ಹುಳಿಯಾರು:
ಉದ್ಯೋಗ ಕಲ್ಪಿಸುವವರಿಗೆ ನನ್ನ ಮತ
ದಿವಾಕರ್
ಚುನಾವಣೆಯಿಂದ ಮಾತ್ರ ದೇಶದ ಬದಲಾವಣೆ ಸಾಧ್ಯ ಎಂದು ನಾನು ಅರಿತಿದ್ದೇನೆ. ಒಳ್ಳೊಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದಾಗ ಮಾತ್ರ ಒಳ್ಳೊಳ್ಳೆಯ ಕೆಲಸಗಳು ನಡೆಯುತ್ತವೆ ಎನ್ನುವ ಸತ್ಯ ಸಹ ನಾನು ತಿಳಿದಿದ್ದೇನೆ. ದೊಡ್ಡಮಟ್ಟದಲ್ಲಿ ಯುವ ಜನತೆಗೆ ಉದ್ಯೋಗವಕಾಶಗಳನ್ನು ಸಿಗುವಂತೆ ಮಾಡುವುದು ಸಹ ದೇಶ ಮತ್ತು ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದವರಿಂದ ಮಾತ್ರ ಎಂಬುದು ಗೊತ್ತಿದೆ. ಹಾಗಾಗಿ ಈ ಚುನಾವಣೆಗೆ ನಾನು ತಪ್ಪದೆ ಮತ ಹಾಕುತ್ತೇನೆ.
ಆದರೆ ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿದೆ. ಯಾರೊಬ್ಬರೂ ಉದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ಈ ಹಿಂದೆ ಪದವಿ ಓದಿದರೆ ಸಾಕು ಉದ್ಯೋಗ ಗ್ಯಾರೆಂಟಿ ಎನ್ನುಯವಂತ್ತಿದ್ದು. ಈಗ ಪಿಎಚ್‍ಡಿ ಓದಿದರೂ ಉದ್ಯೋಗದ ಭರವಸೆ ಇಲ್ಲ. ಮತದಾನದ ದಿನಾಂಕದವರೆವಿಗೂ ಕಾಯುತ್ತೇನೆ ಅಷ್ಟರಲ್ಲಿ ದೇಶದಲ್ಲಿ ಉದ್ಯೋಗ ಕಲ್ಪಿಸುವ ಸ್ಪಷ್ಠ ಭರವಸೆ ನೀಡುವ ಪಕ್ಷಕ್ಕೆ ಮತಹಾಕುತ್ತೇನೆ.
ಜನಪ್ರತಿನಿಧಿಗಳ ಗುಲಾಮರಂತೆ ಇರಬಾರದು
ಎ.ಟಿ.ದರ್ಶನ್
ದೇಶದ ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿದೆ. ಈ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆ ಇಲ್ಲದೆ ಸರ್ಕಾರ ರಚನೆ ಸಾಧ್ಯವಿಲ್ಲ. ಮತದಾನದ ಮೂಲಕವೇ ಸರ್ಕಾರದ ಆಯ್ಕೆ ನಡೆಯಬೇಕು. ಹೀಗಾಗಿ ಸಂವಿಧಾನವು 18 ವರ್ಷ ತುಂಬಿದ ಪ್ರತಿ ಪ್ರಜೆಗೂ ಮತದಾನದ ಹಕ್ಕು ಕೊಟ್ಟಿದೆ.
ಹಾಗಾಗಿ ಮತದಾರರು ಯಾವುದೇ ಒತ್ತಡ ಅಥವಾ ಆಮಿಷಗಳಿಗೆ ಮಣಿಯದೆ ಸ್ವಇಚ್ಛೆಯಿಂದ ಮತದಾನ ಮಾಡಬೇಕು. ಮತದಾನದ ನಂತರ ಗೆದ್ದವರ ಗುಲಾಮರಂತೆ ಅವರು ಮಾಡಿದ್ದು ಮತ್ತು ಹೇಳಿದ್ದೇ ಸರಿ ಎನ್ನದೆ ತಪ್ಪು ಕಂಡುಬಂದಲ್ಲಿ ಪ್ರಶ್ನಿಸುವ ಮತ್ತು ಖಂಡಿಸುವ ಕಾರ್ಯಗಳು ನಡೆಯಬೇಕು.