ಬೆಂಗಳೂರು
ಹಣದ ಚೀಲ ಹಿಡಿದುಕೊಂಡು ಎಲ್ಲಾ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ.ದುಡ್ಡಿನಿಂದ ಕೆ.ಆರ್.ಪೇಟೆ ಗೆದ್ದಂತೆ ಶಿರಾವನ್ನು ಬಿಜೆಪಿ ಗೆಲ್ಲಲು ಪ್ರತಿದಿನ ಭಾನುವಾರವಲ್ಲ ಎಂದು ಮಾಜಿಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯ ವಿಜಯೇಂದ್ರಗೆ ತಿರುಗೇಟು ನೀಡಿದ್ದಾರೆ.
ಕೆ.ಆರ್.ಪೇಟೆ ರೀತಿಯಲ್ಲಿ ಶಿರಾವನ್ನು ಗೆಲ್ಲುತ್ತೇವೆ ಎಂದು ಶಿರಾ ಉಪಚುನಾವಣೆಯ ಬಿಜೆಪಿ ಉಸ್ತುವಾರಿ ಹೊತ್ತಿರುವ ವಿಜಯೇಂದ್ರ ಮಾತಿಗೆ ತಿರುಗೇಟು ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರದಲ್ಲಿ ಎಲ್ಲರೂ ಗೆಲ್ಲಬೇಕೆಂದು ಕೆಲಸ ಮಾಡುತ್ತಿದ್ದಾರಾದರೂ ಗೆಲುವು ಯಾರದ್ದೆಂದು ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಶಿರಾ ಕ್ಷೇತ್ರದಲ್ಲಿ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಒಂದು ವರ್ಷದ ಬಿಜೆಪಿ ದುರಾಡಳಿತವನ್ನು ಜನತೆ ಗಮನಿಸುತ್ತಿದ್ದು, ಈ ಸರ್ಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದರು.
ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕಳುಹಿಸಿದವರೆ ಸಿದ್ದರಾಮಯ್ಯ, ಶಿವಕುಮಾರ್ ಎಂಬ ಡಿಸಿಎಂ ಅಶ್ವಥ್ ನಾರಾಯಣ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ಅಶ್ವಥ ನಾರಾಯಣ ಅವರಿಗೂ ನಿಖರ ಮಾಹಿತಿ ಇರಬೇಕು. ಮೈತ್ರಿ ಸರ್ಕಾರ ಉಳಿಸುತ್ತೇವೆಂದು ಯಾರು ಹೇಳಿಕೊಂಡು ಹೊರಟರು?ಒಳಗೇನು ನಡೆದಿತ್ತೆಂದು ಈಗ ಸತ್ಯ ಹೊರಗೆ ಬರುತ್ತಿದೆ. ಈ ಬಗ್ಗೆ ಜನರೇ ತೀರ್ಮಾನಿಸುತ್ತಾರೆ ಎಂದರು.
ನಾನು 14 ತಿಂಗಳಲ್ಲಿ ಸಿದ್ದರಾಮಯ್ಯನವರ 5 ವರ್ಷದ ಆಡಳಿತ ಕ್ಕಿಂತ ಉತ್ತಮವಾಗಿ ಕೆಲಸ ಮಾಡಿದ್ದೇನೆ. ನನಗೆ ಅಧಿಕಾರ ನಡೆಸಲು ಕೊಟ್ಟ ತೊಂದರೆ ನಡುವೇಯೇ ಅವರು ನೀಡಿದ ಎಲ್ಲಾ ಭಾಗ್ಯ ಮುಂದುವರೆಸಿದ್ದೆ.ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ 7 ಕೆ.ಜಿ ಅಕ್ಕಿ ಘೋಷಣೆ ಮಾಡಿ 500 ಕೋಟಿ ಹಣ ಇಟ್ಟಿರಲಿಲ್ಲ, ಅದರ ಹೊಣೆ ನಾನೇ ಹೊರಬೇಕಾಯಿತು.ಸಿದ್ದರಾಮಯ್ಯ ಅವರು ಜನರಿಗೆ ನೀಡಿದ ಭರವಸೆಗಳನ್ನೆಲ್ಲ ನಾನು ಈಡೇರಿಸಿ, ರೈತರ ಸಾಲಮನ್ನಾ ಮಾಡಿದೆ ಎಂದರು.
ತಾಜ್ ವೆಸ್ಟ್ ಎಂಡ್ ನಲ್ಲಿ ಕುಳಿತು ಹೆಚ್.ಡಿ.ಕುಮಾರಸ್ವಾಮಿ ರಾಜಕಾರಣ ಮಾಡಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಳಿನ್ ಕುಮಾರ್ ಕಟೀಲ್ ಅವರಿಗೆ ಮಾತನಾಡುವುದಕ್ಕೆ ಯಾವುದೇ ಘನತೆಯಿಲ್ಲ. ನಾನು ಸಾರ್ವಜನಿಕವಾಗಿ ಜನತೆಯ ಹತ್ತಿರ ಇದ್ದವನು, ರಾಯಚೂರು ಬೀದರ್, ಕಲ್ಬುರ್ಗಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ನಳಿನ್ ಕುಮಾರ್ ಕಟೀಲ್ ನಿಂದ ರಾಜಕೀಯ ಕಲಿಯಬೇಕಿಲ್ಲ. ನನ್ನಷ್ಟು ಜನತೆಗೆ ಸಿಗುವವರು ಯಾರಿದ್ದಾರೆ?ನನ್ನ ಬಳಿ ಅಧಿಕಾರ ಇಲ್ಲದಿದ್ದರೂ ಬಡವರು ದಿನನಿತ್ಯ ನನ್ನ ಮನೆಯ ಮುಂದೆ ಸಹಾಯಕ್ಕಾಗಿ ಬರುತ್ತಾರೆ. ನಳಿನ್ ಕುಮಾರ್ ಎಷ್ಟು ಜನ ಬಡವರನ್ನು ನೋಡಿದ್ದಾರೆ. ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ. ಜನರಿಗೆ ನನ್ನಷ್ಟು ಸುಲಭವಾಗಿ ಸಿಗುವ ರಾಜಕಾರಣಿ ಯಾರಾದರು ಇದ್ದರೆ ಹೇಳಿ ಬಿಡಲೆಂದು ಸವಾಲು ಹಾಕಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
