ತುಮಕೂರು
ಜಿಲ್ಲೆಯಲ್ಲಿ ಜೀರೋ ಟ್ರಾಫಿಕ್ ಮಂತ್ರಿಯಿಂದಲೇ ಕಾಂಗ್ರೆಸ್ ಪಕ್ಷ ಹಾಳಾಗುತ್ತಿದೆ. ಇದಕ್ಕೆ ಅವರೇ ಕಾರಣ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಡಿ.ಸಿ.ಎಂ ಡಾ.ಜಿ.ಪರಮೇಶ್ವರ್ ವಿರುದ್ದ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಪ್ರತಿಕ್ರ್ರಿಯಿಸಿ ಮಾತನಾಡಿರುವ ಅವರು, ಈ ಮಂತ್ರಿ ಒಮ್ಮೆ ಇಲ್ಲಿಗೆ ಬಂದು ಹೋದರೆ ಐನೂರು ಓಟುಗಳು ಕಡಿಮೆಯಾಗುತ್ತವೆ. ಮನುಷ್ಯನಿಗೆ ಅಧಿಕಾರ ಇರಬೇಕು. ಅದು ಒಳ್ಳೆಯದಕ್ಕೆ ಬಳಕೆಯಾಗಬೇಕು. ಜೀರೋ ಟ್ರಾಫಿಕ್ ಮೂಲಕ ಜನರಿಗೆ ಬಹಳಷ್ಟು ಕಿರಿಕಿರಿ ಆಗುತ್ತಿದೆ.
ಪವರ್ ಈಸ್ ಪಾಯಿಜನ್ ಎಂದು ಹೇಳುತ್ತಾರೆ. ಈಗ ಅದೇ ಆಗಿದೆ ಎಂದ ಅವರು ನಿಮಗೂ ಈ ಅನುಭವ ಆಗಿರಬಹುದಲ್ಲವೇ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಕೊರಟಗೆರೆಗೆ ಹೋಗಿ ಕೇಳಿ ಅವರನ್ನು ಗೆಲ್ಲಿಸಿದ್ದು ಯಾರು ಎಂದು ಹೇಳುತ್ತಾರೆ. ಯಾರಾದರೂ ಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡುವುದು ನನ್ನ ಗುಣ. ಅದೇ ರೀತಿ ನಾನು ಸಹಾಯ ಮಾಡಿದ್ದೇನೆ. ಅವರು ನನ್ನ ಸ್ನೇಹಿತರು ಅಂತ ಸಹಾಯ ಮಾಡಿದ್ದೇನೆ. ಅವರೇನೂ ಕೇಳಿರಲಿಲ್ಲ.
ನಾನೇ ಸಹಾಯ ಮಾಡಿ ಅವರನ್ನು ಗೆಲ್ಲಿಸಿದ್ದೆ. ಆ ಕೃತಜ್ಞತೆ ಅವರಿಗೆ ಇರಬೇಕು ಎಂದರು. ಜಿಲ್ಲೆಯಲ್ಲಿ ಹಾಳಾಗುತ್ತಿರುವ ಪಕ್ಷ ಕಟ್ಟಲು ನಾವು ಮುಂದಾಗುತ್ತೇವೆ. ಈಗಾಗಲೇ ಶಫಿ ಅಹಮ್ಮದ್ ಜೊತೆ ಮಾತನಾಡಿದ್ದೇನೆ. ಏಕೆಂದರೆ ಆರಂಭದ ದಿನಗಳಲ್ಲಿ ನಾವು ವಿದ್ಯಾರ್ಥಿಗಳಾಗಿದ್ದಾಗಿನಿಂದಲೂ ಪಕ್ಷ ಸಂಘಟಿಸಿದ್ದೇವೆ. ಆಗ ಯಾರಿದ್ದರು ಎಂಬುದು ಇಂದಿನವರಿಗೆ ತಿಳಿದಿಲ್ಲ. ನಾವು ಕಟ್ಟಿ ಬೆಳೆಸಿದ ಪಕ್ಷ ಹಾಳಾಗಲು ಬಿಡುವುದಿಲ್ಲ. ನಮಗೆ ನೋವಿದೆ. ಕಾಂಗ್ರೆಸ್ ಪಕ್ಷ 69 ನೆ ಇಸವಿಯಿಂದ ಬಲಿಷ್ಠವಾಗುತ್ತಲೇ ಬಂದಿದೆ. ಆದರೆ ಕೆಲವರ ಹಿಡಿತದಿಂದ ಈ ಪಕ್ಷ ಸೊರಗಿದೆ. ಇಡೀ ದೇಶದಲ್ಲಿ ಎಲ್ಲಾ ಜಾತಿ ವರ್ಗಕ್ಕೂ ರಕ್ಷಣೆ ಕೊಡುವ ಏಕೈಕ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ಸಿದ್ದರಾಮಯ್ಯ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಜಾರಿಗೆ ತರದೇ ಹೋಗಿದ್ದರೆ ಅದೆಷ್ಟೋ ಜನ ಬಡವರು ಊಟವಿಲ್ಲದೆ ನರಳುತ್ತಿದ್ದರು. ಇಂದು ರಾಜ್ಯದಲ್ಲಿ ಭಿಕ್ಷುಕರ ಸಂಖ್ಯೆ ಕಡಿಮೆಯಾಗಿದೆ. ಅಕ್ಕಿ ಕೊಡದೇ ಹೋಗಿದ್ದರೆ ಇವರೆಲ್ಲಾ ಏನು ತಿನ್ನಬೇಕಾಗಿತ್ತು ಎಂದು ಪ್ರಶ್ನಿಸಿದ ಅವರು, ನೀವು ಮೀಡಿಯಾದವರಿಗೆ ಇದೆಲ್ಲಾ ಗೊತ್ತಿದ್ದರೂ ನೆನಪಿಸುವುದಿಲ್ಲ.
ಹೋಗಲಿ ಕಾಂಗ್ರೆಸ್ ಲೀಡರ್‍ಗಳಾದರೂ ನೆನಪಿಸುತ್ತಾರ? ಅದೂ ಇಲ್ಲ. ಸಿದ್ದರಾಮಯ್ಯ ಬಡವರ ಪರ ಕೆಲಸ ಮಾಡಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯ ಎಂದರು. ಯಾರು ಬಂದರೂ ಏನೇ ಹೇಳಿದರೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿ ನಾನು 5 ವರ್ಷ ಅವಧಿ ಪೂರೈಸುತ್ತೇನೆ. ರೇವಣ್ಣ ಅಲ್ಲ, ಇನ್ನಾರೂ ಬಂದು ನನ್ನನ್ನು ಏನೂ ಮಾಡಲಾರರು. ಯಾವುದೋ ಹಳೆಯ ಅರ್ಜಿಯನ್ನು ಮುಂದಿಟ್ಟುಕೊಂಡು ತನಿಖೆ ಮಾಡಿಸಲು ಅವರು ಮುಂದಾಗುತ್ತಾರೆ.
ಕೆ.ಎಂ.ಎಫ್‍ನಲ್ಲಿಯೇ ಸಾಕಷ್ಟು ಹಗರಣಗಳಿವೆ. ಅದರ ಬಗ್ಗೆ ನಾನು ಹೇಳಲೇನು ಎಂದ ಅವರು ರೇವಣ್ಣ ಸೇರಿದಂತೆ ಯಾರೂ ಸಹ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದರು. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ನಿಮ್ಮ ವಿರುದ್ದ ಮಾಡಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯೆ ಏನು ಎಂದು ಪ್ರಶ್ನಿಸಿದ್ದಕ್ಕೆ ಅವರೊಬ್ಬ ಕಚಡ. ಆತನ ಬಗ್ಗೆ ನಾನು ಮಾತನಾಡಲ್ಲ. ಆತನ ಕ್ಷೇತ್ರದಲ್ಲಿಯೇ ಅವರ ಅಭ್ಯರ್ಥಿಗೆ ಲೀಡ್ ಕೊಡಲಾಗಿಲ್ಲ. ಇನ್ನೂ ಬೇರೆಯವರ ಬಗ್ಗೆ ಮಾತನಾಡುತ್ತಾರೆಂದರೆ ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸಿಟ್ಟಾದರು.
ಮಧುಗಿರಿ ಕ್ಷೇತ್ರದ ಜನ ಜಿ.ಎಸ್.ಬಸವರಾಜು ಅವರಿಗೆ ಹೆಚ್ಚು ಮತಗಳನ್ನು ತಂದು ಕೊಟ್ಟಿದ್ದಾರೆ. ಅವರ ಋಣವನ್ನು ತೀರಿಸಬೇಕಿದೆ. ಕೆರೆಗಳಿಗೆ ನೀರು ತರುವ ಯೋಜನೆಯನ್ನು ಕಾರ್ಯಗತಗೊಳಿಸಬೇಕು. ಮಧುಗಿರಿ, ಶಿರಾ, ಪಾವಗಡ, ಕೊರಟಗೆರೆ ತಾಲ್ಲೂಕುಗಳನ್ನು ಸೇರಿಸಿ ಒಂದು ಜಿಲ್ಲೆಯನ್ನಾಗಿ ಮಾಡಬೇಕು. ರಾಯದುರ್ಗ ರೈಲ್ವೆ ಯೋಜನೆ ತ್ವರಿತವಾಗಿ ಆಗಬೇಕು. ವಲಸೆ ಹೋಗುವವರು ಹೆಚ್ಚಾಗುತ್ತಿದ್ದು, ಉದ್ಯೋಗ ಸೃಷ್ಟಿಗಾಗಿ ಕಾರ್ಖಾನೆಗಳನ್ನು ಸ್ಥಾಪಿಸಬೇಕು.
ಈ ಬೇಡಿಕೆಗಳ ಮನವಿಯನ್ನು ನಾನು ಅವರಿಗೆ ಸಲ್ಲಿಸಿದ್ದೇನೆ ಎಂದರು. ಜಿ.ಎಸ್. ಬಸವರಾಜು ಅವರಿಗೆ ಕಾಂಗ್ರೆಸ್‍ನವರ ಸಂಪರ್ಕ ಹೆಚ್ಚು. 20 ವರ್ಷ ಕಾಂಗ್ರೆಸ್‍ನಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿಗಿಂತ ಹೆಚ್ಚಾಗಿ ಅವರ ವೈಯಕ್ತಿಕ ಸಂಪರ್ಕದಿಂದ ಅವರು ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದರು.
ಆತನೊಬ್ಬ ಕಚಡ ನಾನು ಮಾತನಾಡಲ್ಲ.
ಅವರ ಕ್ಷೇತ್ರದಲ್ಲಿಯೇ ಜೆಡಿಎಸ್ ಅಭ್ಯರ್ಥಿಗೆ ಲೀಡ್ ಕೊಡಲು ಸಾಧ್ಯವಾಗಿಲ್ಲ. ಬೇರೆಯವರ ಬಗ್ಗೆ ಆತ ಮಾತನಾಡುತ್ತಾನೆ. ಅಂತಹವನ ಬಗ್ಗೆ ನಾನು ಮಾತನಾಡುವುದಿಲ್ಲ. ಅವನೊಬ್ಬ ಕಚಡ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ದ ಕೆ.ಎನ್.ರಾಜಣ್ಣ ಗುಡುಗಿದರು.
ಕಾಂಗ್ರೆಸ್‍ಗೆ ಸಿದ್ದರಾಮಯ್ಯ ಅನಿವಾರ್ಯ
ಸಿದ್ದರಾಮಯ್ಯ ಬಡವರ ಪರ ಕೆಲಸ ಮಾಡುವವರು. ಅನ್ನಭಾಗ್ಯ ಯೋಜನೆ ಜಾರಿಗೆ ತರದೆ ಹೋಗಿದ್ದರೆ, ಇಂದು ಬಡವರ ಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ ಕೆ.ಎನ್.ರಾಜಣ್ಣ, ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯ. ಅವರಿಲ್ಲದೆ ಹೋದರೆ ಬಿ ಫಾರಂ ಕೂಡ ಸಿಗುವುದಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ