್ಜೆ ಇಡಲು ಯೋಗಾಸನ ಸ್ಫೂರ್ತಿ ನೀಡಿತ್ತು. ಮಾನಸಿಕ ಸದೃಢತೆ ನೀಡುವ ಯೋಗವನ್ನು ನಾವು ಕಲಿಯಬೇಕೆಂಬ ಪ್ರೇರಣೆಯನ್ನು ಈ ಯೋಗಾಸನ ಸ್ಪರ್ಧೆ ನೀಡಲಿದೆ ಎಂದು ನುಡಿದರು.ಉದ್ಯಮಿ ಎಂ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಯೋಗಾಸನ ಸ್ಪರ್ಧೆಯಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 250ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಸಪ್ತರ್ಷಿ ಯೋಗ ಕೇಂದ್ರದ ಬಿ.ರೇವಣಸಿದ್ದಪ್ಪ, ಕೆ.ಜೈಮುನಿ, ಜಿಲ್ಲಾ ಯೋಗ ಒಕ್ಕೂಟದ ವಾಸುದೇವ ರಾಯ್ಕರ್, ಯೋಗ ತರಬೇತುದಾರ ಆರುಮುಗಂ ಮತ್ತಿತರರು ಉಪಸ್ಥಿತರಿದ್ದರು.