ದಾವಣಗೆರೆ:
ವೇತನ ಅನುದಾನ ಬಿಡುಗಡೆ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ವತಿಯಿಂದ ಜೂ.10 ರಂದು ಜಿಲ್ಲಾ ಪಂಚಾಯತ್ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಉಮೇಶ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಘದ ಹೋರಾಟದ ಫಲವಾಗಿ ಮೊದಲು, ಗ್ರಾಮ ಪಂಚಾಯಿತಿ ಯಲ್ಲಿಯೇ ಸಂಗ್ರಹ ಆಗುವ ಕರದಲ್ಲಿ ವೇತನ ಪಡೆಯುತ್ತಿದ್ದ ಗ್ರಾಮ ಪಂಚಾಯತ್ ನೌಕರರು 2018ರಿಂದ ಸರ್ಕಾರದಿಂದ ನೇರವಾಗಿ ವೇತನ ಪಡೆಯಲು ಸಾಧ್ಯವಾಗಿದೆ. ಆದರೆ, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕಳೆದ ಆರು ತಿಂಗಳಿನಿಂದ ಗ್ರಾ.ಪಂ. ನೌಕರರಿಗೆ ವೇತನ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಗ್ರಾಮ ಪಂಚಾಯತ್‍ಗಳಲ್ಲಿ ಕೆಲಸ ಮಾಡುತ್ತಿರುವ ಬಿಲ್ ಕಲೆಕ್ಟರ್, ನೀರು ಗಂಟಿ, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಇತರೆ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಗ್ರಾ.ಪಂ. ನೌಕರರಿಗೆ ಪ್ರತಿ ವರ್ಷವು 830 ಕೋಟಿ ವೇತನ ಅನುದಾನ ಬೇಕಾಗಿದೆ. ಆದರೆ, ವೇತನಕ್ಕಾಗಿ ಕಳೆದ ವರ್ಷ ನಿಗದಿಯಾಗಿದ್ದ ವೇತನ ಅನುದಾನ 312 ಕೋಟಿ ರೂ.ಗಳನ್ನು ರೈತರ ಸಾಲ ಮನ್ನಾದ ನೆಪ ಹೇಳಿ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಗ್ರಾ.ಪಂ. ನೌಕರರು ಕಳೆದ ಆರು ತಿಂಗಳುಗಳಿಂದ ವೇತನ ಇಲ್ಲದೇ, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣವೇ ಗ್ರಾ.ಪಂ. ನೌಕರರ ವೇತನ ಅನುದಾನ ಬಿಡುಗಡೆ ಮಾಡಬೇಕು. ಅಪರ ಕಾರ್ಯದರ್ಶಿ ಸ್ವಾಮಿಯವರ ವರದಿಯಂತೆ, ಎಲ್ಲ ನೌಕರರನ್ನು ಏಕಕಾಲಕ್ಕೆ ಅನುಮೋದನೆ ನೀಡಬೇಕು. ಬಿಲ್ ಕಲೆಕ್ಟರ್ ಹುದ್ದೆಯಿಂದ ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡಬೇಕು. ಇಎಫ್‍ಎಂಎಸ್ ಸೇರದಿರುವ ನೌಕರರನ್ನು ಪಂಚತಂತ್ರದಲ್ಲಿ ಸೇರಿಸಬೇಕೆಂಬುದು ಸೇರದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಚಲೋ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಶ್ರೀನಿವಾಸಾಚಾರ್, ಸಂಪತ್‍ಕುಮಾರ್, ಹೇಮಣ್ಣ, ಭೀಮಾ ನಾಯ್ಕ, ಬಸವರಾಜ್ ಬೇತೂರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
