ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯ

ದಾವಣಗೆರೆ:

     ದೇವದಾಸಿ ಮಹಿಳೆಯರು ಮತ್ತವರ ಕುಟುಂಬ ಸದಸ್ಯರ ಗಣತಿ ನಡೆಸಿ, ಪುನರ್ವಸತಿ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ದೇವದಾಸಿ ಮಹಿಳೆಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

     ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ದೇವದಾಸಿ ಮಹಿಳೆಯರು, ತಮ್ಮ ಮತ್ತು ತಮ್ಮ ಕುಟುಂಬುದವರಿಗೆ ಪುನರ್ವಸತಿ ಕಲ್ಪಿಸಲು ಮೀನಾ ಮೇಷ ಎಣಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಲ್.ಭಟ್, ಅನಿಷ್ಟ ಪದ್ಧತಿಗಳಲ್ಲಿ ಒಂದಾಗಿರುವ ದೇವದಾಸಿ ಪದ್ಧತಿಯು ದೇಶದಲ್ಲಿ ನಿಷೇಧಿಸಲ್ಪಟ್ಟಿದ್ದರೂ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇಂದಿಗೂ ಜೀವಂತವಾಗಿದೆ. ನಮ್ಮ ರಾಜ್ಯದಲ್ಲಿ ಸರ್ಕಾರದ ಗಣತಿ ಪ್ರಕಾರವೇ 60 ಸಾವಿರ ಮಂದಿ ಗಣತಿಗೆ ಒಳಪಟ್ಟ ದೇವದಾಸಿ ಮಹಿಳೆಯರಿದ್ದಾರೆ.

     ಆದರೆ, ಗಣತಿ ಇಲ್ಲದ ಸಾವಿರಾರು ಕುಟುಂಬಗಳಿದ್ದು, ಕರ್ನಾಟಕ ಒಂದರಲ್ಲಿಯೇ ಲಕ್ಷಾಂತರ ಸಂಖ್ಯೆಯಲ್ಲಿ ದೇವದಾಸಿ ಕುಟುಂಬಗಳಿವೆ. ಆದರೆ, ಇವರಿಗೆ ಸಂಪೂರ್ಣವಾಗಿ ಪುನರ್ವಸತಿ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

       ಮೇಲ್ಜಾತಿಯ ಪುರುಷರ ಕ್ರೌರ್ಯಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಹೆಣ್ಣು ಮಹಿಳೆಯರೇ ಅನಿಷ್ಟ ದೇವದಾಸಿ ಪದ್ಧತಿಗೆ ಬಲಿಯಾಗಿ, ಕ್ರೂರ ಪದ್ಧತಿಗೆ ಸಿಲುಕಿ ನಲುಗುತ್ತಿದ್ದಾರೆ. ದೇಶವ್ಯಾಪಿಯಾಗಿ ದೇವದಾಸಿ ಮಹಿಳೆಯರು ಮತ್ತು ಅಂತಹವರ ಕುಟುಂಬ ಸದಸ್ಯರ ಗಣತಿ ನಡೆಸಬೇಕು. ಈ ಮೂಲಕ ದೇವದಾಸಿ ಮಹಿಳೆಯರು ಮತ್ತವರ ಕುಟುಂಬದ ಸದಸ್ಯರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಿಸಿದರು.

      ದೇವದಾಸಿ ಮತ್ತವರ ಕುಟುಂಬಗಳ ಸ್ಥಿತಿ ಹೀನಾಯವಾಗಿದ್ದು, ಹೆಣ್ಣು ಮಕ್ಕಳ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ಇಂತಹ ಅನೇಕ ಕಷ್ಟಗಳಿಂದ ಈ ಕುಟುಂಬಗಳನ್ನು ಮೇಲೆತ್ತುವ ಮತ್ತು ಇಂತಹ ಅಮಾನವೀಯ ಪದ್ಧತಿಯನ್ನು ಕೊನೆಗಾಣಿಸುವ ಕೆಲಸ ಇಂದು ತುರ್ತಾಗಿ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ, ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದರು.

        ಸಂಘದ ರಾಜ್ಯಾಧ್ಯಕ್ಷೆ ಟಿ.ವಿ.ರೇಣುಕಮ್ಮ ಮಾತನಾಡಿ, ಬಜೆಟ್‍ನಲ್ಲಿ ದೇವದಾಸಿ ಮಹಿಳೆಯರಿಗೆ ಮತ್ತು ಆ ಕುಟುಂಬಗಳಿಗೆ ಅಗತ್ಯ ಅನುದಾನ, ನೆರವು ಘೋಷಿಸಬೇಕು. ಈ ಮೂಲಕ ತಮ್ಮದಲ್ಲದ ತಪ್ಪಿಗೆ ಈ ಅನಿಷ್ಟ ಪದ್ಧತಿಗೆ ಬಲಿಯಾದವರ ಬದುಕಿಗೆ ಕೇಂದ್ರ ಸರ್ಕಾರ ಆಸರೆ ಕಲ್ಪಿಸಬೇಕು. ದೇವದಾಸಿ ಪದ್ಧತಿ ತಡೆ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಬೇಕು. ಕೇಂದ್ರ ಸರ್ಕಾರವೂ ಮಾಸಿಕ 5 ಸಾವಿರ ರೂ. ಸಹಾಯ ಧನ ನೀಡಬೇಕು.

        ದೇವದಾಸಿ ಮತ್ತವರ ಕುಟುಂಬಕ್ಕೆ 5 ಎಕರೆ ಜಮೀನು, ನಿವೇಶನ ನೀಡಬೇಕು. ಸ್ವಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ದೇವದಾಸಿ ಮಹಿಳೆಯರಿಗೆ, ಕುಟುಂಬ ಸದಸ್ಯರಿಗೆ ಸೂಕ್ತ ತರಬೇತಿ ಸಹಿತ ಸಹಾಯಧನ ಸಾಲ ವಿತರಿಸಬೇಕು. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 200 ದಿನಗಳ ಕಾಲ ಕಡ್ಡಾಯವಾಗಿ ಕೆಲಸ ನೀಡಬೇಕು. ಪರಿಶಿಷ್ಟ ಜಾತಿ-ಪಂಗಡಗಳ ಜನರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಒದಗಿಸುವ ಕಾಯ್ದೆ ರೂಪಿಸಬೇಕೆಂದು ಆಗ್ರಹಿಸಿದರು.

        ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಹಿರಿಯಮ್ಮ, ಮೈಲಮ್ಮ, ಚನ್ನಮ್ಮ, ಮುತ್ತಮ್ಮ, ಹೊನ್ನಮ್ಮ, ಸಿದ್ದಮ್ಮ, ಮಂಜುಳಾ, ಭಾಗ್ಯ, ಹನುಮಕ್ಕ, ರೇಣುಕಮ್ಮ ಮತ್ತಿತರರು ಭಾಗವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link