ಯೋಗೇಶ್ ಗೌಡ ಹತ್ಯೆ: 6 ಮಂದಿ ವಿರುದ್ದ ಎಫ್‌ಐಆರ್ ದಾಖಲು.!

ಬೆಂಗಳೂರು

   ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು ಆರು ಮಂದಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

   ಪ್ರಕರಣದ ಆರೋಪಿಗಳಾದ ಬಸವರಾಜ ಶಿವಪ್ಪ, ವಿಕ್ರಮ್ ಬಳ್ಳಾರಿ, ಕೀರ್ತಿ ಕುಮಾರ್ ಕುರಹಟ್ಟಿ, ಸಂದೀಪ್ ಸೌದತ್ತಿ, ವಿನಾಯಕ ಕಾಟಗಿ ಹಾಗೂ ಮಹಾಬಲೇಶ್ವರ ಹೊನಗಲ್ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೆ ಮುಂದಾಗಿದ್ದಾರೆ.

    ೨೦೧೭ ಜೂನ್ ೧೫ರಂದು ಧಾರವಾಡ ನಗರದ ಸಪ್ತಾಪುರ ಜಿಮ್‌ಗೆ ಬೆಳಿಗ್ಗೆ ನುಗ್ಗಿದ ದುಷ್ಕರ್ಮಿಗಳು ಯೋಗೇಶ್ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದು ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.ಈ ದೃಶ್ಯಗಳನ್ನಾಧರಿಸಿ ಪೊಲೀಸರು ಮಾಜಿ ಸಚಿವ, ಸ್ಥಳೀಯ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವರನ್ನು ಬಂಧಿಸಿದ್ದರು. ಹೀಗಾಗಿ ಕೊಲೆಯ ಹಿಂದೆ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.

    ಪ್ರಕರಣದಲ್ಲಿ ವಿನಯ್ ಕುಲಕರ್ಣಿಯವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಪಿಗಳು ಯೋಗಿಶ್ ಗೌಡನ ಸಹೋದರನ ಜೊತೆ ರಾಜಿ ಮಾಡಿಕೊಳ್ಳಲು ಮುಂದಾಗಿದ್ದರು. ಇತ್ತ ವಿನಯ್ ಕುಲಕರ್ಣಿಯವರ ಹೆಸರನ್ನು ಕೈ ಬಿಡಲು ಅಧಿಕಾರಿಗಳು ಪ್ರಯತ್ನ ಮಾಡಿಕೊಳ್ಳುತ್ತಿದ್ದಾರೆ ಎಂದು ಯೋಗೇಶ್ ಗೌಡ ತಾಯಿ ಆರೋಪಿಸಿದ್ದರು.

ರಾಜಕೀಯ ಲಾಭ

    ಈ ಎಲ್ಲ ಬೆಳವಣಿಗೆ ನಡುವೆ ೨೦೧೭ರಲ್ಲಿ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರುವ ಮೂಲಕ ಹಲವು ಅಚ್ಚರಿಗೆ ಕಾರಣವಾಗಿದ್ದರು. ಆದರೆ ಬಿಜೆಪಿ ನಾಯಕರು ಮಲ್ಲಮ್ಮ ಅವರನ್ನು ಕಾಂಗ್ರೆಸ್ ನಾಯಕರು ಹೈಜಾಕ್ ಮಾಡಿದ್ದಾರೆ. ಬೆದರಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಮಲ್ಲಮ್ಮ, ನಾನು ಸ್ವಇಚ್ಛೆಯಿಂದ ಕಾಂಗ್ರೆಸ್ ಸೇರಿದ್ದೇನೆ ಎಂದಿದ್ದರು.

   ನನ್ನ ಗಂಡನ ಹತ್ಯೆಯಲ್ಲಿ ವಿನಯ್ ಕುಲಕರ್ಣಿ ಪಾತ್ರ ಇದೆ ಅಂತ ನಾನು ಸುಮ್ಮನೆ ಆರೋಪ ಮಾಡಲ್ಲ. ಗಂಡನನ್ನು ಕೊಂದವರಿಗೆ ಶಿಕ್ಷೆ ಆಗಬೇಕು. ನನಗೂ, ನನ್ನ ನಾಲ್ಕು ಮಕ್ಕಳಿಗೂ ನ್ಯಾಯ ಸಿಗಬೇಕು. ಸಿದ್ದರಾಮಯ್ಯ ನಮ್ಮ ಜಾತಿಯವರು. ಅವರ ಬಳಿ ಹೋದರೆ ನನಗೆ ನ್ಯಾಯ ಸಿಗುತ್ತೆ. ಅವರು ಸೇರಿಸಿಕೊಂಡ್ರೆ ನಾನು ಕಾಂಗ್ರೆಸ್ ಸೇರುತ್ತೇನೆ. ವಿನಯ್ ಕುಲಕರ್ಣಿ ಇದುವರೆಗೆ ನನ್ನೊಂದಿಗೆ ಯಾವತ್ತೂ ಮಾತನಾಡಿಲ್ಲ. ನನ್ನ ಭಾವ ಗುರುನಾಥ್ ಗೌಡ ಪ್ರತಿಯೊಂದಕ್ಕೂ ನನಗೆ ಅಡ್ಡಿಪಡಿಸುತ್ತಿದ್ದಾರೆ. ನಾನು ಯಾರನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಗಂಡನ ಸಾವನ್ನು ನನ್ನ ಭಾವ ಹಾಗೂ ಸ್ಥಳೀಯ ನಾಯಕರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಂತ ಮಲ್ಲಮ್ಮ ತನ್ನ ಅಳಲು ತೋಡಿಕೊಂಡಿದ್ದರು.

ಕೊಲೆಗೆ ಸಂಚು

     ಯೋಗೇಶ್ ಗೌಡ ಪ್ರಕರಣದಲ್ಲಿ ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದ ಬಸವರಾಜ್ ಮುತ್ತಗಿ, ಕೀರ್ತಿ, ವಿನಾಯಕ್, ಮುದಕಪ್ಪ ಮತ್ತು ಸಂದೀಪ್ ಕೊಲೆಗೆ ಸಂಚು ರೂಪಿಸಲಾಗಿತ್ತು. ಯೋಗೇಶ್ ಗೌಡ ಸಹೋದರ ಗುರುನಾಥ್ ಗೌಡ ತನ್ನ ಸಹಚರರಾದ ಲಕ್ಷ್ಮಣ್, ಹನುಮಂತ್ ಮತ್ತು ಸಂಜಯ್ ಮೂಲಕ ಕೊಲೆಗೆ ಸಂಚು ರೂಪಿಸಿದ್ದನು. ಈ ನಾಲ್ವರ ಮಾತನಾಡಿರುವ ಆಡಿಯೋ ಟೇಪ್ ಪೊಲೀಸರಿಗೆ ಲಭ್ಯವಾಗಿದ್ದರಿಂದ ದೊಡ್ಡ ಅನಾಹುತವನ್ನು ತಡೆದಿದ್ದರು. ಸದ್ಯ ಪ್ರಕರಣದ ಎಲ್ಲ ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.

      ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ವಿನಯ್ ಕುಲಕರ್ಣಿ ಮಾತ್ರ ಬಿಜೆಪಿ ನಾಯಕರು ರಾಜಕೀಯ ದ್ವೇಷದಿಂದ ನನ್ನ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತರುತ್ತಿದ್ದಾರೆ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಪ್ರಕರಣ ಸಿಬಿಐಗೆ ವರ್ಗಾವಣೆ ಆಗಿದ್ದರಿಂದ ವಿನಯ್ ಕುಲಕರ್ಣಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳು ಹೆಚ್ಚಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link