ಬೆಂಗಳೂರು
ದೇಶದಲ್ಲಿ ಮಾನವನ ಚರ್ಮಕ್ಕೆ ಜಾತಿವಾದದ ಸ್ಪರ್ಶವನ್ನು ಅಂಟಿಸಿ, ಕೋಮುವಾದದ ಕನ್ನಡಕವನ್ನು ಹಾಕಿ ಪ್ರಜಾಪ್ರಭುತ್ವಕ್ಕೆ ಅವಮಾನಗೊಳಿಸಲಾಗುತ್ತಿದೆ ಎಂದು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ನಾಲಿಗೆ ನಾಗರವಾಗುತ್ತಿದೆ. ಇದಕ್ಕೆ ಇತ್ತೀಚಿನ ಚುನಾವಣೆಗಳೇ ಸಾಕ್ಷಿಯಾಗಿದೆ. ಬಾಯಿಗಳು ಬಂದೂಕದಂತೆ ವರ್ತಿಸಿವೆ.
ದೇಶ ಪ್ರಗತಿಯತ್ತ ಸಾಗುತ್ತಿದ್ದರೂ ಜಾತಿವಾದ, ಕೋಮುವಾದದ ಕೊಳಕು ರೂಪ ಅಂಟಿಕೊಂಡಿದೆ ಎಂದು ವಿಷಾದಿಸಿದರು.
ದಲಿತ ಚೇತನ ಬಿ.ಕೃಷ್ಣಪ್ಪ ಅವರ 81ನೇ ಜನ್ಮ ದಿನಾಚರಣೆ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಾಮಾಜಿಕ ಸಮಾನತೆಗಾಗಿ ಸಂಘರ್ಷ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಂಚೇಂದ್ರಿಯಗಳನ್ನು ನಾಶಪಡಿಸುವುದು ಇಂದಿಗೂ ಮುಂದುವರೆದಿದೆ ಎಂದು ಅವರು ಹೇಳಿದರು.
ಮಲ ಹೊರುವವರ ಸಂಖ್ಯೆಯನ್ನು ಸರ್ಕಾರ ನಿಖರವಾಗಿ ಹೇಳುತ್ತಿಲ್ಲ. ಒಂದು ಅಂಕಿ ಅಂಶದ ಪ್ರಕಾರ ದೇಶದಲ್ಲಿ ಒಂದು ಕೋಟಿ 70 ಲಕ್ಷ 286 ಜನರಿದ್ದಾರೆ. ಆದರೆ ಸ್ವಚ್ಛ ಭಾರತದ ಪರಿಕಲ್ಪನೆಯ ಬಗ್ಗೆ ಮಾತನಾಡಲಾಗುತ್ತಿದೆ ಎಂದು ಅವರು ಹೇಳಿದರು.ಮಾಜಿ ಸಚಿವ ಎಚ್.ಆಂಜನೇಯ, ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಬಿ.ಕೃಷ್ಣಪ್ಪ ಟ್ರಸ್ಟ್‍ನ ಮುಖ್ಯಸ್ಥ ಇಂದಿರಾ ಕೃಷ್ಣಪ್ಪ, ಕರ್ನಾಟಕ ಸರ್ಕಾರಿ ನೌಕರರ ಸಮನ್ವಯ ಸಮಿತಿ, (ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ) ಮುಖ್ಯ ಸಲಹೆಗಾರ ಚಂದ್ರೇಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.