ಹಾವೇರಿ :
ದೂರದರ್ಶನ ಹಾಗೂ ಜಂಗಮವಾಣಿಯ ಮಾನಸಿಕತೆಯ ಹಾವಳಿಯಿಂದಾಗಿ ಶಾಸ್ತ್ರೀಯ ಸಂಗೀತದಂತಹ ಕಾರ್ಯಕ್ರಮಗಳು ನಶಿಸಿ ಹೋಗುತ್ತಿದ್ದು, ಅಪಾಯಕಾರಿ ಬೆಳವಣಿಯಾಗಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಹೊಸರಿತ್ತಿಯ ಕೃಷ್ಣಾ ಚಿತ್ರಮಂದಿರದಲ್ಲಿ ನಡೆದ ದೀಪೋತ್ಸವ ಹಾಗೂ 119ನೇ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದಾಗಿ ಇಂತ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಘಟಿಸುವುದು ಒಂದು ರೀತಿಯ ಕಷ್ಟದಾಯಕ ಕೆಲಸ. ಆದರೆ, ಇಂಥ ಕಷ್ಟ ಕಾಲದಲ್ಲಿಯೂ ಗುದ್ದಲೀಶಿವಯೋಗಿಶ್ವರ ಸ್ವಾಮೀಜಿ ಮಠದ ವತಿಯಿಂದ ನಿರಂತರ 119 ವರ್ಷಗಳಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಅವರು ಬಣ್ಣಿಸಿದರು.
ಇಂಥ ಅಭೂತಪೂರ್ವ ಸಂಗೀತ ಕಾರ್ಯಕ್ರಮ ನಿರಂತರವಾಗಿ ನಡೆದುಕೊಂಡು ಬರಲು ಈ ಭಾಗದ ಸಂಗೀತ ಪ್ರೀಯರ ಸಹಕಾರವೂ ಮುಖ್ಯವಾಗಿದ್ದು, ಇಂಥ ಪುಣ್ಯಭೂಮಿಯಲ್ಲಿ ಸುಗಮ ಸಂಗೀತದಂತಹ ಇಂತ ಹತ್ತು ಹಲವು ಕಾರ್ಯಕ್ರಮಗಳು ನಿರಂತರ ಜರುಗಲಿ ಎಂದು ಕರಿಯಣ್ಣನವರ ಆಶಿಸಿದರು.
ಗುದ್ದಲೀ ಶಿವಯೋಗಿಶ್ವರ ಸ್ವಾಮಿಗಳವರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ಜರುಗಿತು. ಶಿವಮೊಗ್ಗದ ಮೆಗ್ಗಾನ್ ವೈದ್ಯಕೀಯ ಕಾಲೇಜಿನ ಡೀನ್ ಡಾ|| ಬಿ.ಜಿ.ಲೆಪಾಕ್ಷಿ. ದಾವಣಗೆರೆ ಸ್ತ್ರೀ ರೋಗ ತಜ್ಞರಾದ ಎಂ.ಎಸ್.ಹಿರೇಮಠ ಮುಖ್ಯ ಆತಿಥಿಗಳಾಗಿ ಆಗಮಿಸಿದ್ದರು. ಸಹನಾ ಭಟ್‍ರವರ ನಾಟ್ಯಾಂಜಲಿ ನೃತ್ಯ ಕಲಾ ತಂಡದವರಿಂದ ನೃತ್ಯ ರೂಪಕ ಹಾಗೂ ಹೊಸರಿತ್ತಿಯ ಒಂದೇ ಭಾರತೀಯ ಡಾನ್ಸ್ ಅಕ್ಯಾಡಮಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.
ಸಂಗೀತೋತ್ಸವದಲ್ಲಿ ಅಡಿವೆಪ್ಪ ಭಜಂತ್ರಿ ಶಹನಾಯಿ ವಾದನ, ವಾಣಿ ಹರ್ಡೇಕರ, ಅನುರಾಗ ಗದ್ದಿ, ಹೊಳೆಯಪ್ಪ ಗವಾಯಿ, ಭಾಗ್ಯಮ್ಮ ಕೋಡಬಾಳ, ಪ್ರತಿಮಾ ಜೋಶಿ ಹಾಗೂ ನಂದಾ ಮಲ್ಲನಗೌಡ್ರ ಸಂಗೀತೋತ್ಸವದಲ್ಲಿ ಭಾಗವಹಿಸಿದ್ದರು.
ಬಸಲಿಂಗಯ್ಯ ಹಿರೇಮಠ, ವಾದಿರಾಜ ಜೋಷಿ, ದಿಂಗಾಲೇಶ ಕುಮಾರಮಠ ಹಾಗೂ ಗುರದತ್ತ ನಾಡಗೇರ ಇವರು ತಬಲಾ ಸಾತ್ ನೀಡಿದರು. ಪುಟ್ಟ ಬಾಲಕ ಆದಿತ್ಯ ಜೋಶಿ ಕೊಳಲು ವಾದನವನ್ನು ನುಡಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಸಂಗೀತೋತ್ಸವ ಕಾರ್ಯಕ್ರಮದ ಸಂಚಾಲಕ ಸಿದ್ದರಾಜ ಕಲಕೋಟಿ ಕಾರ್ಯಕ್ರಮ ನಿರೂಪಿಸಿದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
