ಸರ್ಕಾರ ಪತನಕ್ಕೆ ನೀವು ಕಾರಣ ಎಂಬ ಭಾವನೆ ಬರಬಾರದು : ಯಡ್ಡಿಗೆ ಹೈಕಮಾಂಡ್ ಕಿವಿ ಮಾತು

ಬೆಂಗಳೂರು 

       ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಹಾದಿ ರಂಪ ಮಾಡಬೇಡಿ ಎಂದು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದು, ಇದೇ ಕಾರಣಕ್ಕಾಗಿ ಬಜೆಟ್ ಅಧಿವೇಶನದಲ್ಲೇ ಸರ್ಕಾರವನ್ನು ಪತನಗೊಳಿಸುತ್ತೇವೆ ಎಂದು ಯಡಿಯೂರಪ್ಪ ನೇತೃತ್ವದ ಟೀಮು ಪಕ್ಷದ ಹೈಕಮಾಂಡ್ ವರಿಷ್ಟರಿಗೆ ವಿವರಿಸಿದೆ.

         ಸರ್ಕಾರ ಉರುಳಿಸಲು ನೀವು ಕಾರಣ ಎಂಬ ಬಾವನೆ ರಾಜ್ಯದಲ್ಲಿ ಬರಬಾರದು ಎಂದು ಹೈಕಮಾಂಡ್ ಹೇಳಿದರೆ,ಭಿನ್ನಾಭಿಪ್ರಾಯ ಇರುವುದು ಅವರಲ್ಲೇ.ಹೀಗಾಗಿ ಸರ್ಕಾರ ಬಿದ್ದರೆ ಅವರೇ ಹೊಣೆ.ನಾವದಕ್ಕೆ ಯಾವ ಕಾರಣದಿಂದಲೂ ಜವಾಬ್ದಾರರಲ್ಲ ಎಂದು ಇದೇ ತಂಡ ವರಿಷ್ಟರಿಗೆ ವಿವರಿಸಿದೆ.

        ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಶಾಸಕರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುತ್ತಿದ್ದು ಈ ಹಿನ್ನೆಲೆಯಲ್ಲಿ ನಾವು ಸದನದಲ್ಲೇ ಸರ್ಕಾರ ಬೀಳಲು ಪೂರಕವಾದ ಕಾರ್ಯತಂತ್ರ ರಚಿಸಿದ್ದೇವೆ ಎಂಬುದು ಯಡಿಯೂರಪ್ಪ ಆಪ್ತರ ಮಾತು.

        ಹಾಗಂತಲೇ ಸದನದ ಮೊಗಸಾಲೆಯಲ್ಲಿ ತಮ್ಮ ತಮ್ಮಲ್ಲೇ ಚರ್ಚೆ ನಡೆಸುತ್ತಿದ್ದ ಬಿಜೆಪಿಯ ಹಿರಿಯ ನಾಯಕರು,ಶಾಸಕರು ಬಜೆಟ್ ಪಾಸು ಮಾಡಲು ಸರ್ಕಾರ ಮುಂದಾದಾಗ ಅದನ್ನು ಮತಕ್ಕೆ ಹಾಕುವಂತೆ ಸಭಾಧ್ಯಕ್ಷರನ್ನು ಒತ್ತಾಯಿಸುತ್ತೇವೆ

      ಹೀಗೆ ಹಣಕಾಸು ಮಸೂದೆಯನ್ನು ಮತಕ್ಕೆ ಹಾಕುವುದು ಕಡ್ಡಾಯವಲ್ಲವಾದರೂ ಪ್ರತಿಪಕ್ಷಗಳು ಮನವಿ ಸಲ್ಲಿಸಿದರೆ ಅದನ್ನು ಮತಕ್ಕೆ ಹಾಕಲೇಬೇಕು.ಹಾಗೆ ಮತಕ್ಕೆ ಹಾಕಿದಾಗ ಪ್ರತಿ ಸಾಲಿನಲ್ಲಿರುವ ಶಾಸಕರ ಪೈಕಿ ಎಷ್ಟು ಜನ ಹಣಕಾಸು ಬಿಲ್‍ನ ವಿರುದ್ಧವಿದ್ದಾರೆ?ಪರವಿದ್ದಾರೆ?ಎಂಬುದು ಸಾಬೀತಾಗುತ್ತದೆ.

      ಅಷ್ಟರಲ್ಲಿ ನೂರಾ ಹದಿನೆಂಟರಷ್ಟಿರುವ ಆಡಳಿತ ಪಕ್ಷದ ಬಲವನ್ನು ನೂರಾ ಐದಕ್ಕೆ ಇಳಿಸುತ್ತೇವೆ.ಇಬ್ಬರು ಪಕ್ಷೇತರ ಶಾಸಕರ ಬೆಂಬಲ ಪಡೆದು ನಮ್ಮ ಬಲ ನೂರಾ ಆರರಷ್ಟಿದೆ ಎಂದು ಸಾಬೀತು ಪಡಿಸುತ್ತೇವೆ.ಹೀಗೆ ಹಣಕಾಸು ಮಸೂದೆ ಅಂಗೀಕಾರವಾಗದೆ ಹೋದರೆ ಸಹಜವಾಗಿಯೇ ಸಾಂವಿಧಾನಿಕ ಬಿಕ್ಕಟ್ಟು ಉದ್ಭವವಾಗಲಿದ್ದು ಆ ಮೂಲಕ ಮುಖ್ಯಮಂತ್ರಿ ಹುದ್ದೆಗೆ ಕುಮಾರಸ್ವಾಮಿ ಅವರು ತಕ್ಷಣವೇ ರಾಜೀನಾಮೆ ಕೊಡುವ ಪರಿಸ್ಥಿತಿ ಉದ್ಭವವಾಗಲಿದೆ.

       ಅವರು ರಾಜೀನಾಮೆ ನೀಡಿದ ಕೂಡಲೇ ರಾಜ್ಯಪಾಲರು ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲಿದ್ದು ತದ ನಂತರ ಸಮಯ ನೋಡಿ ಅತ್ಯಂತ ದೊಡ್ಡ ಪಕ್ಷವಾದ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಬೇಕಾಗುತ್ತದೆ.ತದ ನಂತರ ಸಿಗುವ ಸಮಯಾವಕಾಶದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಮತ್ತಷ್ಟು ಅತೃಪ್ತ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದು ಆ ಮೂಲಕ ಸದನದಲ್ಲಿ ಬಿಜೆಪಿ ಬಲ ನೂರಾ ಆರರಷ್ಟಿದ್ದರೆ,ಕಾಂಗ್ರೆಸ್ ಮತ್ತು ಜೆಡಿಎಸ್‍ಗಳೆರಡೂ ಕೂಡಿದರೆ ನೂರಕ್ಕಿಂತ ಕಡಿಮೆ ಸದಸ್ಯ ಬಲ ಇರುತ್ತದೆ ಎಂದು ಯಡಿಯೂರಪ್ಪ ಗ್ಯಾಂಗು ವಿಶ್ವಾಸ ವ್ಯಕ್ತಪಡಿಸುತ್ತಿದೆ.

        ಯಡಿಯೂರಪ್ಪ ಬೆಂಬಲಿಗರಲ್ಲಿ ಇಂತಹ ವಿಶ್ವಾಸವಿದ್ದರೆ,ಸಂಸತ್ ಚುನಾವಣೆಯವರೆಗೆ ಈ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂಬ ವಿಶ್ವಾಸ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್‍ನಲ್ಲಿದೆ.ಸಂಸತ್ ಚುನಾವಣೆಯ ನಂತರ ಏನೇ ರಾಜಕೀಯ ಬಿಕ್ಕಟ್ಟುಗಳು ಸಂಭವಿಸಬಹುದು.ಆದರೆ ಸಧ್ಯದ ಪರಿಸ್ಥಿತಿಯಲ್ಲಂತೂ ಏನೂ ಆಗುವುದಿಲ್ಲ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರ ವಿಶ್ವಾಸ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link