ಹಕ್ಕುಗಳ ಜೊತೆಗೆ ಕರ್ತವ್ಯದ ಕಾಳಜಿಯೂ ಇರಲಿ

ತುಮಕೂರು

     ಮಾನವ ಹಕ್ಕುಗಳ ಉಲ್ಲಂಘನೆ ಆಗಬಾರದು ಹಾಗೇ, ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳ ಬಗ್ಗೆಯೂ ಗಮನ ಹರಿಸಬೇಕು. ದೇಶ, ಸಮಾಜಕ್ಕಾಗಿ ನಾವು ಏನು ಕೊಡುಗೆ ನೀಡುತ್ತಿದ್ದೇವೆ ಎಂಬುದರ ಅರಿವೂ ಇರಬೇಕು ಎಂದು ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿರುವ ರೂಪಕ್ ಕುಮಾರ್ ದತ್ತ ಹೇಳಿದರು.

      ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ, ತುಮಕೂರು ವಿವಿ ರಾಜ್ಯ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ವಿವಿಯ ಡಾ|| ಪಿ. ಸದಾನಂದಯ್ಯ ಸಭಾಂಗಣದಲ್ಲಿ ಮಾನವ ಹಕ್ಕುಗಳ ಅರಿವು, ರಕ್ಷಣೆ, ನೆರವು, ಸಂರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

      ಸ್ವಂತಕ್ಕಾಗಿ ಬದುಕುವವರು, ತಮ್ಮ ಬಳಗಕ್ಕಾಗಿ ಬಾಳುವವರು ಹಾಗೂ ಸಮಾಜಕ್ಕಾಗಿ ಕೆಲಸ ಮಾಡುವವರು ಎಂಬ ವರ್ಗಗಳಿವೆ. ಸಮಾಜದ ಹಿತಕ್ಕಾಗಿ ಕಾಳಜಿವಹಿಸುವವರು ಹೆಚ್ಚಾಗಬೇಕು. ಆಗ ದೇಶ, ಸಮಾಜ ಸರಿದಿಕ್ಕಿನಲ್ಲಿ ಸಾಗುತ್ತದೆ, ವಿಶೇಷವಾಗಿ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ತಾವು ಸಮಾಜಕ್ಕಾಗಿ, ಸಾರ್ವಜನಿಕರಿಗಾಗಿ ಕೆಲಸ ಮಾಡಬೇಕು ಎಂಬ ಮನೋಭಾವ ಬೇಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

     ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕು, ಸ್ವಾತಂತ್ರದ ಹಕ್ಕು, ಸಮಾನತೆಯ ಹಕ್ಕು, ಘನತೆಯ ಹಕ್ಕು ಇರುತ್ತದೆ, ಅದರ ಉಲ್ಲಂಘನೆ ಆಗಬಾರದು, ಹಕ್ಕುಚ್ಯುತಿ ತಡೆಗೆ ಕಾನೂನಿನಲ್ಲಿ ಅವಕಾಶವಿದೆ. ಅಂತಹ ಹಕ್ಕು ಉಲ್ಲಂಘನೆಯಾದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಬಹುದು. ಬಿಳಿ ಹಾಳೆಯಲ್ಲಿ ಸಮಸ್ಯೆ ಬರೆದು, ತಮ್ಮ ಸಹಿ, ಹೆಸರು, ವಿಳಾಸ ಬರೆದು ಕಳಿಸಿದರೂ ಸಾಕು ಆಯೋಗ ಅದನ್ನು ಪರಿಶೀಲನೆಗೆ ತೆಗೆದುಕೊಳ್ಳುತ್ತದೆ. ಇಂತಹ ದೂರುಗಳ ವಿಲೇವಾರಿ ವಿಳಂಬವಾಗುತ್ತಿದೆ, ಇನ್ನುಮುಂದೆ ಆರು ತಿಂಗಳೊಳಗೆ ಪ್ರತಿ ದೂರನ್ನು ವಿಲೇವಾರಿ ಮಾಡುವ ಪ್ರಯತ್ನ ನಡೆದಿದೆ ಎಂದು ರೂಪಕ್ ಕುಮಾರ್ ದತ್ತ ಹೇಳಿದರು.

    ಬೇರೆ ಆಯೋಗ, ಸಂಸ್ಥೆಗಳಿಗೆ ನೀಡಿದ ದೂರಿನ ಪ್ರತಿ, ಜಮೀನು ವಿವಾದ, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ದೂರನ್ನು ಪರಿಗಣನೆಗೆ ತೆಗೆದುಕೊಳ್ಳಲು ಆಯೋಗದಲ್ಲಿ ಅವಕಾಶವಿಲ್ಲ ಎಂದರು.

     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಕಾರ್ಯಕ್ರಮ ಉದ್ಘಾಟಿಸಿ, ಎಲ್ಲರೂ ಸಮಾನವಾಗಿ ಬಾಳಲು ನಮ್ಮ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ, ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಅದಕ್ಕೆ ತಕ್ಕ ಶಿಕ್ಷೆ ನೀಡಲು, ಪರಿಹಾರ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಪ್ರತಿಯೊಬ್ಬರೂ ಕಾನೂನಿನ ಜ್ಞಾನ ಬೆಳಸಿಕೊಳ್ಳಬೇಕು, ಈಗಿನ ಯುವ ಜನ ಕಾನೂನು ಪಾಲನೆಯಲ್ಲಿ ಹಿಂಜರಿಯುತ್ತಾರೆ, ಕಾನೂನು ತಿಳಿದರೆ, ತಪ್ಪು ಮಾಡುವುದು ಕಡಿಮೆಯಾಗುತ್ತದೆ ಎಂದು ತಿಳಿಸಿದರು.

       ಒಳ್ಳೆಯ ಚಿಂತನೆಗಳನ್ನು ಇಟ್ಟುಕೊಂಡು, ಬೇರೆಯವರ ಹಕ್ಕುಗಳಿಗೆ ಚ್ಯುತಿಯಾಗದಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಮೂಲ ಹಕ್ಕುಗಳ ಬಗ್ಗೆ ತಿಳುವಳಿಕೆ ಹೊಂದಬೇಕು. ಉಲ್ಲಂಘನೆಯಾದಾಗ ಕಾನೂನಿನ ನೆರವು ಪಡೆಯಬೇಕು ಎಂದು ಸಲಹೆ ಮಾಡಿದರು.

        ತುಮಕೂರು ವಿವಿ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡರು ಮಾತನಾಡಿ, ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳು. ಹಕ್ಕು ಕೇಳುವವರಿಗೆ ತಮ್ಮ ಕರ್ತವ್ಯದ ಬಗ್ಗೆಯೂ ಅರಿವಿರಬೇಕು. ಈ ದೇಶಕ್ಕೆ ತಮ್ಮ ಕೊಡುಗೆ ಏನು ಎಂದು ಚಿಂತನೆ ನಡೆಸಿ ಮುನ್ನಡೆದಾಗ ದೇಶದ ಭವಿಷ್ಯ ಉಜ್ವಲವಾಗುತ್ತದೆ, ಸುಖಿ ಸಮಾಜ ನಿರ್ಮಾಣವಾಗುತ್ತದೆ ಎಂದರು.ಮುಂದೆ ದೇಶ ಕಟ್ಟುವ ಕಟ್ಟಾಳುಗಳಾದ ಯುವ ಜನರು ಈ ಬಗ್ಗೆ ಹೆಚ್ಚು ಚಿಂತನೆ ರೂಢಿಸಿಕೊಳ್ಳಬೇಕು, ತಮ್ಮ ಕರ್ತವ್ಯ ಪಾಲನೆ ಬಗ್ಗೆಯೂ ಒಲವು ಹೊಂದಬೇಕು ಎಂದು ಹೇಳಿದರು.

      ವಿವಿ ಕುಲಸಚಿವ ಪ್ರೊ. ಕೆ. ಎನ್. ಗಂಗಾ ನಾಯ್್ಕ್ಟುಡಿಷನಲ್ ಎಸ್ಪಿ ಉದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜ್, ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ದಲಿಂಗೇಗೌಡ, ಐಕ್ಯೂಎಸಿ ನಿರ್ದೇಶಕ ಡಾ. ಪುರುಷೋತ್ತಮ ಕೆ. ಟಿ, ಡಾ. ಬಸವರಾಜು ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap