ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಅವಶ್ಯ

ದಾವಣಗೆರೆ:

    ಗ್ರಾಮೀಣ ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಅಭಿಪ್ರಾಯಪಟ್ಟರು.

     ನಗರದ ಎಸ್.ಎಸ್.ಬಡಾವಣೆಯ ಸುಭಾಷ್‍ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಹಯೋಗದಲ್ಲಿ ಏರ್ಪಡಿಸಿದ್ದ 14ರಿಂದ 17 ವಯೋಮಿತಿಯ ಶಾಲಾ ಬಾಲಕ ಮತ್ತು ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಷಟಲ್ ಬ್ಯಾಟ್‍ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಗ್ರಾಮೀಣ ಕ್ರೀಡಾಪಟುಗಳಿಗೆ ಒಳ ಕ್ರೀಡಾಂಗಣ ಇರಲಿ, ಸೂಕ್ತವಾದ ಮೈದಾನವೂ ಇರುವುದಿಲ್ಲ. ಆದರೆ, ಕೆಲ ಸಂದರ್ಭಗಳಲ್ಲಿ ಹೋಲಗಳಲ್ಲಿಯೇ ಮೈದಾನ ಮಾಡಿಕೊಂಡು ಆಡುತ್ತಾರೆ. ಆದರೂ ಗ್ರಾಮೀಣ ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡುತ್ತಿದ್ದಾರೆ.

    ಆದ್ದರಿಂದ ಗ್ರಾಮೀಣ ಪಟುಗಳಿಗೆ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ ಎಂದರು.ಇಲ್ಲಿರುವ ಕ್ರೀಡಾಪಟುಗಳನ್ನು ನೋಡಿದರೆ ನಮ್ಮ ಬಾಲ್ಯ ನೆನಪಾಗುತ್ತದೆ. ನಾನು ಸಹ ಷಟಲ್ ಬ್ಯಾಟ್‍ಮಿಂಟನ್ ಆಡುತ್ತಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಸ್ಪರ್ಧಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ. ಸತತ ಅಭ್ಯಾಸ ಮಾಡುವುದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

    ಮೇಯರ್ ಶೋಭಾ ಪಲ್ಲಾಗಟ್ಟೆ ಮಾತನಾಡಿ, ಮಕ್ಕಳ ಗುರು ಯಾವತ್ತೂ ಆಟ ಮತ್ತು ಓದಿನ ಕಡೆಗೆ ಇರಬೇಕು. ಚೆನ್ನಾಗಿ ಆಟವಾಡಿ, ಪಾಠ ಓದಿ ನಿಮ್ಮ ತಂದೆ-ತಾಯಿ ಹಾಗೂ ಗುರುಗಳಿಗೆ ಗೌರವ ತರುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

    ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ರಶ್ಮಿ ರಾಜಪ್ಪ ಮಾತನಾಡಿ, ನಾನು ಸಹ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದೆ. ಆದರೆ, ಮನೆಯಲ್ಲಿ ಮದುವೆ ಮಾಡಿಸಿ ಬಿಟ್ಟರು. ಹೀಗಾಗಿ ಕ್ರೀಡಾ ಕ್ಷೇತ್ರದಲ್ಲಿ ಮುಂದುವರೆಯಲಾಗಲಿಲ್ಲ. ಮಕ್ಕಳಿಗೆ ಆಟ ಮತ್ತು ಪಾಠ ಎರಡೂ ಮುಖ್ಯವಾಗಿದ್ದು, ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕೆಂದು ಸಲಹೆ ನೀಡಿದರು.

    ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧೆಯೇ ಮುಖ್ಯವಾಗಿದೆ. ಆದ್ದರಿಂದ ಸ್ಪರ್ಧಾತ್ಮ ಮನೋಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ತೀರ್ಪುಗಾರರು ತಾರತಮ್ಯ ಮಾಡದೇ, ಅತ್ಯುತ್ತಮ ತೀರ್ಪು ನೀಡುವ ಮೂಲಕ ಅರ್ಹರನ್ನು ಆಯ್ಕೆ ಮಾಡಿ, ರಾಜ್ಯ ಮಟ್ಟಕ್ಕೆ ಕಳುಹಿಸಬೇಕೆಂದು ಹೇಳಿದರು.

    ಈ ಪಂದ್ಯಾವಳಿಯಲ್ಲಿ ಬೆಂಗಳೂರು ವಿಭಾಗ ಮಟ್ಟದ ಬೆಂಗಳೂರು, ರಾಮನಗರ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಒಟ್ಟು 11 ಜಿಲ್ಲೆಗಳ 44 ತಂಡಗಳು ಭಾಗವಹಿಸಿವೆ.

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ಎ.ರವೀಂದ್ರನಾಥ್ ವಹಿಸಿದ್ದರು. ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಬಿ.ಆರ್.ಬಸವರಾಜಪ್ಪ, ಶಿಕ್ಷಣಾಧಿಕಾರಿ ಎಂ.ನಿರಂಜನಾಮೂರ್ತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ಮತ್ತಿಯರರು ಉಪಸ್ಥಿತರಿದ್ದರು. ಶಿಕ್ಷಕಿ ಮಂಜುಳಾ.ಹೆಚ್ ಪ್ರಾರ್ಥಿಸಿದರು. ದೈಹಿಕ ಶಿಕ್ಷಣಾಧಿಕಾರಿ ಪಿ.ಕೊಟ್ರೇಶ್ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap