ಚಿತ್ರದುರ್ಗ
ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷರು ಇತ್ತೀಚೆಗೆ ವೈದ್ಯಕೀಯ ಕಾಲೇಜಿನ ಬಗ್ಗೆ ಹೇಳಿಕೆ ನೀಡಿ ಶಾಸಕರಿಗೆ ಎಚ್ಚರಿಕೆ ಎಂದು ಹೇಳಿಕೆ ನೀಡಿದ್ದಾರೆ. ಹೇಳಿಕೆ ಕೊಡುವಾಗ ಯಾರ್ಯಾರು ಕೆಲಸ ಮಾಡಿದ್ದಾರೆ ಇಲ್ಲ ಎನ್ನುವುದನ್ನು ತಿಳಿದುಕೊಂಡು ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು. ಹೇಳಿಕೆ ಕೊಟ್ಟ ತಕ್ಷಣ ಹೆದರುವುದಿಲ್ಲ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ನಗರದ ಭಾರತೀಯ ವೈದ್ಯಕೀಯ ಸಂಸ್ಥೆ ಆವರಣದಲ್ಲಿ ಶನಿವಾರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಸರ್ಕಾರಿ ವೈದ್ಯಕೀಯ ಕಾಲೇಜು ಜಾರಿಗಾಗಿ ಆಯೋಜಿಸಿದ್ದ ಮುಕ್ತಸಂವಾದಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಇದೇ ವಿಚಾರವಾಗಿ ಕೆಲವರು ನೀಡಿದ ಹೇಳಿಕೆಯ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು
ಶಾಸಕನಾಗಿ ನನಗೆ ಜವಾಬ್ದಾರಿ ಇದೆ. ಮತ ನೀಡಿದ ಮೇಲೆ ಪಕ್ಷ ಭೇದ ಮರೆತು ಕೆಲಸ ಮಾಡುತ್ತಿದ್ದೇನೆ. 45 ವರ್ಷದಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ. ವೈದ್ಯಕೀಯ ಕಾಲೇಜು ಆಗಲೇಬೇಕೆಂದು ಅನೇಕ ಸಾರಿ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿದ್ದೇನೆ. ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಹೋರಾಟ ಸಮಿತಿ ಸದಸ್ಯರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡಬೇಕು. ನನ್ನ ಪ್ರಯತ್ನ ನಾನು ಮಾಡಿದ್ದೇನೆ. ಇದಕ್ಕಾಗಿ ಕುಸ್ತಿ ಆಡಲು ಸಾಧ್ಯವಿಲ್ಲ. ಇನ್ನೊಬ್ಬರನ್ನು ಟೀಕೆ ಮಾಡುವ ಮೊದಲು ಯಾವ ಕೆಲಸ ಮಾಡಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶವಾಗಿ ಹೇಳಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗದೆ ಇರಲು ಕಾರಣ ವಿರೋಧ ಪಕ್ಷದಲ್ಲಿರುವ ನಾವಲ್ಲ ಮಂತ್ರಿಗಳು. ಕಳೆದ ಐದು ವರ್ಷ ಮಂತ್ರಿಯಾದವರು ಸಚಿವ ಸಂಪುಟದಲ್ಲಿ ಒಮ್ಮೆಯೂ ಧ್ವನಿ ಎತ್ತಿಲ್ಲ. ಇದರಿಂದ ಕಾಲೇಜು ಸ್ಥಾಪನೆ ವಿಳಂಬವಾಗುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ಹೇಳಿಕೆಗಳನ್ನು ನೀಡಬೇಕು. ತಾವು ಯಾವುದೇ ಹೋರಾಟ ಅಥವಾ ಇನ್ನಾವುದಕ್ಕೂ ಹೆದುರುವುದಿಲ್ಲ ಎಂದು ಶಾಸಕರು,2012 ರಲ್ಲಿ ವಿಧಾನಪರಿಷತ್ ಸದಸ್ಯನಾಗಿದ್ದಾಗಲೂ ಇದರ ಬಗ್ಗೆ ಧ್ವನಿ ಎತ್ತಿದ್ದೇನೆ. ಹಣ ಇಲ್ಲದಿದ್ದಾಗ ಆರೋಗ್ಯ ರಕ್ಷ ಸಮಿತಿ ಹಣವನ್ನು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ ಕಟ್ಟಲಾಗಿದೆ. ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದರು.
ಇದುವರಗೆ ಜಿಲ್ಲೆಯಲ್ಲಿ ಆಡಳಿತ ನಡೆಸಿದ ಜಾಫರ್‍ಷರೀಪ್, ನಿಜಲಿಂಗಪ್ಪ, ಕೆ.ಎಚ್.ರಂಗನಾಥ್ ಸೇರಿದಂತೆ ಅನೇಕ ನಾಯಕರು ದುರ್ಗದ ಅಭಿವೃದ್ದಿಗೆ ಏಕೆ ಶ್ರಮಿಸಲಿಲ್ಲ ಅವರೇನು ಮಾಡುತ್ತಿದ್ದರು. ಶಾಂತಿ ಸಾಗರದಿಂದ ದುರ್ಗಕ್ಕೆ ಕುಡಿಯುವ ನೀರು ತಂದಿದ್ದು ನಾನು. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಹೇಳಿಕೆ ನೀಡಿದರೆ ಅದರ ಹಿಂದೆ ರಾಜಕೀಯ ದುರುದ್ದೇಶ ಇರಬಾರದು ಎಂದು ಹೇಳಿದರು.
ಕಳೆದ ಐದು ವರ್ಷದ ಅವಧಿಯಲ್ಲಿ ಮಂತ್ರಿಯಾಗಿದ್ದ ದುರ್ಗದವರೇ ಆದವರು ಸಚಿವ ಸಂಪುಟದಲ್ಲಿ ಇದರ ಬಗ್ಗೆ ಒಮ್ಮೆಯಾದರೂ ಧ್ವನಿ ಎತ್ತಲಿಲ್ಲ. ಸಚಿವ ಸಂಪುಟದಲ್ಲಿ ಗಲಾಟೆ ಮಾಡಿದ ಮಂತ್ರಿಗಳ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭವಾಯಿತು. ಜಿಲ್ಲೆಯಲ್ಲಿ ಇನ್ನು ಆರಂಭವಾಗಿಲ್ಲ. ನಾನೊಬ್ಬ ಶಾಸಕ ನಾನೇದಾರೂ ಮಂತ್ರಿಯಾಗಿದ್ದೇನೆಯೆ? ಮಂತ್ರಿಯಾದವರು ಪ್ರಯತ್ನ ಮಾಡಬೇಕಾಗಿತ್ತು ಎಂದರು.
ಗಣಿಗಾರಿಕೆ ಹಣವನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಬಳಕೆ ಮಾಡುವಂತೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಸುಪ್ರೀಂಕೋರ್ಟ್ ಅನುಮತಿ ನೀಡಿದರೆ ಹಣದ ಸಮಸ್ಯೆಯಾಗುವುದಿಲ್ಲ. ಬಡವರಿಗೆ ಸಾಲ ನೀಡುವ ಗುರಿಯನ್ನು ಸಂಪೂರ್ಣ ಕಡಿಮೆ ಮಾಡಿರುವ ಸರ್ಕಾರ ಕಾಲೇಜಿಗೆ ಹಣ ಹೇಗೆ ಕೊಡಲಿದೆ. ನಾನೇನು ಲಾಟರಿ ಮೂಲಕ ಎಂಎಲ್‍ಎ ಆಗಿಲ್ಲ. ಜನರಿಂದ ಮತ ಪಡೆದು ಆಯ್ಕೆಯಾಗಿದ್ದೇನೆ ಎಂದರು.
ಜಿಲ್ಲಾ ಆಸ್ಪತ್ರೆಯ ಡಾ.ಪ್ರಕಾಶ್ ಮಾತನಾಡಿ, 1962 ರಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ಆರಂಭವಾಯಿತು. ಅನಂತರ 500 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಯಿತು. ಆದರೆ ಸಿಬ್ಬಂದಿ, ವೈದ್ಯರು 1962ರಲ್ಲಿ ಮಂಜೂರಾ ಗಿದ್ದು ಮತ್ತೆ ಹೆಚ್ಚಿಸಲಿಲ್ಲ. 1600 ಜನಸಂಖ್ಯೆಗೆ ಒಬ್ಬ ವೈದ್ಯರಿದ್ದಾರೆ. ಆರು ರೋಗಿಗಳಿಗೆ ಒಬ್ಬ ದಾದಿ ಇರಬೇಕು. ಈ ಅನುಪಾತದಲ್ಲಿ ಸಿಬ್ಬಂದಿ ಇಲ್ಲ. ನಿತ್ಯ ಸಾವಿರಾರು ಹೊರರೋಗಿಗಳು, 300ಕ್ಕೂ ಹೆಚ್ಚು ಒಳರೋಗಿಗಳು, ತುರ್ತು ಘಟಕದಲ್ಲಿ 150 ರಿಂದ 200 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಮೇಲೆ ಒತ್ತಡ ಇದೆ. ಇದು ಕಡಿಮೆಯಾಗಬೇಕಾದರೆ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಲೇಬೇಕು. ಆಗ ಮಾತ್ರ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಸಿಗಲಿದೆ ಎಂದು ಹೇಳಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ಷಪೀವುಲ್ಲಾ, ನಿವಾಸಿ ವೈದ್ಯಾಧಿಕಾರಿ ಡಾ.ಆನಂದಪ್ರಕಾಶ್, ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ವಕೀಲರ ಸಂಘದ ಕಾರ್ಯದರ್ಶಿ ಶಿವುಯಾದವ್, ದಮ್ಮ ಸಂಸ್ಥೆ ವಿಶ್ವಸಾಗರ್, ಡಾ.ದೇವರಾಜ್, ವಕೀಲ ಪ್ರತಾಪ್ ಜೋಗಿ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
