ಚಳ್ಳಕೆರೆ
ವಿಶ್ವದ ಇತಿಹಾಸದಲ್ಲಿ ಶ್ರೇಷ್ಠವಾದ ಪ್ರಜಾಪ್ರಭುತ್ವವನ್ನು ಹೊಂದಿರುವರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ದೇಶದ ಸಂವಿಧಾನ ಮತ್ತು ನಮ್ಮ ಕಾನೂನು ನಮ್ಮನ್ನು ಆಳುವ ಜನಪ್ರತಿನಿಧಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ವಿಶೇಷವಾಗಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಯುವ ಮತದಾರರಿಗೆ ಹೆಚ್ಚಿನ ಅಧಿಕಾರವನ್ನು ನೀಡಿದ್ದು, ಇದೇ ಮೊದಲ ಬಾರಿಗೆ ಮತದಾನದ ಅವಕಾಶವನ್ನು ಪಡೆಯುತ್ತಿರುವ ಎಲ್ಲಾ ಯುವ ಜನಾಂಗ ದೇಶದ ಸಾರ್ವಭೌಮತೆ ಮತ್ತು ಸಾಮಾಜಿಕ ನ್ಯಾಯವನ್ನು ಸದೃಢಗೊಳಿಸಲು ಮತದಾನದ ಮೂಲಕ ಸಹಕಾರ ನೀಡಬೇಕೆಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ದೇವೇಂದ್ರ ಪಂಡಿತ್ ತಿಳಿಸಿದರು.
ಅವರು, ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಹಮ್ಮಿಕೊಂಡಿದ್ದ ಮತದಾನ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮತದಾನ ಪವಿತ್ರವಾದದ್ದು ಹಾಗೂ ಕಾನೂನು ಬದ್ದವಾಗಿ ನಮಗೆ ನೀಡಿದ ಅವಕಾಶವಾಗಿದೆ. ಈ ಮತವನ್ನು ಚಲಾಯಿಸುವ ಮೂಲಕ ಯೋಗ್ಯ ವ್ಯಕ್ತಿ ಆಯ್ಕೆಗೆ ಸಹಕಾರ ನೀಡಬೇಕಿದೆ.
ಆಸೆ, ಆಮೀಷಗಳಿಗೆ ಒಳಗಾಗದೆ ನಿರ್ಭಿತಿಯಿಂದ ಮತವನ್ನು ಚಲಾಯಿಸುವಂತೆ ಮನವಿ ಮಾಡಿದರು. ಅಪರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ರಾಷ್ಟ್ರದ ಸಂವಿಧಾನ ಚುನಾವಣಾ ಆಯೋಗದ ಮೂಲಕ ವಿಶೇಷವಾದ ಹಕ್ಕನ್ನು ಮತದಾರರಿಗೆ ನೀಡಿದೆ. ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಮತದಾನ ಮೌಲ್ಯಯುತವಾಗಿರಬೇಕು. ನಮಗೆ ನೀಡಿದ ಈ ಅಧಿಕಾರ ಶ್ರೇಷ್ಠವಾಗಿದ್ದು, ಯಾವುದೇ ಹಂತದಲ್ಲೂ ಯಾವುದೇ ರೀತಿಯ ಪ್ರಲೋಬನೆಗೆ ಒಳಗಾಗಬಾರದು ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ಮತದಾನದ ಶಕ್ತಿ ಮತ್ತು ಸಾಮಥ್ರ್ಯವನ್ನು ನಾಡಿನ ಜನರಿಗೆ ತಿಳಿಸಿದ ಕೀರ್ತಿ ನಿರ್ಗಮನ ಮುಖ್ಯ ಚುನಾವಣಾಧಿಕಾರಿ ಟಿ.ಎನ್.ಶೇಷನ್ವರಿಗೆ ಸೇರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಮತದಾನ ಪ್ರಜಾಪ್ರಭುತ್ವದ ಅಡಿಗಲ್ಲಾಗಿದ್ದು ಒಳ್ಳೆ ಆಡಳಿತ ಪಡೆಯಲು ಇದು ಸಹಕಾರಿ. ಇಂದು ಮತದಾನದ ಹಕ್ಕನ್ನು ಪಡೆಯುತ್ತಿರುವ ಎಲ್ಲಾ ಯುವ ಮತದಾರರು ಇದರ ಮೌಲ್ಯವನ್ನು ಸಂರಕ್ಷಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಜನಾರ್ಧನ, ಇಒ ಈಶ್ವರಪ್ರಸಾದ್, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಬಿಇಒ ಸಿ.ಎಸ್.ವೆಂಕಟೇಶಪ್ಪ, ಪ್ರೊ.ಎಂ.ಆರ್.ಮಂಜುನಾಥರೆಡ್ಡಿ, ಪಿ.ಎಂ.ಭೀರಲಿಂಗಪ್ಪ, ಡಾ.ಸಿ.ವಿ.ಕವಿತಾ, ಎಂ.ಶಿವಲಿಂಗಪ್ಪ, ಟಿ.ನಾಗರಾಜು, ಸಮಾಜ ಕಲ್ಯಾಣಾಧಿಕಾರಿ ಮಂಜಪ್ಪ, ಕೃಷಿ ಅಧಿಕಾರಿ ಮಾರುತಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
