ನೆರೆ ಪರಿಹಾರ ಕೆಂದ್ರದ ನಿರ್ಲಕ್ಷ್ಯ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ..!

ಬೆಂಗಳೂರು

    ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

    ಆನಂದ್‍ರಾವ್ ವೃತ್ತದ ಕಾಂಗ್ರೆಸ್ ಭವನದ ಆವರಣದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಪ್ರವಾಹ ಪೀಡಿತರ ನೆರವಿಗೆ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಧಾವಿಸುವಂತೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹಾಕಲು ಪ್ರತಿಭಟನಾ ಮೆರವಣಿಗೆ ಹೊರಟಿದ್ದು ಅವರನ್ನು ಮಾರ್ಗ ಮಧ್ಯೆ ಪೆÇಲೀಸರು ತಡೆದರು.

     ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಉತ್ತರ ಕರ್ನಾಟಕದಲ್ಲಿ ನೆರೆಯಿಂದಾಗಿ ಕೋಟ್ಯಾಂತರ ರೂ. ಆಸ್ತಿ ಪಾಸ್ತಿ ನಷ್ಟವಾಗಿದೆ. ಲಕ್ಷಾಂತರ ಜನರು ಮನೆ, ಮಠ ಕಳೆದುಕೊಂಡು ನಿರ್ವಸತಿಗಾರಾಗಿದ್ದರೂ ರಾಜ್ಯ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.

     ಪ್ರವಾಹದಿಂದ ಸಾಕಷ್ಟು ಶಾಲಾ,ಕಟ್ಟಡಗಳು ಕುಸಿದು ಬಿದ್ದು, ಆ ಭಾಗದ ಮಕ್ಕಳು ಶೈಕ್ಷಣಿಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೂ ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ನೆರೆ ಸಂತ್ರಸ್ಥರ ಸಮಸ್ಯೆ ಪರಿಹಾರಕ್ಕಾಗಿ ಸೂಕ್ತ ಅನುದಾನ ಬಿಡುಗಡೆ ಮಾಡುವಲ್ಲಿ ನಿರ್ಲಕ್ಷ್ಯ ತಳೆದಿದೆ ಎಂದು ಆರೋಪಿಸಿದರು.

     ನೆರೆ ಸಂತ್ರಸ್ಥರ ಪರಿಹಾರಕ್ಕಾಗಿ 3800 ಕೋಟಿ ರೂ.ಗಳ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ 1200 ಕೋಟಿ. ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿ, ನಿರ್ಲಕ್ಷ್ಯದಿಂದ ವರ್ತಿಸುತ್ತಿದೆ ಎಂದು ದೂರಿದರು.ನೆರೆಸಂತ್ರಸ್ಥರ ಎಲ್ಲಾ ಪರಿಹಾರಕ್ಕಾಗಿ 42 ಸಾವಿರ ಕೋಟಿ ರೂ.ಗಳನ್ನು ತಕ್ಷಣ ಕೇಂದ್ರ ಬಿಡುಗಡೆ ಮಾಡಬೇಕು. ನಿರ್ಲಕ್ಷ್ಯಸಿದರೆ ಮುಂದಿನ ದಿನಗಳಲ್ಲಿ ರಾಜ್ಯ ಬಂದ್‍ಗೆ ಕರೆ ನೀಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟಿಸಲಾಗುವುದು ಎಂದರು.ಪ್ರತಿಭಟನೆಯಲ್ಲಿ ಯೂಥ್ ಕಾಂಗ್ರೆಸ್‍ನ ಅಧ್ಯಕ್ಷ ನಲ್ಲಪಾಡ್, ಬಸವನಗೌಡ ಬರ್ದಾಲಿ ಸೇರಿದಂತೆ ಅನೇಕ ಕಾರ್ಯಕರ್ತರು, ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ