ಚಿತ್ರದುರ್ಗ :
ಇಂದಿನ ಯುವ ಪೀಳಿಗೆಯು ಮಹಾನ್ ವಚನಕಾರರ ಜೀವನ ಚರಿತ್ರೆಯನ್ನು ತಿಳಿದು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳೀದರು.
ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ ಮತ್ತು ಉರಿಲಿಂಗ ಪೆದ್ದಿ ಮೊದಲಾದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರವು ಹಲವು ಮಹನೀಯರ ಜಯಂತಿಗಳನ್ನು ಆಚರಿಸುವುದರ ಉದ್ದೇಶ ಮಹಾನಾಯಕರ ಜೀವನ ಶೈಲಿಯನ್ನು ಮುಂದಿನ ಯುವ ಸಮಾಜಕ್ಕೆ ತಿಳಿಸುವ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಬಸವರಾಜ ಟಿ. ಬೆಳಗಟ್ಟ ಉಪನ್ಯಾಸ ನೀಡಿ ಮಾತನಾಡಿ ವಚನ ಯುಗವೆಂದರೆ ಶೀಲ ಯುಗವೆಂದರ್ಥ. ಶರಣರು ಎಂದರೆ ಬಸವಣ್ಣ, ಅಲ್ಲಮ ಪ್ರಭು, ಜೇಡರ ದಾಸಿಮಯ್ಯರು ಮಾತ್ರವಲ್ಲದೆ ಸುಮಾರು 245 ವಚನಕಾರರು ಸಮಾಜದಲ್ಲಿ ಕಂಡು ಬರುತ್ತಾರೆ ಅವರೆಲ್ಲರು ಕೂಡ ಸಮಾಜದಲ್ಲಿ ಶೋಷಣೆಗೆ ಒಳಗಾದವರನ್ನು ಮೇಲೆತ್ತುವ ಕಾಯಕ ಇವರದಾಗಿತ್ತು ಎಂದು ಹೇಳಿದರು.
ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರು ಜಾತಿಯನ್ನು ಮೀರಿದ ವಚನಕಾರರು ಹಾಗೂ ಕಾಯಕದಲ್ಲಿ ದೇವರನ್ನು ಕಂಡಂತ ಮಹಾನ ವಚನಕಾರರು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಮಾತನಾಡಿ ಇತಿಹಾಸವನ್ನು ಮರೆತವನು ಇತಿಹಾಸ ಸೃಷ್ಟಿಸಲಾರ, ಅದರಿಂದ ಇಂತಹ ಮಹಾನ ನಾಯಕರ ಜಯಂತಿಯನ್ನು ಇಂದಿನ ಯುವ ಪೀಳಿಗೆಯು ರೂಡಿಸಿಕೊಳ್ಳಲೆಂದು ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ಪ್ರತಿಭಾ, ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಜಯಣ್ಣ ದಲಿತ ಮುಖಂಡ ಮಾಡನಾಯಕನಹಳ್ಳಿ ರಂಗಪ್ಪ ಮತ್ತು ಗೀತ ಗಾಯನವನ್ನು ಹರೀಶ್ ಮತ್ತು ಸಂಗಡಿಗರು ನಡೆಸಿಕೊಟ್ಟರು.