ಬೆಂಗಳೂರು
ಸರ್ಕಾರಿ ಶಾಲೆಗಳಲ್ಲಿಯೇ ಅತ್ಯುತ್ತಮವಾದ ಪಾಠ, ಪ್ರವಚನಗಳು, ನಡೆಯುತ್ತಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಆದರೆ ಮಕ್ಕಳು ಬೇರೆ ಭಾಷೆಯ ಅಂತರ ರಾಷ್ಟ್ರೀಯ ಶಾಲೆಗಳಲ್ಲಿ ಓದಿದರೆ ಮಾತ್ರ ಒಳ್ಳೆಯ ಹುದ್ದೆ, ಸ್ಥಾನ ಮಾನ ಪಡೆಯಬಹುದು ಎಂಬ ಪರಿಕಲ್ಪನೆ ಸಲ್ಲದು ಎಂದು ಮಾಜಿ ಡಿಸಿಪಿ ಅಣ್ಣಾಮಲೈ ಅಭಿಪ್ರಾಯಪಟ್ಟರು.
ಗುರುಗಳು, ನೀಡುವ ಪಾಠ, ಪ್ರವಚನಗಳನ್ನು ಶ್ರದ್ಧೆಯಿಂದ ಆಲಿಸಿ, ಆ ವಿಷಯಗಳಲ್ಲಿ ಪರಿಣತಿ ಹೊಂದಿದ್ದರೆ ತಾನಾಗಿಯೇ ಒಳ್ಳೆಯ ಸ್ಥಾನ ದೊರೆಕುತ್ತದೆ. ಇದಕ್ಕೆ ಹಲವಾರು ವಿದ್ವಾಂಸರ ವಿಜ್ಞಾನಿಗಳ ಸಮಾಜ ಸುಧಾರಕರ ಸಾಧನೆಯ ಉಲ್ಲೇಖವಿದೆ.ಗುರು ಹಿರಿಯರಲ್ಲಿ ಗೌರವ ಭಾವನೆ, ಬೆಳೆಸಿಕೊಂಡು ತನಗೆ ವಿದ್ಯೆ ನೀಡಿದ ಶಾಲೆಗಳ ಬಗ್ಗೆ ಗೌರವ ವಿಟ್ಟುಕೊಂಡು ಅಧ್ಯಯನ ನಡೆಸಿ ಯಾವುದೇ ಕೆಲಸದಲ್ಲಿ ಕೀಳರಿಮೆ ತಾಳದೇ ಕಷ್ಟಪಟ್ಟು ಓದಿದರೆ ಇದು ನಿಮ್ಮ ಭವಿಷ್ಯಕ್ಕೆ ಉತ್ತಮ ಸೋಪಾನವಾಗುತ್ತದೆ ಎಂದು ಹೇಳಿದರು.
ಕಬ್ಬನ್‌ಪಾರ್ಕ್‌ನ ಬಾಲಭವನದಲ್ಲಿ ಶನಿವಾರ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಶಿಕ್ಷಣ ಹಬ್ಬ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಅಚಲ ಆತ್ಮ ವಿಶ್ವಾಸ ಬೆಳೆಸಿಕೊಂಡು ಅಧ್ಯಯನದಲ್ಲಿ ತೊಡಗಿದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಶ್ರದ್ಧೆ, ನಿಷ್ಠೆ ಮುಖ್ಯ
ಹಿಂದೆ ಸರ್ಕಾರಿ ಶಾಲೆಗಳನ್ನು ಹೊರತುಪಡಿಸಿ ಯಾವುದೇ ಅಂತರ ರಾಷ್ಟ್ರೀಯ ಶಾಲೆ, ಕಾನ್ವೆಂಟ್, ಪಬ್ಲಿಕ್ ಶಾಲೆಗಳಾಗಲಿ ಇರಲಿಲ್ಲ. ನಾನು ಸೇರಿದಂತೆ ಅನೇಕ ಮಂದಿ ಸರ್ಕಾರಿ ಶಾಲೆಗಳಲ್ಲಿಯೇ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದೇವೆ. ಹಾಗಾಗಿ ಕೀಳರಿಮೆ ತೊರೆದು ಆತ್ಮ ವಿಶ್ವಾಸದಿಂದ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಅವರು ಮಾತನಾಡಿ ಜೀವನದಲ್ಲಿ ಸಾಧನೆಗೆ ಶಿಕ್ಷಣ, ಬುದ್ಧಿ, ಅತ್ಯವಶ್ಯಕ ಇದಕ್ಕೆ ಶಾಲೆಗಳೇ ದೇವಾಲಯಗಳು, ನಮ್ಮನ್ನು ಕಷ್ಟಕಾಲದಲ್ಲಿ ಪಾರು ಮಾಡುವುದೇ ವಿದ್ಯೆ, ವೈಜ್ಞಾನಿಕ ಆಲೋಚನೆಗಳನ್ನು ಬೆಳೆಸಿಕೊಂಡು ಶ್ರದ್ಧೆ, ನಿಷ್ಠೆಯಿಂದ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡರೆ ಸಾಧನೆ, ಸಮಾಜದಲ್ಲಿ ಉತ್ತಮ ಸ್ಥಾನ ಮಾನ ತಾನಾಗಿಯೇ ಲಭ್ಯವಾಗಲಿವೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಸಾಧನೆಗೆ ಅಡ್ಡಿ
ಯಾವುದೇ ಸಾಧನೆಗೆ ಶೇ. 90 ರಷ್ಟು ಸ್ಫೂರ್ತಿ ಇದ್ದರೆ ಕೇವಲ 10 ರಷ್ಟು ಶ್ರಮ ಹಾಕುವುದು ಅತ್ಯಂತ ಅವಶ್ಯಕ. ಶಿಕ್ಷಕರು ಹೇಳುವ ಪಾಠ ಬೋದನೆಯನ್ನು ಸಂಯಮ ಶೀಲತೆಯಿಂದ ಆಲಿಸಿಕೊಂಡು ಅದನ್ನು ಅಧ್ಯಯನದಲ್ಲಿ ರೂಢಿಸಿಕೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಕೇವಲ ತಂತ್ರಜ್ಞಾನದ ಆವಿಷ್ಕಾರದಿಂದ ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಈ ದೇಶದ ಇತಿಹಾಸ, ವಿಜ್ಞಾನ, ಸಂಸ್ಕೃತಿಯಲ್ಲಿ ಸಾಧನೆಗೈದಿರುವ ಸಾಧಕರನ್ನು ನೆನೆಪಿಸಿಕೊಂಡು ಮುನ್ನಡೆಯಬೇಕು. ಕೆಟ್ಟ ಆಲೋಚನೆಗಳು, ಕಾಲಹರಣ, ನಿಮ್ಮ ಸಾಧನೆಗೆ ಅಡ್ಡಿಯಾಗಲಿದೆ ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆ ತಂಡದವರು ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳ ಜೀವನವನ್ನು ರೂಪಿಸಿಲು ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾದದ್ದು, ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳೇ ಹೆಚ್ಚಾಗಿರುವುದರಿಂದ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು, ಹಿರಿಯ ವಿಜ್ಞಾನಿ ಶ್ರೀನಿವಾಸನ್, ಫುಟ್ಬಾಲ್ ಕ್ರೀಡಾಪಟು ಸಂಪತ್ ಕುಮಾರ್, ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
