ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆ ಅರಿಯಲು ಮುಂದಾದ ಶಾಸಕ ರಂಗನಾಥ್

ಕುಣಿಗಲ್

     ಗ್ರಾಮ ವಾಸ್ತವ್ಯದ ಮೂಲಕ ತಾಲ್ಲೂಕಿನ ಜನರ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳಲು ಮುಂದಾದ ಶಾಸಕ ಡಾ.ರಂಗನಾಥ್ ನಾನು ಶಾಸಕನಲ್ಲ, ನಿಮ್ಮ ಸೇವಕ ಎಂದು ಹೇಳುವ ಮೂಲಕ ಗ್ರಾಮಸ್ಥರ ಸಮಸ್ಯೆಗಳನ್ನು ತಿಳಿದು ಅಲ್ಲೇ ಇದ್ದ ಅಧಿಕಾರಿಗಳಿಗೆ ಸೂಚಿಸಿದರು.

      ತಾಲ್ಲೂಕಿನ ಎಡಿಯೂರು ಹೋಬಳಿ ನಡೆಮಾವಿನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡೋನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ, ಜನರ ಸಮಸ್ಯೆಗಳು ಏನೇ ಇರಲಿ ಸ್ಪಂದಿಸುತ್ತೇನೆ. ನಾನು ಶಾಸಕನಲ್ಲ ನಿಮ್ಮ ಸೇವಕ, ಬಡವರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತೇನೆಂದ ಅವರು, ಮೊದಲ ಬಾರಿಗೆ ಗ್ರಾಮ ವಾಸ್ತವ್ಯವನ್ನು ತಮ್ಮ ಗ್ರಾಮದಿಂದ ಪ್ರಾರಂಭಿಸಿದ್ದೇನೆ. ಇದು ನಿರಂತರವಾಗಿ 36 ಗ್ರಾ.ಪಂ ಗಳಲ್ಲಿ ನಡೆಯುತ್ತದೆ, ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು ನಿಮ್ಮ ಗ್ರಾಮಕ್ಕೆ ಬರುತ್ತಾರೆ. ಸಮಸ್ಯೆಗಳಿದ್ದರೆ ದಾಖಲೆ ನೀಡಿ ಬಗೆಹರಿಸಬಹುದು ಎಂದರು.

     ಪ್ರತಿಯೊಂದು ಗ್ರಾಮಗಳಲ್ಲಿ ಸಾರ್ವಜನಿಕರಲ್ಲಿ ಒಗ್ಗಟ್ಟು ಇದ್ದರೆ ಸಾಧನೆ ಮಾಡುವುದು ಬಲುಸುಲಭ. ಗ್ರಾಮಗಳಲ್ಲಿ ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಇರುವುದು ಸಹಜ. ಆದರೆ ಗ್ರಾಮದ ಹಿರಿಯರಲ್ಲಿ ಜನಪ್ರತಿನಿಧಿಗಳ ಮುಂದೆ ತೋರ್ಪಡಿಸಿ ಪರಿಹಾರ ಕಂಡುಕೊಳ್ಳಬೇಕು, ಬಗೆ ಹರಿಯದ ಪಕ್ಷದಲ್ಲಿ ಕಾನೂನು ಹೋರಾಟ ಪ್ರಾರಂಭಿಸಬೇಕೆಂದು ತೀಕ್ಷ್ಣವಾಗಿ ಹೇಳಿದರು.

    ಪಕ್ಷಾತೀತವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ತಾಲ್ಲೂಕಿನಾದ್ಯಂತ ನಡೆಸುತ್ತಿದ್ದೇನೆ. ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದರು. ಗ್ರಾ.ಪಂ.ವ್ಯಾಪ್ತಿಯಲ್ಲಿ ಸರ್ಕಾರಿ ಖಾಲಿ ಜಾಗ ಲಭ್ಯವಾದರೆ ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿ ನಿವೇಶನ ಹೊಂದಿಲ್ಲದ ಬಡವರಿಗೆ ನೀಡಿ ಮನೆ ಕಟ್ಟಿಸಿ ಕೊಳ್ಳಲು ಸರ್ಕಾರದಿಂದ ಸಹಾಯಧನವನ್ನು ಕೊಡಿಸಲು ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದ ಅವರು, ಸಭೆಯಲ್ಲಿದ್ದ ಗ್ರಾ.ಪಂ. ಜನಪ್ರತಿನಿಧಿಗಳಿಗೆ ಹಾಗೂ ಪಿ.ಡಿ.ಒ. ಹರೀಂದ್ರಗೋಪಾಲ್‍ರವರಿಗೆ ಪಕ್ಷಾತೀತವಾಗಿ ಮನೆ ಹೊಂದಿಲ್ಲದ ಕಡುಬಡವರನ್ನು ಗುರುತಿಸಿ ಪಟ್ಟಿ ನೀಡುವಂತೆ ಸಲಹೆ ನೀಡಿ, ಸರ್ಕಾರದಲ್ಲಿ ಹೋರಾಟಮಾಡಿ ಹೆಚ್ಚು ಮನೆಗಳಿಗೆ ಅನುದಾನ ತರಲು ಪ್ರಯತ್ನಿಸುತ್ತೇನೆಂದರು.

       ರಸ್ತೆಗಳು, ಧನಗಳ ಕೊಟ್ಟಿಗೆ ಶೌಚಾಲಯ ಚರಂಡಿಗಳನ್ನು ಎನ್.ಆರ್.ಇ.ಜಿ ಯಡಿಯಲ್ಲಿ ನಿರ್ಮಾಣ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುವಂತೆ ಪಿ.ಡಿ.ಒ.ಗೆ ಸಲಹೆ ನೀಡಿದರು. ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಶಾಸಕರಲ್ಲಿ ಮನವಿ ಮಾಡಿಕೊಂಡಾಗ ಅವರು ಸ್ಪಂದಿಸಿದರು.

       ತಾಲ್ಲೂಕು ನಡೆಮಾವಿನಪುರ ಗ್ರಾ.ಪಂ. ಅಧ್ಯಕ್ಷರಾದ ಹಸಿನಾಬಾಬು, ಉಪಾಧ್ಯಕ್ಷರಾದ ಸುರೇಶ ಮಾತನಾಡಿದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಸಂತಕುಮಾರಿಸುರೇಶ್, ತಾ.ಪಂ.ಇ.ಓ ಶಿವರಾಜಯ್ಯ, ಸಹಾಯಕ ನಿರ್ದೇಶಕ ನರಸಿಂಹಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಮಾಜಿ.ತಾ.ಪಂ ಸದಸ್ಯೆ ತೇಜಸ್ವಿನಿಗಿರೀಶ್‍ಬಾಬು, ಗ್ರಾ.ಪಂ.ಸದಸ್ಯರುಗಳಾದ ಉಮೇಶ್, ಗುರುಪ್ರಸಾದ್, ಗಂಗಾಧರಯ್ಯ ಹಾಗೂ ಜೆ.ಸಿ.ಬಿ ರಾಜಣ್ಣ ಸೇರಿದಂತೆ ಹಲವರಿದ್ದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link