ದಾವಣಗೆರೆ:
ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಜಿಲ್ಲಾ ಪಂಚಾಯತ್‍ನ ಪ್ರಭಾರ ಅಧ್ಯಕ್ಷೆ ಜೆ.ಸವಿತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಜಿ.ಪಂ. ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ಸದಸ್ಯರುಗಳಿಗೆ ಗೌರವ ನೀಡುತ್ತಿಲ್ಲ. ಅಜನರಿಂದ ಆಯ್ಕೆಯಾಗಿ ಬಂದ ನಾವುಗಳು ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಬೇಕಾಗುತ್ತದೆ. ಆದರೆ, ಅಧಿಕಾರಿಗಳು ಯಾರೂ ಸಹ ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಮ್ಯಾನೇಜರ್ ಅವರೊಂದಿಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ಜಿ.ಪಂ. ಕಚೇರಿಯಲ್ಲಿರುವ ಕ್ಯಾಂಟೀನ್ ಬಾಡಿಗೆಯಲ್ಲಿ ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಗೌರವ ಧನ ನೀಡಲಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ. ಏಕೆ ಸರ್ಕಾರಕ್ಕೆ ನಮ್ಮ ಗೌರವ ಧನ ಕೊಡಲೂ ಶಕ್ತಿ ಇಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.
ನಮಗೆ ಒಂದು ಪೆನ್ ಕೊಡಲು ಸಹ ಅಧಿಕಾರಿಗಳು ಸತಾಯಿಸುತ್ತಾರೆ. ನನ್ನ ಸೀಟ್ ಮೇಲೆ ಒಂದು ಟೆವಲ್ ಹಾಕಿ ಎಂಬುದಾಗಿ ಸೂಚಿಸಿ ತಿಂಗಳು ಕಳೆದಿದೆ. ಆದರೂ ಸ್ಪಂದಿಸಿಲ್ಲ, ನನಗೆ ಒಬ್ಬ ಚಾಲಕ ಹಾಗೂ ಒಬ್ಬ ಪಿವನ್ ನೀಡಿದ್ದಾರೆ. ಆದರೆ, ಅವರು ಹೇಳದೇ ಕೇಳದೇ ರಜೆ ಹೋಗುತ್ತಾರೆ. ನಾವು ಹೇಳುವ ಮಾತಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ, ನಾವೇಕೆ ಈ ಸೀಟ್‍ನಲ್ಲಿ ಕುಳಿತುಕೊಳ್ಳಬೇಕೆಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಆಂಜನೇಯ.ಟಿ, ಸರ್ಕಾರದಿಂದ ಅಧ್ಯಕ್ಷರಿಗೆ 35 ಸಾವಿರ ರೂ., ಉಪಾಧ್ಯಕ್ಷರಿಗೆ 15 ಸಾವಿರ ರೂ, ಹಾಗೂ ಸದಸ್ಯರಿಗೆ 5 ಸಾವಿರ ರೂ. ಗೌರವಧನ, ಇದರ ಜತೆಗೆ ಅಧ್ಯಕ್ಷರಿಗೆ ಮಾಸಿಕ 550 ಲೀಟರ್ ಡೀಸೆಲ್, ಅತಿಥಿ ಸತ್ಕಾರ ಭತ್ಯೆಯಾಗಿ ವಾರ್ಷಿಕ 25 ಸಾವಿರ ರೂ ಹಾಗೂ ದಿನ ಭತ್ಯೆ ಸಹ ಬರುತ್ತಿದ್ದು, ಹಿಂದೆ ಇವೆಲ್ಲವನ್ನೂ ನೇರವಾಗಿ ನಿಮ್ಮ ಖಾತೆಗಳಿಗೆ ಪ್ರತಿ ತಿಂಗಳು 10ನೇ ತಾರೀಕಿನೊಳಗೇ ನಿಯಮಾನುಸಾರವಾಗಿ ಜಮೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಸಮಾಧಾನಗೊಳ್ಳದ ಅಧ್ಯಕ್ಷೆ ಜೆ.ಸವಿತಾ, ನನ್ನ ಕಚೇರಿಯ ದೂರವಾಣಿ ದುರಸ್ತಿಗೆ ಬಂದು, ತಿಂಗಳು ಕಳೆದಿದೆ. ಅಲ್ಲದೇ, ನನ್ನ ಛೇಂಬರ್‍ಗೆ ತಾ.ಪಂ, ಗ್ರಾ.ಪಂ. ಅಧ್ಯಕ್ಷರು, ಸಾರ್ವಜನಿಕರು ಭೇಟಿ ನೀಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಒಂದು ಕಪ್ ಟೀ ಕೊಡಿಸಲು ಅವಕಾಶ ಇಲ್ಲದಿದ್ದರೇ ಹೇಗೆ? ಇನ್ನೂ ಮುಂದೆ ಯಾರೇ ಅಧ್ಯಕ್ಷರಾಗಲಿ, ನನಗೆ ಮಾಡಿದ ಅವಮಾನ ಅವರಿಗೆ ಯಾವುದೇ ಕಾರಣಕ್ಕೂ ಮಾಡಬಾರದೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿ.ಪಂ. ಸದಸ್ಯ ವೀರಸಂಗಪ್ಪ ಮಾತನಾಡಿ, ಕೆಲ ಅಧಿಕಾರಿಗಳು ಹದ್ದು ಮೀರಿ ವರ್ತಿಸುತ್ತಿದ್ದು, ನೂತನವಾಗಿ ಬಂದಿರುವ ಸಿಇಒ ಬಸವರಾಜೇಂದ್ರರವರು ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್.ಮಹೇಶ್, ಸಿಇಒ ಬಸವರಾಜೇಂದ್ರ ಮತ್ತಿತರರು ಹಾಜರಿದ್ದರು.