ಮೊಬೈಲ್ ತ್ಯಜಿಸಿ ಚೆಸ್ ಆಸಕ್ತಿ ಬೆಳೆಸಿಕೊಳ್ಳಿ

ತುಮಕೂರು

     ನಗರದಲ್ಲಿ ಎರಡು ದಿನಗಳಿಂದ ನಡೆದ ಕರ್ನಾಟಕ ರಾಜ್ಯ ಮುಕ್ತ ರ್ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಪಂದ್ಯಾವಳಿಯಲ್ಲಿ ನಗರದ ಶೇಟ್ ಪ್ರಜ್ವಲ್ ಪಿ ಅವರು ರ್ಯಾಪಿಡ್ ಹಾಗೂ ಬ್ಲಿಟ್ಜ್ ಎರಡೂ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದು ಶ್ರೀ ನಾಗಣ್ಣ ಹಾನರಬಲ್ ಅವಾರ್ಡ್ ಪಡೆದರು.

     ಬೆಂಗಳೂರಿನ ಪಾರ್ಥಸಾರಥಿ ರ್ಯಾಪಿಡ್ ವಿಭಾಗದಲ್ಲಿ ಹಾಗೂ ಬ್ಲಿಟ್ಜ್ ವಿಭಾಗದಲ್ಲಿ ಬೆಂಗಳೂರಿನ ಲಿಖಿತ್ ಚಿಲುಕಿರಿ ರನ್ನರ್‍ಅಪ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ಶೇಟ್ ಪ್ರಜ್ವಲ್ ಜೊತೆ ರನ್ನರ್‍ಅಪ್‍ಗಳಿಬ್ಬರೂ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

    ನ್ಯೂ ತುಮಕೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಹಾಗೂ ಗ್ರಾಂಡ್ ಚೆಸ್ ಅಕಾಡೆಮಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಭಾನುವಾರ ಸಂಜೆ ನಡೆದ ಸಮಾರೋಪದಲ್ಲಿ ವಿವಿಧ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.

    ಸಮಾರಂಭದ ಸಾನಿಧ್ಯವಹಿಸಿದ್ದ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೌದ್ಧಿಕ ಕಸರತ್ತಿಗೆ ಚೆಸ್ ಉಪಯುಕ್ತ ಕ್ರೀಡೆ, ಕುಳಿತಲ್ಲೇ ಕುಬೇರರಾಗುವ ಬುದ್ಧಿವಂತರ ಆಟ ಎಂದರು.

     ಚದುರಂಗಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಕೃಷ್ಣ-ರುಕ್ಮಿಣಿ, ಶಿವ-ಪಾರ್ವತಿ ಚದುರಂಗ ಆಡುತ್ತಿದ್ದರೆಂದು ಪುರಾಣ ಹೇಳುತ್ತದೆ. ಭಾರತದಿಂದ ಆರಂಭವಾದ ಚೆಸ್ ವಿದೇಶಗಳಿಗೂ ವಿಸ್ತರಿಸಿ ಇಂದು ಜನಪ್ರಿಯ ಕ್ರೀಡೆಯಾಗಿದೆ. ಚೆಸ್ ಭಾರತದ ಕೊಡುಗೆ ಎಂದು ಹೇಳಿದರು.

       ಬುದ್ಧಿಯನ್ನು ಮತ್ತೆ ಮತ್ತೆ ಬಳಸಿ ಚುರುಕುಗೊಳಿಸಿಕೊಳ್ಳಲು ಚೆಸ್ ಆಡಬೇಕು. ಸ್ಮಾಟ್ ಫೋನ್‍ಗಳಲ್ಲಿ ಕಾಲಹರಣ ಮಾಡುವ ಮಕ್ಕಳಲ್ಲಿ ಚೆಸ್ ಆಟದ ಬಗ್ಗೆ ಆಸಕ್ತಿ ಮೂಡಿಸಿ ಅವರನ್ನು ಸ್ಮಾರ್ಟ್‍ಗೊಳಿಸಿ ಎಂದು ಸ್ವಾಮೀಜಿ ಪೋಷಕರಿಗೆ ಸಲಹೆ ಮಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಬುದ್ಧಮತ್ತೆ ಹೆಚ್ಚಳಕ್ಕೆ ಚೆಸ್ ಸಹಕಾರಿ, ಮಕ್ಕಳು ಚೆಸ್‍ನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು, ಅದು ಭವಿಷ್ಯದಲ್ಲಿ ಖಚಿತ ನಿರ್ಧಾರ ಕೈಗೊಳ್ಳಲು ಹಾಗೂ ಆತ್ಮವಿಶ್ವಾಸ ಮೂಡಿಸಲು ನೆರವಾಗುತ್ತದೆ ಎಂದರು.

    ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಎಸ್. ನಾಗಣ್ಣ ಅವರು ಮಾತನಾಡಿ, ಚೆಸ್ ಆಟದಿಂದ ಏಕಾಗ್ರತೆ, ಚಿಂತನೆ, ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ. ಬೌದ್ಧಿಕ ಶಿಸ್ತು ಮೂಡುತ್ತದೆ. ಅಧ್ಯಯನ ಆಸಕ್ತಿ ಬೆಳೆಯುತ್ತದೆ, ತರಗತಿಯಲ್ಲಿ ಪಾಠ ಕೇಳುವ ಆಸಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

     ಮಕ್ಕಳ ಬೌದ್ಧಿಕ ಬೆಳವಣಿಗೆಗೆ ನೆರವಾಗುವ ಚೆಸ್ ಆಟದ ಬಗ್ಗೆ ಪೋಷಕರು ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕು ಎಂದು ಸಲಹೆ ಮಾಡಿದರು.
ನಗರ ಪಾಲಿಕೆ ಮೇಯರ್ ಫರೀದಾ ಬೇಗಂ ಮಾತನಾಡಿ, ಮಕ್ಕಳ ಬೌಧ್ಧಿಕ ಚಟುವಟಿಕೆಗಳನ್ನು ಪೋಷಕರು ಪ್ರೋತ್ಸಾಹಿಸಬೇಕು. ಚೆಸ್‍ನಂತಹ ಕ್ರೀಡೆ ಮಕ್ಕಳ ಏಕಾಗ್ರತೆ, ಗುರಿ ಸಾಧನೆಯ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ಹೇಳಿದರು

     ನ್ಯೂ ತುಮಕೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಪ್ರಜಾಪ್ರಗತಿ ಪತ್ರಿಕೆ ಸಹ ಸಂಪಾದಕ ಟಿ.ಎನ್. ಮಧುಕರ್ ಮಾತನಾಡಿ, ಚೆಸ್ ಪಂದ್ಯಾವಳಿ ಯಶಸ್ವಿಯಾಗಲು ಸಹಕರಿಸಿದ ಸ್ಪರ್ಧಿಗಳು, ಅವರ ಪೋಷಕರು ಉತ್ತಮ ಸಹಕಾರ ನೀಡಿದರು ಎಂದು ಅಭಿನಂದಿಸಿದರು.

      ಜುಲೈನಲ್ಲಿ ತುಮಕೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಆಯೋಜಿಸುವ ಅವಕಾಶ ದೊರಕಿದೆ ಎಂದು ಹೇಳಿದರು.
ಯುಕೆಸಿಎ ಕಾರ್ಯದರ್ಶಿ ಹನುಮಂತು, ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದ ಅಧ್ಯಕ್ಷ ಕುಂಭಯ್ಯ, ಅಸೋಸಿಯೇಷನ್ ಮುಖಂಡರಾದ ಅಖಿಲಾನಂದ, ಮಂಜುನಾಥ ಜೈನ್ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap