ಚಿತ್ರದುರ್ಗ :
ಹದಿಹರೆಯದ ಯುವಜನರ ಬೆಳೆಯುವ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡಿದಲ್ಲಿ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಹೇಳಿದರು.
ಜಿಲ್ಲಾ ಆರೋಗ್ಯ ಇಲಾಖೆಯ ರಾಷ್ಟ್ರೀಯ ಮಾನಸಿಕ ರೋಗಗಳ ನಿಯಂತ್ರಣಾ ವಿಭಾಗ ಮತ್ತು ಮಹೇಶ್ ಪದವಿ ಪೂರ್ವ ಕಾಲೇಜು ಚಿತ್ರದುರ್ಗ ಇವರ ಸಹಯೋಗದೊಂದಿಗೆ ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ “ವಿಶ್ವ ಸಿಜೋಫ್ರೇನಿಯಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿಜೋಫ್ರೇನಿಯಾ ರೋಗವು ಒಂದು ತೀವ್ರ ಮಾನಸಿಕ ಕಾಯಿಲೆಯಾಗಿದ್ದು, 16 ರಿಂದ 30 ವರ್ಷದ ವಯೋಮಾನದಲ್ಲಿ ಸಂಬವಿಸಬಹುದಾದ ಮಾನಸಿಕ ಅಸ್ತವ್ಯಸ್ತತೆ ಹದಿ ಹರೆಯದ ಯುವ ವಯಸ್ಸಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಸದೃಢ ಮನಸ್ಸಿದ್ದರೆ ಸದೃಢ ಆರೋಗ್ಯ ಹೊಂದಬಹುದು. ಒಳ್ಳೆಯ ಮನಸ್ಸಿಲ್ಲದಿದ್ದರೇ ದೇಹ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ದುಸ್ತರವಾಗುತ್ತದೆ. ಬೆಳೆಯುವ ಮನಸ್ಸಿನಲ್ಲಿ ಸದಾ ಸಕಾರಾತ್ಮಕ ಚಿಂತನೆಗಳು ಮೂಡಲಿ ಎಂದರು.
ಜಿಲ್ಲಾ ಮಾನಸಿಕ ತಜ್ಞ ಡಾ.ಆರ್.ಮಂಜುನಾಥ್ ಮಾತನಾಡಿ, ಸಿಜೋಫ್ರೇನಿಯಾ ಕಾಯಿಲೆಗೆ ಅನುವಂಶಿಕವಾಗಿ, ಪರಿಸರ ಕಾರಣಗಳಿಂದ ಉಂಟಾಗುತ್ತದೆ. ಮೆದುಳು ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಂಡು ಮನುಷ್ಯನ ಭಾವನೆ, ಆಲೋಚನೆಗಳ ಮೇಲೆ ತನ್ನ ಪ್ರಭಾವನ್ನು ಬೀರಿ ಆತನ ವರ್ತನೆ ಬದಲಾಗುತ್ತದೆ. ಕೊನೆಯಲ್ಲಿ ಆತ್ಮಹತ್ಯೆಯಂತಹ ಕೃತ್ಯಕ್ಕೆ ತಳ್ಳುತ್ತದೆ. ಇಂತಹ ರೋಗದಿಂದ ಹೆದರುವ ಅವಶ್ಯಕತೆ ಇರುವುದಿಲ್ಲ. ಶೀಘ್ರ ರೋಗವನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಸಮಾಲೋಚನೆ ಮಾಡಿದರೆ ರೋಗವು ವಾಸಿಯಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಎನ್.ಎಸ್.ಮಂಜುನಾಥ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಭೌತಿಕ ಮತ್ತು ಮಾನಸಿಕ ಬೆಳವಣಿಗೆ ಆಗುತ್ತಿರುತ್ತದೆ. ದೇಹದಲ್ಲಿ ಹಲವಾರು ರಸದಾತುಗಳು ಋತುಚಕ್ರ, ಗಡ್ಡ ಮೀಸೆ ಹೆಣ್ಣು ಮಕ್ಕಳಲ್ಲಿ ಸ್ತ್ರೀತನ, ಗಂಡಸರಲ್ಲಿ ಗಡಸುತನ ಮೈಗೂಡುವ ಸಮಯವಾಗಿರುವುದರಿಂದ ಸಂಕೋಚ, ಬಿಗುಮಾನ, ಉತ್ಸುಕತೆ ಹೆಚ್ಚಾಗಿರುತ್ತದೆ. ವರ್ತನೆಗಳು ಬದಲಾಗಿ ಕೆಲವರು ದುಶ್ಚಟಗಳಿಗೆ ದಾಸರಾಗುತ್ತಾರೆ. ಧನಾತ್ಮಕ ಚಿಂತನೆಗಳು ನಿಮ್ಮದಾಗಲು ವಿವೇಕದಿಂದ ವರ್ತಿಸಬೇಕಾಗುತ್ತದೆ. ದಿನ ನಿತ್ಯ ಸ್ನಾನ, ವ್ಯಾಯಾಮ ಯೋಗ ಧ್ಯಾನ ಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಮಾನಸಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸುರೇಶ್ ಮಾತನಾಡಿ, ಪ್ರತಿ ವರ್ಷ ಮೇ.24 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಲ್ಲಿ 21 ಮಿಲಿಯನ್ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಈ ರೋಗಕ್ಕಿರುವ ಕಳಂಕವನ್ನು ಹೋಗಲಾಡಿಸಲು ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.ಯಶವಂತ್ ಶೆಟ್ಟಿ, ಪಿ.ಬಿ.ಆಚಾರ್ಯ, ಕಾಲೇಜಿನ ಆಡಳಿತಾಧಿಕಾರಿ ರವಿಕುಮಾರ್, ಮಾನಸಿಕ ಆರೋಗ್ಯ ವಿಭಾಗದ ಕಿರಿಯ ಆರೋಗ್ಯ ಸಹಾಯಕ ವೆಂಕಟೇಶ್, ರಿಜ್ವಾನ್ ಭಾಷ ಉಪಸ್ಥಿತರಿದ್ದರು.