ತುಮಕೂರು:
ಸಮಾಜದಲ್ಲಿ ನಿರ್ಮಾಣವಾಗಿರುವಂತಹ ದುರ್ನಡತೆ, ತೊಡಕುಗಳನ್ನು ತೊಡೆದು ಹಾಕಲು ಪ್ರತಿಯೊಬ್ಬರು ತಮ್ಮ ಕಾರ್ಯವನ್ನು ಚಾಚುತಪ್ಪದೇ ಮಾಡುತ್ತಾ ಬಂದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಯುವಜನತೆಯ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು ಅದನ್ನು ನಿಭಾಯಿಸುವ ಚಾಣಾಕ್ಷ್ಯತನವನ್ನು ಹೊಂದಬೇಕೆಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.
ನಗರದ ಅಂತರಸನಹಳ್ಳಿ ಸತ್ಯಮಂಗಲದ ಹೇಮಾದ್ರಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಹೇಮಾದ್ರಿ ಸ್ನಾತಕೋತ್ತರ ಕೇಂದ್ರ ಹಾಗೂ ಚಿಗುರು ಸಮಾಜಕಾರ್ಯ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಮ್ಮಿಲನ-2018 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ಫರ್ಧಾತ್ಮಕವಾದ ಜಗತ್ತಿನಲ್ಲಿ ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ. ಅದನ್ನು ವಿದ್ಯಾರ್ಥಿಗಳು ತಮ್ಮ ಮಾನಸಿಕ ಹಾಗೂ ದೈಹಿಕ ವಿಕಾಸಕ್ಕೆ ಅನುಗುಣವಾಗಿ ಶಿಕ್ಷಣವನ್ನು ಪಡೆಯುತ್ತಾ ಹೋಗಬೇಕು.
ಒಂದೊಂದು ಘಟ್ಟಗಳಲ್ಲೂ ವೈವಿದ್ಯತೆಯ ಜ್ಞಾನಾನುಭವ ಗಳಿಸುತ್ತಾ ಪರಿಪೂರ್ಣತೆಯೊಂದಿಗೆ ವಿಕಸನವನ್ನು ಹೊಂದಬೇಕು. ಕಾಲಘಟ್ಟಗಳಿಗೆ ಅನುಗುಣವಾಗಿ ಕಾಲಾತೀತವಾದ ಪ್ರತಿಭಾ ಶಕ್ತಿಯನ್ನು ಸಂಪಾದಿಸಿ ಉನ್ನತವಾದ ಉದ್ಯೋಗವನ್ನು ಪಡೆದು ಉತ್ತಮವಾದ ಕೀರ್ತಿಯನ್ನು ಸಂಪಾದಿಸಿ ಗೌರವಕ್ಕೆ ಪಾತ್ರರಾಗಬೇಕೆಂದರು.
ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗಾಗಿ ಒದಗಿಸಿಕೊಟ್ಟಿರುವ ಮೂಲಭೂತ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶಿಸ್ತಿನಿಂದ ಕೂಡಿದ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ತಂದೆ ತಾಯಿಯರ ಆಶಯದಂತೆ ಉತ್ತಮವಾದ ಶಿಕ್ಷಣವನ್ನು ಪಡೆದು ಎಲ್ಲರಿಗೂ ಗೌರವವನ್ನು ನೀಡುವಂತಹ ಸದ್ಗುಣಿಗಳಾಗಬೇಕು. ಇಂದಿನ ಯುವಜನತೆಗೆ ಜ್ಞಾನ, ತಂತ್ರಜ್ಞಾನ, ಮಾನವೀಯ ಮೌಲ್ಯಗಳು ಅತ್ಯವಶ್ಯವಾಗಿದ್ದು ತಮ್ಮ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಂಡರೆ ಮಾತ್ರ ಸಾಧನೆಯ ಶಿಖರವನ್ನೇರಲು ಸಾಧ್ಯವಾಗುತ್ತದೆ.
2040ರ ವೇಳೆಗೆ ಭಾರತದಲ್ಲಿ ಯುವಜನತೆಯ ಸಂಖ್ಯೆ ಶೇ.60ರಷ್ಟು ಆಗಲಿದ್ದು ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಯುವಜನತೆಯನ್ನು ಹೊಂದಿದ ದೇಶವೆಂಬ ಹೆಗ್ಗಳಿಕೆಗೂ ಪಾತ್ರವಾಗುತ್ತದೆ. ಅದ್ದರಿಂದ ಹೆಚ್ಚಿನ ಪರಿಶ್ರಮದ ಜೊತೆಗೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಾಗ ಮಾತ್ರವೇ ವಿಶ್ವಕ್ಕೆ ಮಾದರಿಯಾಗಿ ನಿಲ್ಲಬಹುದು ಎಂದರು.
ನೆಲಮಂಗಲದ ಮಾಜಿ ಜಿ.ಪಂ.ಸದಸ್ಯ ಚಲುವರಾಜು ಮಾತನಾಡಿ ಜಗದ ಜೀವಕೋಟಿಗಳಲ್ಲಿ ಮಾನವನ ಜೀವನವು ಅತ್ಯಂತ ಶ್ರೇಷ್ಠವಾದದ್ದು, ಅದರಲ್ಲಿಯೂ ವಿದ್ಯಾರ್ಥಿ ಜೀವನವಂತೂ ಬಹಳ ಪವಿತ್ರವಾದದ್ದು. ಇದನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ತಮ್ಮ ಜೀವನವನ್ನು ಬಂಗಾರದಂತೆ ರೂಪಿಸಿಕೊಳ್ಳಬೇಕಾದರೆ ಸಸತ ಅಭ್ಯಾಸ, ಕಠಿಣ ಪರಿಶ್ರಮ, ಶಿಸ್ತುಬದ್ಧವಾದ ಜೀವನ ಶೈಲಿಗಳನ್ನು ರೂಡಿಸಿಕೊಳ್ಳಬೇಕು.
ಗುರುಗಳ ಮಾರ್ಗದರ್ಶನದಲ್ಲಿ ಮೌಲ್ಯಯುತ ಶಿಕ್ಷಣವನ್ನು ಪಡೆಯುತ್ತಾ, ಪೋಷಕರ ಪ್ರೋತ್ಸಾಹ, ಸಹಕಾರಗಳೊಂದಿಗೆ ಕ್ರಿಯಾಶೀಲರಾಗಬೇಕು. ಉತ್ತಮ ಜ್ಞಾನವನ್ನು ಪಡೆದುಕೊಂಡು ಸುಸಂಸ್ಕøತರಾಗಿ, ತಮ್ಮವ್ಯಕ್ತಿತ್ವ ವಿಕಸನವನ್ನು ಮಾಡಿಕೊಳ್ಳುತ್ತಾ ಸಮಾಜದಲ್ಲಿ ಆದರ್ಶ ವ್ಯಕ್ತಿಗಳ ತತ್ವ ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಳ್ಳುತ್ತಾ ವಿದ್ಯಾಸಂಸ್ಥೆಗೆ ಹಾಗೂ ಸಮಾಜಕ್ಕೆ ಹೆಚ್ಚಿನ ಕೀರ್ತಿಯನ್ನು ತರುವಂತಾಗಬೇಕು.
ಹುಟ್ಟಿದ ಸ್ಥಳವನ್ನು, ಪೋಷಿಸಿದ ತಂದೆ ತಾಯಿಗಳನ್ನು ಹೇಗೆ ನಾವು ಮರೆಯುವುದಿಲ್ಲವೊ ಹಾಗೆಯೇ ಅಕ್ಷರ ಜ್ಞಾನವನ್ನು ನೀಡಿದ ವಿದ್ಯಾಸಂಸ್ಥೆಯನ್ನು, ಅಲ್ಲಿನ ಗುರುಗಳನ್ನು ಮರೆಯಬಾರದು. ಏಕೆಂದರೆ ಗುರುವಿನ ಮಾರ್ಗದರ್ಶನವಿಲ್ಲದೇ ಈ ಜಗತ್ತಿನಲ್ಲಿ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ.
ಸಾಮಾಜಿಕ ಕಾರ್ಯಕರ್ತ ಸಾ.ಚಿ.ರಾಜಕುಮಾರ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣವೆಂಬುದು ಪ್ರಮುಖ ಘಟ್ಟವಾಗಿದ್ದು ವಯೋಮಾನಕ್ಕೆ ಅನುಗುಣವಾಗಿ ಪರಿಶ್ರಮದ ಅಧ್ಯಯನದ ಮೂಲಕ ಅದನ್ನು ಸಾಧಿಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸನ್ನುಗಳಿಸಬಹುದು.
ಇಂದಿನ ಯುವಜನತೆ ಮಾನವೀಯ ಮೌಲ್ಯಗಳು ಮತ್ತು ಸಂಬಂಧಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಹೊಂದಿದಾಗ ಮಾತ್ರವೇ ಉತ್ತಮ ಜೀವನ ನಿರ್ವಹಣೆ ಸಾಧ್ಯವಾಗುತ್ತದೆ. ಜೊತೆಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಹೆಚ್ಚು ಪುಸ್ತಕಗಳನ್ನು ಓದುವಂತಹ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ವಿ.ಟಿ.ತಿಪ್ಪೇಸ್ವಾಮಿ ಮಾತನಾಡಿ ವಿದ್ಯಾಸಂಸ್ಥೆಯೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು 9 ವರ್ಷಗಳ ಅವಧಿಯಲ್ಲಿ ಸುಮಾರು 11 ರ್ಯಾಂಕ್‍ಗಳನ್ನು ಪಡೆದುಕೊಂಡಿದೆ. ಕೆಲ ನ್ಯೂನ್ಯತೆಗಳ ನಡುವೆಯೂ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೇಮಾದ್ರಿ ಸಂಸ್ಥೆಯೂ ಮುಂದೆ ಒಂದಲ್ಲಾ ಒಂದು ದಿನ ಸಿಂಹಾದ್ರಿಯಾಗಿ ಹೋರ ಹೊಮ್ಮುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೇಮಾದ್ರ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಬಿ.ಕೆ.ನಟರಾಜು, ಹೇಮಾದ್ರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ವಿ.ಟಿ.ಮೋಹನ್, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಕಾವ್ಯ.ಹೆಚ್.ಕೆ., ಜೀವಿತ.ಕೆ.ಎನ್., ಆಫ್ಸರಿ ಕೌಸರ್, ಬೀಬಿ ಫಾತಿಮಾ ಸೇರಿದಂತೆ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ