ನೀರಿಲ್ಲದೆ ಒಣಗಿದ ತಾಲ್ಲೂಕಿನ ಕೆರೆಗಳು..!!

ಚಿಕ್ಕನಾಯಕನಹಳ್ಳಿ

       ಸರ್ಕಾರದ ವತಿಯಿಂದ ರೂಪಿಸಲ್ಪಡುವ ಕೆಲಸಗಳು, ಯೋಜನೆಗಳೆಂದರೆ ಜನಸಾಮಾನ್ಯರಲ್ಲಿ ಮೂಡವ ಮೊದಲ ಪ್ರಶ್ನೆಯೇ ಎಷ್ಟು ವರ್ಷ ಬೇಕು, ಯೋಜನೆ ನಿಜವಾಗಿಯೂ ಪೂರ್ಣಗೊಳ್ಳುತ್ತದೆಯೇ ಎಂಬ ಮಾತು. ಅಂತಹ ಯೋಜನೆಗಳಲ್ಲಿ ಕೆರೆಕಟ್ಟೆಗಳನ್ನು ಸಂರಕ್ಷಿಸುವ, ಅಂತರ್ಜಲ ವೃದ್ಧಿಸುವ ಯೋಜನೆಯೂ ಒಂದು. ಈ ಯೋಜನೆಯೂ ಸಹ ತಾಲ್ಲೂಕಿನಲ್ಲಿ ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕುಂಟುತ್ತಾ ಸಾಗುತ್ತಿದೆ.

      ಬೇಸಿಗೆ ಕಾಲದಲ್ಲಿ ಕೆರೆಕಟ್ಟೆಗಳು ಒಣಗಿದಾಗ ಕೆರೆಯಲ್ಲಿನ ಹೂಳು ಎತ್ತುವ ಕಾಮಗಾರಿಗಳು ನಡೆದರೆ ಮಳೆ ಬಂದಾಗ ಕೆರೆಯಲ್ಲಿ ಮಳೆ ನೀರನ್ನು ಯಥೇಚ್ಛವಾಗಿ ಸಂಗ್ರಹಿಸಬಹುದು ಎಂದು ಕೆರೆ ಸಂಜೀವಿನಿ ಯೋಜನೆಯನ್ನು ಸರ್ಕಾರ ರೂಪಿಸಿದೆ. ಈ ಯೋಜನೆ ಮೂಲಕ ನೀರಿನ ಸಂಗ್ರಹ ಹೆಚ್ಚಿಸುವ ಕ್ರಮ ಹೊಂದಿದೆ. ಈ ಕೆರೆ ಸಂಜೀವಿನಿ ಯೋಜನೆ 2016ರಲ್ಲಿ ಆರಂಭವಾಗಿತ್ತು, ಕೆರೆ ಅಭಿವೃದ್ದಿ ಪ್ರಾಧಿಕಾರದ ಮೂಲಕ ಸರ್ಕಾರ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿ ಯೋಜನೆ ಪೂರ್ಣಗೊಳಿಸಲು ಸೂಚಿಸಿತ್ತು. ಅದರಂತೆ ತಾಲ್ಲೂಕಿಗೆ ಕಳೆದ ವರ್ಷ ಬಂದ ಈ ಯೋಜನೆಯು ಇನ್ನೂ ಸಹ ಪೂರ್ಣಗೊಳ್ಳದಿರುವುದು ದುರದೃಷ್ಟಕರ.

        ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಕೆರೆ ಸಂಜೀವಿನಿ ಯೋಜನೆ ಅಡಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಗೋಪಾಲಪುರ ಕೆರೆ, ಹಂದನಕೆರೆ, ಸಿದ್ದನಕಟ್ಟೆ ಕೆರೆ, ಜೋಡಿತಿಮ್ಮಲಾಪುರ ಕೆರೆ, ದೊಡ್ಡ ಎಣ್ಣೆಗೆರೆಕೆರೆ, ಗೋಪಾಲನಹಳ್ಳಿಕೆರೆ, ಬೆಳ್ಳಾರಹೊಸಕೆರೆ ಈ 7 ಕೆರೆಗಳನ್ನು ಯೋಜನೆಯಡಿ ಗುರುತಿಸಲಾಗಿದ್ದು ಈ ಕೆರೆಗಳಲ್ಲಿ ಸಿದ್ದನಕಟ್ಟೆ, ಗೋಪಾಲನಹಳ್ಳಿ, ಜೋಡಿ ತಿಮ್ಲಾಪುರ ಕೆರೆಗಳು ಮಾತ್ರ ಪೂರ್ಣಗೊಂಡಿವೆ. ಉಳಿದ ಕೆರೆಗಳು ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಯೋಜನೆಗೆ ಕೈ ಹಾಕದಿರುವುದು ಬೇಸರದ ಸಂಗತಿ.

       ಕೆರೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಾಲ್ಲೂಕಿನಲ್ಲಿ ಗುರುತಿಸಿರುವ ಕೆರೆಯೊಂದಕ್ಕೆ 4ಲಕ್ಷದಂತೆ 7ಕೆರೆಗಳಿಗೆ 28ಲಕ್ಷ ರೂ. ಬಿಡುಗಡೆಯಾಗಿದೆ. ಅದರಲ್ಲಿ ಸಿದ್ದನಕಟ್ಟೆ, ಗೋಪಾಲನಹಳ್ಳಿ, ಜೋಡಿ ತಿಮ್ಲಾಪುರ ಮೂರು ಕೆರೆಗಳ ಕಾಮಗಾರಿ ಪೂರ್ಣಗೊಂಡಿದೆ, ಉಳಿದ ಕೆರೆಗಳು ಚುನಾವಣೆ ಇದ್ದುದರಿಂದ ತಡವಾಗಿದೆ ಶೀಘ್ರವೇ ಯೋಜನೆಗೆ ಆರಂಭಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

        ಕೆರೆ ಸಂಜೀವಿನಿ ಯೋಜನೆಯಡಿಯಲ್ಲಿ ಕೆರೆ ಹೂಳನ್ನು ಕೆಲವು ಕಡೆ ಅವೈಜ್ಞಾನಿಕವಾಗಿ ತೆಗೆಯಲಾಗುತ್ತಿದೆ. ಅಲ್ಲದೆ ಹೂಳು ಎತ್ತುವ ನೆಪದಲ್ಲಿ ಮರಳು ನಿಕ್ಷೇಪಗಳನ್ನು ಗುರುತಿಸಿ ರಾತ್ರಿ ವೇಳೆ ಮರಳು ಸಾಗಾಣೆ ನಡೆಸಲಾಗುತ್ತಿದೆ ಎಂಬುವ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ.

    ಕೆರೆಗೆ ನೀರನ್ನು ಒದಗಿಸಲು ಇರುವ ರಾಜಕಾಲುವೆಗಳನ್ನು ದುರಸ್ತಿಗೊಳಿಸದೆ, ಕೇವಲ ಹೂಳು ಎತ್ತುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಕೆಲವು ಕೆರೆಗಳ ರಾಜಕಾಲುವೆಗಳು ಒತ್ತುವರಿಯಾಗಿವೆ, ಒತ್ತುವರಿ ತೆರವುಗೊಳಿಸಿ ಮುಚ್ಚಿ ಹೋಗಿರುವ ರಾಜಕಾಲುವೆಯನ್ನು ದುರಸ್ತಿ ಪಡಿಸದೆ ಕೇವಲ ಕೆರೆಯ ಒಳಗಡೆ ಹೂಳು ತೆಗೆದರೆ ಉಪಯೋಗವಿಲ್ಲ ಎಂದು ರೈತರು ದೂರುತ್ತಾರೆ.
ಕೆರೆ ಪುನಶ್ಚೇತನಕ್ಕೆ-ಧರ್ಮಸ್ಥಳ ಸಂಸ್ಥೆ ಮಾದರಿ : ತಾಲ್ಲೂಕಿನ ಆಲದಕಟ್ಟೆ ಕೆರೆ ಹಾಗೂ ನಂದಿಹಳ್ಳಿ ಕೆರೆಯ ಹೂಳನ್ನು ತೆಗೆದು ಆ ಕೆರೆಗಳಿಗೆ ನೀರು ಸರಾಗವಾಗಿ ಹರಿದು ಬರಲು ರಾಜಕಾಲುವೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆರೆಗೆ ಹಣ ಬಿಡುಗಡೆ ಮಾಡಿ ಕೇವಲ 38 ದಿನದೊಳಗೆ ಯೋಜನೆಯನ್ನೂ ಪೂರ್ಣಗೊಳಿಸಿದೆ.
ಧರ್ಮಸ್ಥಳ ಸಂಸ್ಥೆ “ನಮ್ಮೂರು ನಮ್ಮ ಕೆರೆ” ಎನ್ನುವ ಕಾರ್ಯಕ್ರಮದಡಿಯಲ್ಲಿ ಕೆರೆ ಪುನಶ್ಚೇತನಗೊಳಿಸುವ ಕೆಲಸಕ್ಕೆ ಮುಂದಾಗಿತ್ತು. ಅದರಂತೆ ನಂದಿಹಳ್ಳಿ ಹಾಗೂ ಆಲದಕಟ್ಟೆ ಕೆರೆಯನ್ನು ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಗ್ರಾಮೀಣ ಸಹಭಾಗಿತ್ವದೊಂದಿಗೆ ಪಡೆದುಕೊಂಡು ಕೆರೆ ಪುನಶ್ಚೇತನಗೊಳಿಸಿದೆ, ಜೊತೆಗೆ ಈ ಯೋಜನೆಯಲ್ಲಿ ರಾಜಕಾಲುವೆಯ ನಿರ್ಮಾಣದಿಂದ ರೈತರ ಕೃಷಿ ಭೂಮಿಗಳಿಗೆ ನೀರು ಒದಗಿಸುವ ಜೊತೆಯಲ್ಲಿ ಕೆರೆಯ ಏರಿಯ ಮೇಲೆ ರೈತರು ಹಾಗೂ ಜಾನುವಾರುಗಳು ಓಡಾಡಲು 1.5 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಕೆರೆಗೆ ನೀರು ಸರಾಗವಾಗಿ ಹರಿದು ಬರಲು ರಾಜಕಾಲುವೆಯನ್ನು ಸಂಪೂರ್ಣವಾಗಿ ದುರಸ್ತಿ ಮಾಡಿದೆ ಹಾಗೂ ಇಲ್ಲಿ ಸುತ್ತಮುತ್ತಲ ಮಳೆಯ ನೀರು ಹರಿದು ಬರುತ್ತದೆ, ಕೆರೆಯು 10 ಎಕರೆ ವಿಸ್ತೀರ್ಣ ಪುನಶ್ಚೇತನಗೊಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರೈತರು ತಮ್ಮ ಜಮೀನಿಗಳಿಗೆ ಮಣ್ಣನ್ನು ಒಡೆದುಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap