ಹುಳಿಯಾರು
ಹಸಿದ ಹೊಟ್ಟೆಗೆ ನೆರವಾಗುವ ಮಾನವೀಯ ಗುಣ ಪ್ರದರ್ಶಿಸಿ ಎಂದು ಹುಳಿಯಾರು ಹೋಬಳಿ ಕಂದಾಯ ತನಿಖಾಧಿಕಾರಿ ಮಂಜುನಾಥ್ ಅವರು ಕರೆ ನೀಡಿದರು.ಹುಳಿಯಾರು ಪಟ್ಟಣದಲ್ಲಿ ಕಂದಾಯ ಇಲಾಖೆಯಿಂದ ಏರ್ಪಡಿಸಿದ್ದ ಬಡವರಿಗಾಗಿ ಆಹಾರ ಸಾಮಗ್ರಿಗಳ ಸಂಗ್ರಹ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿಯಲ್ಲಿದೆ. ಇದಕ್ಕಾಗಿ ತಾಲ್ಲೂಕು ಆಡಳಿತ ಕಠಿಣ ಕ್ರಮ ಜಾರಿ ಮಾಡಿದೆ. ಇದರ ಪರಿಣಾಮದಿಂದ ಅನೇಕ ಬಡವರು, ಅಸಹಾಯಕರು, ನಿರ್ಗತಿಕರು, ಭಿಕ್ಷುಕರು ನಿತ್ಯ ಹೊಟ್ಟೆ ತುಂಬಿಸಿಕೊಳ್ಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇವರ ನೆರವಿಗೆ ನಾಗರಿಕರು ಸ್ಪಂದಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಆಹಾರ ತಯಾರಿಸಲು ಬೇಕಾದ ವಸ್ತುಗಳ ಅವಶ್ಯಕತೆ ತೀವ್ರ ಇದೆ. ಬಡವರ ನೆರವಿಗೆ ದೇಣಿಗೆ ನೀಡಲು ಜನರು ಸ್ವ ಪ್ರೇರಣೆಯಿಂದ ಮುಂದೆ ಬಂದು ತಹಶೀಲ್ದಾರ ಕಚೇರಿ ಅಥವಾ ನಾಡಕಛೇರಿಯಲ್ಲಿ ಸಲ್ಲಿಸಿದರೆ ಸಂಕಷ್ಟಕ್ಕೆ ಸ್ಪಂದಿಸಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗುವಿರಿ. ನೀವು ಕೊಡುವ ಆಹಾರ ಸಾಮಗ್ರಿಗಳನ್ನು ತಾಲೂಕಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ತಾಲೂಕು ಆಡಳಿತವೇ ಖುದ್ದು ಹೋಗಿ ತಲುಪಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀನಿವಾಸ್, ಲಕ್ಷ್ಮೀಪತಿ, ಈಶ್ವರ್, ಚಂದ್ರು, ಮಂಜುನಾಥ್ ಸೇರಿದಂತೆ ಹೋಬಳಿಯ ಎಲ್ಲಾ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ