ದಾವಣಗೆರೆ:
ಕಾವ್ಯ ಸೃಷ್ಟಿ ಅಷ್ಟು ಸುಲಭದ ಕೆಲಸವಲ್ಲ. ಪ್ರತಿಭೆಯ ಜೊತೆಗೆ ಕಠಿಣ ಪರಿಶ್ರಮ ಹಾಕಿದಾಗ ಮಾತ್ರ ಅತ್ಯುತ್ತಮ ಕಾವ್ಯ ಸೃಷ್ಟಿಸಲು ಸಾಧ್ಯ ಎಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಪ್ರತಿಪಾದಿಸಿದರು.ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಡಿವೈಎಸ್‍ಪಿ ಡಾ.ದೇವರಾಜ್ ಅವರ ‘ಅಮೃತದ ಒರತೆ’ ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾವ್ಯ ಎನ್ನುವುದು ಪ್ರಸವ ವೇದನೆಯಿಂದ ಹುಟ್ಟುವಂಥದ್ದಾಗಿದೆ ಎಂದರು.
ಕಾವ್ಯ ಕಟ್ಟುವ ಮುನ್ನ ಸತತ ಓದಿಗೆ ಪರಿಶ್ರಮ ಹಾಕಬೇಕು. ಸಾಹಿತ್ಯವನ್ನು ತಪ್ಪದೇ ಅಭ್ಯಾಸ ಮಾಡುವ ಮೂಲಕ ಭಾಷೆಯನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಕಾವ್ಯವನ್ನು ಜನರಿಗೆ ಸಮ್ಮೂಹನ ಗೊಳಿಸಬೇಕು. ಆಗಮಾತ್ರ ಆತ ನಿಜವಾದ ಕವಿಯಾಗಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಅಭ್ಯಾಸ ಮಾಡಿಕೊಂಡು, ಅದನ್ನು ತಮ್ಮದನ್ನಾಗಿಸಿಕೊಂಡು ಒಬ್ಬ ಪೊಲೀಸ್ ಅಧಿಕಾರಿ ಕವನ ಸಂಕಲನ ಪ್ರಕಟಿಸುತ್ತಾರೆ ಎನ್ನುವುದೇ ಒಂದು ವಿಸ್ಮಯದ ಭಾವವಾಗಿದೆ. ಏಕೆಂದರೆ ಕಾವ್ಯ ಎನ್ನುವುದು ಹೃದಯದಿಂದ ಹುಟ್ಟುವಂಥದ್ದಾಗಿದೆ. ಆದರೆ, ಕೃತಿಯ ಕತೃ ಆಗಿರುವ ದೇವರಾಜ್ ಪೊಲೀಸ್ ಅಧಿಕಾರಿಯಾಗಿದ್ದು, ಅವರು ಸೇವೆಯಲ್ಲಿ ಹೃದಯ ಸಂಪನ್ನರಾದರೆ, ಸಮಾಜ ಸುಧಾರಿಸುವುದು ಕಷ್ಟಸಾಧ್ಯವಾಗಲಿದೆ. ಹೀಗಾಗಿ ದೇವರಾಜ್ ಕಠಿಣ ಹೃದಯಿಯಾಗುವುದು ಅನಿವಾರ್ಯ. ಇಲ್ಲದಿದ್ದರೆ, ಸಮಾಜವನ್ನು ನಿಯಂತ್ರಿಸುವುದು ಕಷ್ಟವಾಗಲಿದೆ ಎಂದು ಹೇಳಿದರು.
ಶಾಸ್ತ್ರ ಪ್ರಜ್ಞೆಯಿಂದ ಬರುವಂಥಹದ್ದಾಗಿದ್ದರೆ, ಕಾವ್ಯವು ಹೃದಯ ಪರಿವರ್ತನೆ ಮಾಡುತ್ತದೆ ಎಂದ ಅವರು, ಡಿವೈಎಸ್‍ಪಿ ದೇವರಾಜ್ ಅವರು ತಮ್ಮ ಕವನ ಸಂಕಲನದಲ್ಲಿ ಹೃದಯವನ್ನು ಕಸಿಮಾಡಿದಂಥಹ, ಸಮಾಜವನ್ನು ನೋಡಿ ಅದಕ್ಕೆ ಹೊಸ ಆಕಾರವನ್ನು ಕೊಟ್ಟಂಥಹ ಕವನಗಳನ್ನು ದಾಖಲಿಸಿದ್ದಾರೆ. ಇಲ್ಲಿರುವ ಕವನಗಳಿಗೆ ವೈವಿಧ್ಯತೆ ಇದೆ. ಬಹುಮಖತೆ ಇದೆ. ಆದರೆ, ಭಾಷೆ ಇನ್ನೂ ಹೆಚ್ಚು ಕಸುವು ಪಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಕರಾವಳಿ ಕಾವಲು ಪಡೆ ಎಸ್ಪಿ ಆರ್.ಚೇತನ್, ದೇವರಾಜ್ ನಾನು ಕಂಡಂತೆ ಬಹುಮುಖಿ ಪ್ರತಿಭೆ. ಎಲ್ಲ ರಂಗಗಳಲ್ಲೂ ಆಸಕ್ತಿ ಇರುವ ವ್ಯಕ್ತಿಯಾಗಿದ್ದಾರೆ. ತಾಯಿ, ಪ್ರೀತಿ, ಪ್ರೇಮ, ಪ್ರಕೃತಿ, ದೇಶಪ್ರೇಮ ಹೀಗೆ ನಿತ್ಯ ಕಾಣುವ ಎಲ್ಲ ವಸ್ತುಗಳನ್ನು ಕವಿತೆಗಳಲ್ಲಿ ಪ್ರತಿಬಿಂಬಿಸಿದ್ದಾರೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಪಶು ವೈದ್ಯಕೀಯ ಕ್ಷೇತ್ರದಲ್ಲಿ ಪಿಎಚ್‍ಡಿ ಮಾಡಿರುವ ಡಾ.ದೇವರಾಜ್ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮತ್ತಷ್ಟು ಮಾಡಬೇಕು. ಇಲಾಖೆಯಲ್ಲಿ ಇಂಥಹ ಬಹಳ ಪ್ರತಿಭೆಗಳು ಹಲವಾರು ಮಂದಿ ಇದ್ದಾರೆ. ಅಂಥವರನ್ನು ಬೆಳಕಿಗೆ ತರುವ ಕೆಲಸವಾಗಬೇಕಾದ ಅವಶ್ಯಕತೆ ಇದೆ ಎಂದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಮಾತನಾಡಿ, ಡಿವೈಎಸ್‍ಪಿ ದೇವರಾಜ್ ಅವರಲ್ಲಿ ನಿಜಕ್ಕೂ ಕವಿ ಮನಸ್ಸು ಇದೆ. ಕವಿಯ ಪಯಣ ಆರಂಭ ವಾಗುವುದೇ ಪ್ರೇಮ ಕವಿತೆಗಳ ಮೂಲಕ. ನಂತರ ‘ದಾಂಪತ್ಯ” ಕವಿತೆ, ತದ ನಂತರ ‘ಪಥ್ಯ’ ಕವಿತೆ ಹೀಗೆ ಒಬ್ಬ ಕವಿಯ ಕಾವ್ಯ ಪಯಣ ಮುಂದುವರಿಯುತ್ತದೆ ಎಂದು ವಿಶ್ಲೇಷಿಸಿದರು.
ಪೊಲೀಸ್ ಭಾಷೆಯ ಹೊರತಾದ ಒಂದು ಮನುಷ್ಯತ್ವದ ಭಾಷೆಯನ್ನು ರೂಢಿಸಿಕೊಂಡವರು ದೇವರಾಜ್ ಆಗಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಕವಿತ್ವ ಬಂದರೆ ಅವರ ಲಾಠಿಗಳು ಮೌನವಾಗುತ್ತವೆ. ಅವರ ಬಂದೂಕಿನ ತುದಿಯಲ್ಲಿ ಗುಬ್ಬಿ ಗೂಡು ಕಟ್ಟುತ್ತವೆ ಎಂದು ಬಣ್ಣಿಸಿದರು.ಕವಿ ಆನಂದ ಋಗ್ವೇದಿ ಪುಸ್ತಕ ಕುರಿತು ಮಾತನಾಡಿದರು.ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಕೃತಿಯ ಕತೃ ಡಾ.ದೇವರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್, ಭದ್ರಾ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ